ಕೊಪ್ಪಳ: ಕೊಪ್ಪಳ ತಾಲೂಕಿನ ಅಳವಂಡಿ- ಬೆಟಗೇರಿ ಏತನೀರಾವರಿ ಯೋಜನೆಯಡಿ ಭೂಸ್ವಾಧೀನಕ್ಕೆ ಒಳಗಾದ ವಿವಿಧ ಗ್ರಾಮಗಳ ಜಮೀನಿನ ಮಾಲೀಕರಿಗೆ ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಾಗೂ ರೈತರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಡಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ರೈತರ ಆಕ್ಷೇಪಣೆ ಹಾಗೂ ನಿರ್ಮಾಣ ಕಾಮಗಾರಿಗೆ ಇರುವ ತೊಂದರೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಸರ್ವಿಸ್ ರಸ್ತೆ ನಿರ್ಮಾಣ ಕುರಿತಂತೆ ಇರುವ ರೈತರ ಆಕ್ಷೇಪಣೆಗಳನ್ನು ಮೊದಲು ಆಲಿಸಬೇಕು. ರಸ್ತೆ ನಿರ್ಮಾಣದಿಂದ ಆ ಪ್ರದೇಶ ವ್ಯಾಪ್ತಿಯ ರೈತರಿಗೆ ಇರುವ ಅನುಕೂಲತೆಗಳ ಕುರಿತು ರೈತರಿಗೆ ತಿಳಿವಳಿಕೆ ನೀಡಿ ಅವರ ಮನವೊಲಿಸಲು ಪ್ರಯತ್ನಿಸಬೇಕು ಎಂದರು.
ಭೂಸ್ವಾಧೀನ ಪ್ರಕ್ರಿಯೆ ಕುರಿತಂತೆ ರೈತರಿಗೆ ನೋಟಿಸ್ ನೀಡುವಾಗ ಕಂದಾಯ ಇಲಾಖೆ ಸಿಬ್ಬಂದಿಯನ್ನು ಬಳಸಿಕೊಂಡು ನಿರ್ಧಿಷ್ಟ ಜಮೀನಿನ ಮಾಲೀಕರಿಗೆ ಮಾತ್ರ ನೋಟಿಸ್ ನೀಡಬೇಕು. ಈ ಕುರಿತು ರೈತರಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಎಚ್ಚರವಹಿಸಿ. ಕಾಮಗಾರಿಗಳಿಗೆ ನಿಗದಿಪಡಿಸಿದ ಜಮೀನಿನ ಪ್ರದೇಶವನ್ನು ಹೊರತುಪಡಿಸಿ ಇನ್ನುಳಿದ ಜಮೀನನ್ನು ಕಾಮಗಾರಿಗೆ ಸಂಬಂಧಿಸಿದ ಯಾವುದೇ ಸಾಮಾಗ್ರಿಗಳನ್ನು ಸಂಗ್ರಹಿಸಲು ಅಥವಾ ಕಾಮಗಾರಿ ವಾಹನಗಳ ಬಳಕೆಯಾಗದಂತೆ ನೋಡಿಕೊಳ್ಳಿ. ಇದರಿಂದ ರೈತರು ಈಗಾಗಲೇ ಬಿತ್ತನೆ ಮಾಡಿದ ಪ್ರದೇಶಕ್ಕೆ ಉಂಟಾಗುವ ಹಾನಿ ತಡೆಯಬಹುದು ಎಂದರು.
ಜೆಎಂಸಿ (ಜಂಟಿ ಮಾಪನ ವರದಿ) ಮಾಡಲು ಕೆಲ ರೈತರು ಅಡ್ಡಿ ಪಡಿಸುತ್ತಿರುವುದರಿಂದ ಅವರಿಗೆ ಬರಬೇಕಾದ ಪರಿಹಾರ ಮೊತ್ತ ನಿರ್ಧಿಷ್ಟಪಡಿಸುವಲ್ಲಿ ಹಾಗೂ ವಿತರಿಸುವಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ರೈತರು ನಿಯಮಾನುಸಾರ ಸರ್ವೇ ಮಾಡಲು ಅನುವು ಮಾಡಿಕೊಡಲು ಅಧಿಕಾರಿಗಳೊಂದಿಗೆ ಸಹಕರಿಸಿದರೆ, ಸರ್ವೇ ಕಾರ್ಯ ತ್ವರಿತವಾಗಿ ನಡೆದು ಕಾಮಗಾರಿ ಪೂರ್ಣಗೊಳ್ಳಲು ಅನುಕೂಲವಾಗಲಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ರೈತರಿಗೆ ಮನವರಿಕೆ ಮಾಡಿದರು.
ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆ ವ್ಯಾಪ್ತಿಯಲ್ಲಿರುವ ಗ್ರಾಮಗಳ ರೈತರು, ತಮಗೆ ಯಾವುದೇ ಮಾಹಿತಿ ನೀಡದೇ ಗುತ್ತಿಗೆದಾರರು ನಮ್ಮ ಜಮೀನಿನಲ್ಲಿ ಕಾಮಗಾರಿ ಆರಂಭಿಸುತ್ತಾರೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ಕಾಮಗಾರಿ ನಡೆಯುವ ಜಮೀನಿನ ಮಾಲೀಕರಿಗೆ ಸೂಕ್ತ ಮಾಹಿತಿ ನೀಡಿ ನಂತರ ಕಾಮಗಾರಿಗಳನ್ನು ಕೈಗೊಳ್ಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ, ಕೊಪ್ಪಳ ತಹಶೀಲ್ದಾರ್ ಜೆ.ಬಿ. ಮಜಗಿ, ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜನಿಯರ್ ನಾಗಭೂಷಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಸಭೆಯಲ್ಲಿ ಉಪಸ್ಥಿತರಿದ್ದರು.