ಕುಂಬಳೆ: ಕಲೆಯನ್ನು ಆರಾಧನೆ ಯಾಗಿ ಕಂಡುಕೊಂಡ ಸಂಸ್ಕೃತಿ ನಮ್ಮ ಮಣ್ಣಿನ ಹಿರಿಮೆಯಾಗಿದೆ. ಹಿರಿಯ ತಲೆಮಾರಿನ ನಿರಂತರ ಶ್ರಮ, ತ್ಯಾಗದ ಪರಿಣಾಮವಾಗಿ ಇಂದು ಶ್ರೀಮಂತ ವೈವಿಧ್ಯ ಕಲಾರೂಪಗಳು ನಮಗೆ ಆಸ್ವಾದನೆಗೆ ಲಭ್ಯವಾಗಿದೆ. ಯಕ್ಷಗಾನ ಇಂತಹ ಕಲಾ ಪ್ರಪಂಚದ ಅದ್ವಿತೀಯ ಕಲಾಪ್ರಕಾರವಾಗಿ ಜಗತ್ತನ್ನು ಬೆರಗಾಗಿಸಿದ್ದು, ಪರಂಪರೆಯ ಮೂಲ ಸ್ವರೂಪವನ್ನು ಉಳಿಸುವ ಅಗತ್ಯ ಇದೆ ಎಂದು ಎಡನಾಡು ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ ಅವರು ಹೇಳಿದರು.
ಸ್ವಸ್ತಿ ಶ್ರೀ ಕಲಾ ಪ್ರತಿಷ್ಠಾನ ಎಡನಾಡು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸೂರಂಬೈಲು ಶ್ರೀ ಗಣೇಶ ಕಲಾಮಂದಿರದಲ್ಲಿ ಆಯೋಜಿಸಲಾದ ಎರಡು ದಿನಗಳ ವಿಶೇಷ ಕಾರ್ಯಕ್ರಮ “ಹಿರಿಯರ ನೆನಪು ಮತ್ತು ಯಕ್ಷಗಾನ ಪೂರ್ವರಂಗ ಅಧ್ಯಯನ ಶಿಬಿರ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ಸಂಪನ್ನತೆಯ ಮುಕುಟವಾದ ಯಕ್ಷಗಾನ ಕಲೆಯು ಪೂರ್ವ ಸೂರಿಗಳ ಅಹರ್ನಿಶಿ ನಿರೂಪಣೆಯಲ್ಲಿ ಸಿದ್ಧಗೊಂಡ ಅತ್ಯಪೂರ್ವ ಶ್ರೀಮಂತ ಕಲೆಯಾಗಿದ್ದು, ಪೂರ್ವರಂಗದಂತಹ ಸಾಂಪ್ರದಾಯಿಕತೆ ಇಂದು ಮರೆಯಾಗಿರುವುದು ಕಲೆಗೆಸೆವ ಅಪಚಾರವಾಗಿದೆ. ಪರಂಪರೆಯನ್ನು ಉಳಿಸಿ ಪರಿಪೋಷಿಸುವ ಅಗತ್ಯವನ್ನು ನಾವು ಮನಗಾಣಬೇಕು ಎಂದು ಅವರು ಹೇಳಿದರು.
ಹಿರಿಯ ಸಾಂಸ್ಕೃತಿಕ ಸೇವಕ ಗೋಪಾಲಕೃಷ್ಣ ಭಟ್ ಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ತಲೆಮಾರಿನ ಕಲಾಸಕ್ತಿಗೆ ಸ್ಪಷ್ಟ ಮಾರ್ಗದರ್ಶನ ನೀಡುವ ಜವಾಬ್ದಾರಿ ಹಿರಿಯರಿಗಿದೆ. ಈ ನಿಟ್ಟಿನಲ್ಲಿ ಮಾರ್ಗದರ್ಶಿ ಶಿಬಿರಗಳನ್ನು ಆಯೋಜಿಸಿರುವ ಸ್ವಸ್ತಿಶ್ರೀ ಪ್ರತಿಷ್ಠಾನದ ಚಿಂತನೆ ಸ್ತುತ್ಯರ್ಹವಾದುದು ಎಂದು ತಿಳಿಸಿದರು.
ಕೇರಳ ಸರಕಾರದ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ತರ್, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಪ್ರಬಂಧಕ ಎ.ಕೃಷ್ಣ ಭಟ್, ಎಡನಾಡು ಕ್ಷೀರೋತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಎಂ. ಶಂಕರನಾರಾಯಣ ರಾವ್, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಆನಂದ ಭಂಡಾರಿ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದ ನಿರ್ದೇಶಕ ದಿವಾಣ ಶಿವಶಂಕರ ಭಟ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವಿನಯ ಎಸ್. ಚಿಗುರುಪಾದೆ ಸ್ವಾಗತಿಸಿದರು. ಹೃಷಿಕೇಶ ಬದಿಯಡ್ಕ ವಂದಿಸಿದರು. ಅವಿನಾಶ ಕಾರಂತ ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ದಿವಾಣ ಶಿವಶಂಕರ ಭಟ್ ನಿರ್ದೇಶನದಲ್ಲಿ ಯಕ್ಷಗಾನ ಪೂರ್ವರಂಗದ ಅಧ್ಯಯನ ಶಿಬಿರ ನಡೆಯಿತು.