Advertisement

ಮಣಿಪಾಲದಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದೆಯಂತೆ…

06:55 AM Jul 31, 2017 | |

ಉಡುಪಿ: ಉಡುಪಿ ನಗರದಲ್ಲೊಂದು, ಮಣಿಪಾಲದಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಇದೆಯೆ? ಕಲರ್‌ಫ‌ುಲ್‌ ನಾಮಫ‌ಲಕವಿದ್ದರೂ ಇದು ಎಷ್ಟು ಜನರಿಗೆ ಗೊತ್ತಿದೆ?  ಇಂತಹ ಒಂದು ಸರಕಾರಿ ಸೇವೆ ಇದೆ ಎಂದು ಈಗಷ್ಟೇ ಬೆಳಕಿಗೆ ಬರುತ್ತಿದೆ. ಇದೂ ಕೂಡ ಹೇಗೆಂದರೆ ಉಡುಪಿಯ ಕೇಂದ್ರವನ್ನು ಸ್ಥಳಾಂತರಿಸುವ ಹೊತ್ತಿಗೆ ವಿರೋಧ ವ್ಯಕ್ತವಾದಾಗ… ವಿರೋಧಿಸುವವರೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಳಾಂತರವಾಗುತ್ತಿದೆ ಎಂದೇ ತಿಳಿದುಕೊಂಡಿದ್ದಾರೆ… 

Advertisement

ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವುದು ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ. ನಗರದಲ್ಲಿ ಹೇಗೆ ಇದು ಬಂದಿರಬಹುದು? ಉಡುಪಿಯ ಕೇಂದ್ರ ಸುಮಾರು ನಾಲ್ಕೈದು ವರ್ಷಗಳ ಹಿಂದೆಯೇ ಮಂಜೂರಾಗಿ ಸ್ಥಾಪನೆಯಾಗಿತ್ತು. ಇದರ ಹೆಸರು ನಗರ ಆರೋಗ್ಯ ಪ್ರಾಥಮಿಕ ಕೇಂದ್ರ  1. ಮಣಿಪಾಲದ ವೇಣುಗೋಪಾಲಕೃಷ್ಣ ದೇವಸ್ಥಾನದ ಎದುರು ಇನ್ನೊಂದು ಪಿಎಚ್‌ಸಿ ಇದೆ. ಇದರ ಹೆಸರು ನಗರ ಆರೋಗ್ಯ ಪ್ರಾಥಮಿಕ ಕೇಂದ್ರ  2. ಇವೆರಡು ಕೇಂದ್ರಗಳಿಗೆ ನಾಮಫ‌ಲಕಗಳಿದ್ದರೂ ಉದ್ಘಾಟನೆ ಕಾರ್ಯಕ್ರಮವೇನೂ ಆಗಿಲ್ಲ. 

ಸ್ಲಮ್‌ ನಿವಾಸಿಗಳಿಗಾಗಿ
ನಗರಗಳಲ್ಲಿರುವ ಕೊಳಚೆಗೇರಿ ಪ್ರದೇಶದ ಕಾರ್ಮಿಕರಿಗೆ ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಗೆ ಔಷಧಿ ಕೊಡಲು ಸರಕಾರ ಈ ಪಿಎಚ್‌ಸಿಯನ್ನು ತೆರೆದಿತ್ತು. ನಿಟ್ಟೂರು ಪ್ರದೇಶದಲ್ಲಿ ತೆರೆಯಬೇಕೆನಿಸಿದ್ದರೂ ಜಾಗದ ಕೊರತೆಯಿಂದ ಇದು ಆಗದೆ, ಕೊನೆಗೆ ನಗರಸಭೆ ಕಚೇರಿ ಬಳಿ ಇರುವ ಜಿಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪಕ್ಕ ಆರಂಭಿಸಲಾಯಿತು. ಉಡುಪಿಯ ಕೇಂದ್ರ ನಗರಸಭೆ ಕಟ್ಟಡದ ಹತ್ತಿರ ಕಾರ್ಯಾಚರಿಸುತ್ತಿದೆ. ಕೇಂದ್ರಗಳಲ್ಲಿ ಎಂಬಿಬಿಎಸ್‌ ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ಸಿಸ್ಟರ್‌, ನರ್ಸ್‌ ಇವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಇಲ್ಲಿ ಸಂಜೆ ಹೊತ್ತಿಗೆ ಕಾರ್ಮಿಕರು ಕೆಲಸ ಬಿಟ್ಟ ಮೇಲೆ ಸಾಮಾನ್ಯ ಕಾಯಿಲೆಗಳಿಗೆ ಔಷಧಿ ತೆಗೆದುಕೊಳ್ಳಲು ಸಂಜೆ ಕ್ಲಿನಿಕ್‌ ತೆರೆಯುವ ಪ್ರಸ್ತಾವ ಇತ್ತಾದರೂ ವೈದ್ಯರ ಕೊರತೆಯಿಂದ ಇದು ಕಾರ್ಯಗತವಾಗಲಿಲ್ಲ. ಮುಖ್ಯವಾಗಿ ಸಾಮಾನ್ಯ ಜ್ವರಗಳಿಗೆ ಜಿಲ್ಲಾಸ್ಪತ್ರೆಗೆ ಹೋಗುವುದು ಕಷ್ಟವಾದ ಕಾರಣ ಇದನ್ನು ತೆರೆದದ್ದು. ಉಡುಪಿ ಕೇಂದ್ರದ ಹತ್ತಿರದಲ್ಲಿಯೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇದ್ದ ಕಾರಣ ಪಿಎಚ್‌ಸಿ ನಾಮಫ‌ಲಕ ಹೊಳೆಯುತ್ತಿದ್ದರೂ ಪಿಎಚ್‌ಸಿ ಹೊಳೆಯುತ್ತಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಡಾ|ರೋಹಿಣಿಯವರ ಪ್ರಕಾರ ಮಣಿಪಾಲ ಕ್ಲಿನಿಕ್‌ಗೆ ಜನರು ಬರುತ್ತಿದ್ದಾರೆ. ಸರಕಾರದ ವಿವಿಧ ತರಬೇತಿ, ಶಿಬಿರ ಇತ್ಯಾದಿ ಕಾರ್ಯಕ್ರಮಗಳಿಗೆ ಪಿಎಚ್‌ಸಿ ಸಿಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. 

“ಪಿಎಚ್‌ಸಿಯನ್ನು ಸ್ಥಾಪಿಸುವಾಗ ದುರಸ್ತಿ ಕೆಲಸಗಳಿಗೆ ಸುಮಾರು 9 ಲ.ರೂ. ಖರ್ಚಾಗಿತ್ತು. ನಾವು ಬೇರೆ ಸ್ಥಳವನ್ನು ಗುರುತಿಸಿಕೊಡಲು ಬಿಆರ್‌ಎಸ್‌ ಹೆಲ್ತ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಪ್ರೈ.ಲಿ.ನವರಿಗೆ ತಿಳಿಸಿದ್ದೇವೆ. ಅವರೂ ಪ್ರಯತ್ನಿಸುತ್ತಿದ್ದಾರೆ. ಅಲ್ಲಿಯವರೆಗೆ ಪಿಎಚ್‌ಸಿ ಅಲ್ಲಿಯೇ ಇರುತ್ತದೆ. ಕಟ್ಟಡ ನಿರ್ಮಾಣವಾದ ಬಳಿಕ ಅಲ್ಲಿ ನಮಗೊಂದು ಜಾಗವನ್ನೂ ಕೇಳಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿಯವರು. 

ಸರಕಾರದ ಸೌಲಭ್ಯ ಜನರಿಗೆ ತಿಳಿಯಬೇಕಲ್ಲ  !
ಉಡುಪಿ, ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ವೈದ್ಯರು, ತಂತ್ರಜ್ಞರು, ದಾದಿಯರನ್ನು ಸರಕಾರ ನೇಮಿಸಿದೆ. ಇದನ್ನು ಬಡ ಜನರಿಗಾಗಿ ಸರಕಾರ ಮಾಡಿದ್ದು. ಇದರ ಪೂರ್ಣ ಬಳಕೆ ಮಾಡಿಕೊಳ್ಳಬೇಕಾದದ್ದು ಬಡಜನರು. ಸರಕಾರ ಜನರ ತೆರಿಗೆ ಹಣದಿಂದ ಲಕ್ಷಾಂತರ ರೂ. ಖರ್ಚು ಮಾಡಿದರೂ ಅದರ ಉಪಯೋಗ ಯಾರಿಗೆ ದೊರಕಬೇಕೋ ಅದು ಸಿಗುತ್ತಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. ಇದಕ್ಕೆ ಸರಿಯಾದ ಪ್ಲಾನ್‌ ಇಲ್ಲದಿರುವುದು ಪ್ರಮುಖ ಕಾರಣ. ಸರಕಾರ ಗುತ್ತಿಗೆ ಆಧಾರದಲ್ಲಿಯಾದರೂ ವೈದ್ಯರನ್ನು ನೇಮಿಸಿ ಸಂಜೆ ಕ್ಲಿನಿಕ್‌ ತೆರೆಯಬೇಕು. ಅದನ್ನು ಸಾರ್ವಜನಿಕರಿಗೆ ತಿಳಿಯುವಂತೆ ಮಾಡಲು ಉದ್ಘಾಟನಾ ಸಮಾರಂಭ ಏರ್ಪಡಿಸಿ ತಿಳಿವಳಿಕೆ ನೀಡಬೇಕಾದ ಅಗತ್ಯವಿದೆ. 

Advertisement

ವಿರೋಧ
“ಈ ಪ್ರಸ್ತಾವನೆಗೆ ಆಸ್ಕರ್‌ ಫೆರ್ನಾಂಡಿಸ್‌ ಅವರು ವಿರೋಧ ಸೂಚಿಸಿದ್ದಾರೆ. 125 ವರ್ಷಗಳಷ್ಟು ಹಳೆಯ ಈ ಶಿಕ್ಷಣ ಸಂಸ್ಥೆಯ ಜಾಗ ಶಿಕ್ಷಣದ ಉದ್ದೇಶಕ್ಕಾಗಿಯೇ ಮೀಸಲಿರಬೇಕೆಂದು ಅವರು ಸಚಿವ ಪ್ರಮೋದ್‌ ಮಧ್ವರಾಜರಿಗೂ ತಿಳಿಸಿದ್ದಾರೆ. ಪ್ರಮೋದ್‌ ಅವರೂ ಆಸ್ಕರ್‌ ಫೆರ್ನಾಂಡಿಸ್‌ ಅನುಮತಿ ಇಲ್ಲದೆ ಸ್ಥಳಾಂತರಿಸಬಾರದೆಂದು ತಿಳಿಸಿದ್ದಾರೆ’ ಎಂದು ಶಿಕ್ಷಣ ಸಂಸ್ಥೆ ಅಭಿವೃದ್ಧಿ ಸಮಿತಿ ಪ್ರಮುಖ ದಿನೇಶ್‌ ಪುತ್ರನ್‌ ತಿಳಿಸಿದ್ದಾರೆ. 

ಸ್ಥಳಾಂತರ ಪ್ರಕ್ರಿಯೆ 
ಈಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಪುನಾರಚಿಸಲು ಬಿಆರ್‌ಎಸ್‌ ಹೆಲ್ತ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಪ್ರೈ.ಲಿ.ಗೆ ಕೊಟ್ಟಿರುವುದರಿಂದ ಅಲ್ಲೇ ಇರುವ ಪಿಎಚ್‌ಸಿಯನ್ನು ಬಸ್‌ ನಿಲ್ದಾಣ ಸಮೀಪದ ಸರಕಾರಿ ಪ.ಪೂ. ಕಾಲೇಜಿನ (ಬೋರ್ಡ್‌ ಹೈಸ್ಕೂಲ್‌) ಆವರಣಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಜಿಲ್ಲಾಧಿಕಾರಿಯವರ ಸೂಚನೆಯಂತೆ ಜಿಲ್ಲಾ ಆರೋಗ್ಯಾಧಿಕಾರಿಯವರು ಸ್ಥಳಾವಕಾಶ ಕೋರಿ ಡಿಡಿಪಿಯು ಅವರಿಗೆ ಪತ್ರ ಬರೆದಿದ್ದಾರೆ. 

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next