ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳಲ್ಲಿ ಆನ್‌ಲೈನ್ ತರಗತಿ ಆರಂಭವಾಗಿದ್ದು, ಅತಿಥಿ ಉಪನ್ಯಾಸಕರ ನೇಮಕಾತಿ ಆಗದಿರುವುದರಿಂದ ಸರಕಾರಿ ಪದವಿ ಕಾಲೇಜುಗಳಲ್ಲಿ ಬೋಧಕರ ಕೊರತೆ ಎದುರಾಗಿದೆ. ಪ್ರತೀ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡು, ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಅವರ ಅವಧಿಯೂ ಪೂರ್ಣಗೊಳ್ಳುತ್ತದೆ. ಮತ್ತೆ ಹೊಸ ಶೈಕ್ಷಣಿಕ ವರ್ಷ ಆರಂಭ ವಾದಾಗ ಹೊಸದಾಗಿ ನೇಮಕಾತಿ ನಡೆಯುತ್ತದೆ. 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ, ಆನ್‌ಲೈನ್ ತರಗತಿ ನಡೆಯುತ್ತಿದೆ. ಆದರೆ ಅತಿಥಿ ಉಪನ್ಯಾಸಕರ ನೇಮಕಾತಿ ಇನ್ನೂ ನಡೆದಿಲ್ಲ. ಆನ್‌ಲೈನ್ ತರಗತಿಗೆ ಬೋಧಕರ ಕೊರತೆ ಎದುರಾಗಿದ್ದು, ತರಗತಿಗಳೇ ನಡೆಯುತ್ತಿಲ್ಲ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 430 ಸರಕಾರಿ ಪ್ರ. ದರ್ಜೆ ಕಾಲೇಜುಗಳಿವೆ. ಎಲ್ಲ ಕಾಲೇಜುಗಳಲ್ಲೂ ಬೋಧಕ ಸಿಬಂದಿ ಕೊರತೆಯಿದೆ. ಮಂಜೂರಾಗಿರುವ 7 ಸಾವಿರಕ್ಕೂ ಅಧಿಕ ಹುದ್ದೆಗಳಲ್ಲಿ 1,200ಕ್ಕೂ ಅಧಿಕ ಹುದ್ದೆ ಖಾಲಿಯಿದೆ. ಈ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಬೋಧಕರ ಸಮಸ್ಯೆ ಹೆಚ್ಚಿದೆ ಎಂದು ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಥಮ ಪದವಿಗೆ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ತೃತೀಯ, ಐದನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಸೆ. 1 ರಿಂದಲೇ ಆನ್‌ಲೈನ್ ತರಗತಿ ಆರಂಭ ವಾಗಿವೆ. 2020- 21 ರಲ್ಲಿ ಸರಕಾರಿ ಪದವಿ ಕಾಲೇಜು ಪ್ರವೇಶ ಹೆಚ್ಚಿದೆ. ಆದರೆ ಬೋಧಕರ ಕೊರತೆಯಿಂದಾಗಿ ಆನ್‌ಲೈನ್ ತರಗತಿಗಳು ಸಮರ್ಪಕ ವಾಗಿ ನಡೆಯುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್‌ನಲ್ಲಿ ನೇರ ತರಗತಿಗಳನ್ನು ಆರಂಭಿಸುವ ಬಗ್ಗೆ ಇಲಾಖೆ ಯಲ್ಲಿ ಚಿಂತನೆ ನಡೆಯುತ್ತಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯಾಗದೆ ತರಗತಿ ಪೂರ್ಣ ಪ್ರಮಾಣ ದಲ್ಲಿ ನಡೆಸುವುದು ಕಷ್ಟಸಾಧ್ಯ. ನೇಮಕಾತಿ ಪೂರ್ಣ ಗೊಳ್ಳಲು ಕನಿಷ್ಠ 1 ತಿಂಗಳು ಬೇಕಾಗುತ್ತದೆ. ಹೀಗಾಗಿ ಸರಕಾರ ಆದಷ್ಟು ಬೇಗ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಬೇಕು ಎಂದು ಅತಿಥಿ ಉಪನ್ಯಾಸಕರು ಆಗ್ರಹಿಸುತ್ತಿದ್ದಾರೆ.
ವಿಳಂಬ ಏಕೆ?
ಖಾಯಂ ಸಹ ಮತ್ತು ಸಹಾಯಕ ಪ್ರಾಧ್ಯಾಪಕರ ಕಾರ್ಯಭಾರ ಹೆಚ್ಚಿಸುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ. ಹೀಗಾಗಿ ಅತಿಥಿ ಉಪನ್ಯಾಸಕರ ಸಂಖ್ಯೆ ಕಡಿಮೆಗೊಳಿಸಲು ತೀರ್ಮಾನಿಸಲಾಗಿದೆ. ಪ್ರಥಮ ವರ್ಷದ ದಾಖಲಾತಿ ಪೂರ್ಣಗೊಂಡ ಬಳಿಕ ಮಾಹಿತಿ ಪಡೆದು, ಆರ್ಥಿಕ ಇಲಾಖೆಯ ಅನುಮೋದನೆಗೆ ಕಳುಹಿಸಿಕೊಡಬೇಕು. ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕ ಅನಂತರವೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ. ಹೀಗಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬವಾಗುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾಲೇಜುಗಳಿಂದ ದಾಖಲಾತಿ ಮತ್ತು ಉಪನ್ಯಾಸಕರ ಕಾರ್ಯಭಾರದ ಮಾಹಿತಿ ಪಡೆಯುತ್ತಿದ್ದೇವೆ. ಅನಂತರ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು, ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.
-ಪಿ. ಪ್ರದೀಪ್, ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ
ರಾಜು ಖಾರ್ವಿ ಕೊಡೇರಿ