ಕಲಾದಗಿ: ಕಳಸಕೊಪ್ಪ ಕೆರೆ ಸೇರಿದಂತೆ ಕಲಾದಗಿ ಹೋಬಳಿಮಟ್ಟದ ಏಳು ಕೆರೆಗಳನ್ನು ತುಂಬಿಸುವ ಕಾರ್ಯ ಕೈಗೊಳ್ಳಬೇಕಾಗಿದೆ.
ಕಲಾದಗಿ ಹೋಬಳಿ ಮಟ್ಟದಲ್ಲಿ ಮಳೆ ನಿರೀಕ್ಷೆ ಪ್ರಮಾಣದಲ್ಲಿ ಸುರಿಯದೇ ನಿರಾಸೆ ಮೂಡಿಸಿದೆ, ನೀರಿಗಾಗಿ ರೈತ ಸಮುದಾಯ ಇನ್ನೂ ಕಂಗಾಲಾಗಿದೆ. ಜನಪ್ರತಿನಿಧಿಗಳು, ಕೆಬಿಜೆಎನ್‌ಎಲ್ ಅಧಿಕಾರಿಗಳು ಕೆರೆಗೆ ನೀರು ಎಂದು ತುಂಬಿಸುತ್ತಾರೆ ಎಂದು ಕಾಯುತ್ತಿದ್ದಾರೆ.
ಹೋಬಳಿ ವ್ಯಾಪ್ತಿಯಲ್ಲಿ ಇರುವ ಹತ್ತಾರು ಕೆರೆಗಳು ಬತ್ತಿ ಬರಿದಾಗಿವೆ, ಅಂತರ್ಜಲ ಮಟ್ಟ ಕುಸಿದು ರೈತರ ಕೊಳವೆಬಾವಿಗಳು ಬತ್ತಿ ಬರಿದಾಗುತ್ತಿವೆ. ಘಟಪ್ರಭಾ ನದಿಯಿಂದ ಕಳಸಕೊಪ್ಪ ಕೆರೆ, ಗೊವಿಂದಕೊಪ್ಪ ಕೆರೆ, ತುಳಸಿಗೇರಿ ಕೆರೆ, ಗದ್ದನಕೇರಿ ಕೆರೆಗೆ, ಕೆರೂರ ಭಾಗದ ಏಳು ಕೆರೆಗಳಿಗೆ ನೀರು ತುಂಬಿಸಿ ನೀರಿಗಾಗಿ ಪರದಾಡುತ್ತಿರುವ ರೈತರ ಆತಂಕ ದೂರ ಮಾಡಬೇಕಾಗಿದೆ.
ಕಳಸಕೊಪ್ಪ ಕೆರೆಯಲ್ಲಿ ನೀರು ಆವರಿಸುವ ಕ್ಷೇತ್ರ 270 ಹೆಕ್ಟೇರ್ ಆಗಿದ್ದು, 667.1845 ಎಕರೆ ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಕೆರೆ ನೀರು ನಿಲ್ಲುವ ಎತ್ತರ 5.80 ಮೀಟರನಷ್ಟಿದೆ. ಕೆರೆಯ ಕಟ್ಟೆಯ ಎತ್ತರ 57 ಅಡಿ, ಉದ್ದ 1616 ಅಡಿ, ಮೇಲಗಲ 12 ಅಡಿ ಅಗಲ ಹೊಂದಿದೆ, ಕೆಳ ಅಗಲ 228 ಅಡಿಗಳಷ್ಟಿದೆ. 200 ಹೆಕ್ಟೇರ ಪ್ರದೇಶ ಮುಳುಗಡೆಯಾಗಿಸಿ ನೀರು ತುಂಬಿ ಹೊರಚೆಲ್ಲುವ ಕೋಡಿ 909 ಅಡಿ ಉದ್ದವಿದೆ. 0.24 ಟಿಎಂ.ಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
ಘಟಪ್ರಭಾ ನದಿಯಲ್ಲಿ ದಿನದಿಂದ ದಿನಕ್ಕೆ ನೀರು ಏರಿಕೆಯಾಗುತ್ತಿದ್ದು ಒಡಲು ತುಂಬಿಕೊಂಡಿದೆ. ಮತಕ್ಷೇತ್ರದ ಜನಪ್ರತಿನಿಧಿಗಳು, ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿಯ ಅಧಿಕಾರಿಗಳು ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಈ ಭಾಗದ ರೈತರು ಆರೋಪಿಸುತ್ತಿದ್ದಾರೆ.
ಬಾಗಲಕೋಟೆ ತಾಲೂಕಿನ 6 ಗ್ರಾಮಗಳ 1143 ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ, ಚಿಕ್ಕಶೆಲ್ಲಿಕೇರಿ, ಹಿರೇಶೆಲ್ಲಿಕೇರಿ, ಕಗಲಗೊಂಬ, ನೀರಬೂದಿಹಾಳ, ಕಳಸಕೊಪ್ಪ, ಕೆರಕಲಮಟ್ಟಿ, ಕಲಾದಗಿಯಲ್ಲಿ ಬತ್ತಿದ ಕೊಳವೆ ಬಾವಿಗಳಿಗೆ ಮರುಜೀವ ತುಂಬುವ ಕೆರೆಗೆ ಈಗಿನಿಂದಲೇ ನೀರು ತುಂಬಿಸಲು ಆರಂಭಿಸಬೇಕಾಗಿದೆ. ಇಲ್ಲದಿದ್ದಲ್ಲಿ ಕೆರೆಗಳು ಸಂಪೂರ್ಣವಾಗಿ ತುಂಬಿಕೊಳ್ಳುವುದಿಲ್ಲ ಎನ್ನುವ ಅಭಿಪ್ರಾಯ ರೈತರದ್ದಾಗಿದೆ.
•ಚಂದ್ರಶೇಖರ ಆರ್.ಎಚ್