Advertisement

ತಂದೆಯ ಆಸೆಯಂತೆ ದೇಶ ಕಾಯುವ ಸೈನಿಕನಾದ ! 

10:04 AM Feb 19, 2018 | |

ಮೂವರು ಮಕ್ಕಳಲ್ಲಿ ಒಬ್ಬನನ್ನಾದರೂ ಸೇನೆಗೆ ಸೇರಿಸಬೇಕೆನ್ನುವ ಹೆತ್ತವರ ಆಕಾಂಕ್ಷೆಯನ್ನು ಪೂರೈಸಿದ್ದು ಅವರು. ಭೂಸೇನೆಗೆ ಸೇರಿ ದೇಶಸೇವೆ ಮೂಲಕ ಹೆಮ್ಮೆ ತಂದವರು ಪಾಣೂರಿನ ಸುನಿಲ್‌ರಾಜ್‌.

Advertisement

ವೇಣೂರು: ರಾಷ್ಟ್ರಸೇವೆಯ ಪುಣ್ಯದ ಕೆಲಸಕ್ಕೆ ಮೂವರು ಸೋದರರು ಪ್ರಯತ್ನಪಟ್ಟರೂ ಫ‌ಲ ಸಿಕ್ಕಿದ್ದು ಒಬ್ಬರಿಗೆ ಮಾತ್ರ. ಸೈನಿಕನಾಗಿ ತಂದೆಯ ಕನಸನ್ನು ಈಡೇರಿಸಿದವರು ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಪಾಣೂರು ಅನುಗ್ರಹ ಮನೆಯ ಸುನಿಲ್‌ರಾಜ್‌.

ತಂದೆಯೇ ಪ್ರೇರಣೆ
ಮಂಗಳೂರಿನ ಭಾರತ್‌ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದ ನಮಿರಾಜ್‌ ಅವರು ವಿದ್ಯಾರ್ಥಿಗಳಲ್ಲಿ ಸದಾ ದೇಶಪ್ರೇಮದ ಅರಿವು ಮೂಡಿಸುತ್ತಿದ್ದರು. ತಮ್ಮ ಮೂವರು ಮಕ್ಕಳಲ್ಲಿ ಒಬ್ಬನನ್ನಾದರೂ ಸೇನೆಗೆ ಕಳುಹಿಸಬೇಕೆಂದು ಅವರು ಆಶಿಸಿದ್ದು, ಇದಕ್ಕೆ ಪತ್ನಿ ಶಾರದಾ ಅವರ ಬೆಂಬಲವೂ ಇತ್ತು. ಸುನಿಲ್‌ರಾಜ್‌ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಿಟ್ಟಡೆಯ ಕುಂಡದಬೆಟ್ಟು ಶಾಲೆ ಹಾಗೂ ಪ್ರೌಢ ಶಿಕ್ಷಣವನ್ನು ಮಂಗಳೂರಿನ ಭಾರತ್‌ ಹೈಸ್ಕೂಲ್‌ನಲ್ಲಿ ಪಡೆದಿದ್ದರು. ಸೇನೆಗೆ ಸೇರುವ ಹೊತ್ತಿಗೆ ತಂದೆ ನಮಿರಾಜ್‌ ಅವರ ಸಹೋದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕ ತುಕಾರಾಮ್‌ ಅವರು ಸಲಹೆ, ಪ್ರೋತ್ಸಾಹವನ್ನೂ ನೀಡಿದ್ದರು.


ತಂದೆ-ತಾಯಿ, ಪತ್ನಿ ಹಾಗೂ ಮಗುವಿನೊಂದಿಗೆ ಸುನಿಲ್‌ರಾಜ್‌.

ಪುತ್ರರಿಗೆ ದೇಶಸೇವೆಯ ಆಸೆ
ತಂದೆಯ ಪ್ರೇರಣೆಯಿಂದ ನಮಿರಾಜ್‌ ಅವರ ಮೂವರು ಪುತ್ರರಾದ ಅನಿಲ್‌ರಾಜ್‌, ಸುನಿಲ್‌ರಾಜ್‌, ಅಖೀಲ್‌ರಾಜ್‌ಗೆ ಸೇನೆ ಸೇರಬೇಕೆಂಬ ತುಡಿತ ಇದ್ದರೂ ಸಾಧ್ಯವಾಗಿದ್ದು ಸುನಿಲ್‌ರಾಜ್‌ ಅವರಿಗೆ ಮಾತ್ರ. ಸುನಿಲ್‌ರಾಜ್‌ ಅವರ ಅಣ್ಣ ಅನಿಲ್‌ರಾಜ್‌ ಕೆಲವು ಬಾರಿ ಪ್ರಯತ್ನಪಟ್ಟರಾದರೂ ಫ‌ಲ ಕಾಣಲಿಲ್ಲ. ಸುನಿಲ್‌ ಅವರ ಸಹೋದರರು ಈಗ ಒಬ್ಬರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರೆ, ಮತ್ತೂಬ್ಬರು ತಾಂತ್ರಿಕ ಶಿಕ್ಷಣ ಪಡೆದು ಬಳಿಕ ಕೃಷಿಕರಾಗಿದ್ದಾರೆ. ಸುನಿಲ್‌ ರಾಜ್‌ ಅವರು 2011ರಲ್ಲಿ ಬೆಳ್ತಂಗಡಿಯ ಬುಳೆಕ್ಕಾರದ ರಮ್ಯಾ ಅವರನ್ನು ವಿವಾಹವಾಗಿದ್ದು, ಇವರಿಗೆ 2 ವರ್ಷದ ಪುತ್ರಿ ಅವನಿ ಇದ್ದಾಳೆ. ರಮ್ಯಾ ಅವರು ವೇಣೂರು ಪೊಲೀಸ್‌ ಠಾಣೆಯಲ್ಲಿ ಮಹಿಳಾ ಕಾನ್ಸ್‌ಸ್ಟೇಬಲ್‌ ಆಗಿದ್ದಾರೆ.

ವಿವಿಧೆಡೆ ಸೇವೆ
ಶಾಲಾ ದಿನಗಳಲ್ಲಿ ಎನ್‌ಸಿಸಿ, ವಿವಿಧ ಕ್ರೀಡಾಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದುದರಿಂದ ಸುನಿಲ್‌ರಾಜ್‌ ಅವರಿಗೆ ನೇಮಕಾತಿ ಹೆಚ್ಚು ಕಷ್ಟವಾಗಲಿಲ್ಲ. ಸೇನೆಗೆ ಸೇರ್ಪಡೆ ಬಳಿ ಬೆಂಗಳೂರು ಎಎಸ್‌ಸಿ ಸೆಂಟರ್‌ನಲ್ಲಿ ಒಂದು ವರ್ಷ ತರಬೇತಿ ಅನಂತರ ಜಾರ್ಖಂಡ್‌ನ‌ ರಾಂಚಿಗೆ ಮೊದಲ ಪೋಸ್ಟಿಂಗ್‌ ಆಗಿತ್ತು. ಅಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿ, ಪಂಜಾಬ್‌ನ ಪಠಾಣ್‌ಕೋಟ್‌ ನಲ್ಲಿ 2 ವರ್ಷ, ರಾಜಸ್ಥಾನದ ಸೂರತ್‌ಗಢದಲ್ಲಿ 3 ವರ್ಷ, ಜಮ್ಮು – ಕಾಶ್ಮೀರದ ಕುಪ್ಪವಾಡಾದಲ್ಲಿ 3 ವರ್ಷ, ಅಸ್ಸಾಂನಲ್ಲಿ 2 ವರ್ಷ, ಈಗ ಪಂಜಾಬ್‌ನ ಭಟಿಂಡಾದಲ್ಲಿ 2 ವರ್ಷಗಳಿಂದ ಸೇವೆಯಲ್ಲಿದ್ದಾರೆ.

Advertisement

ಮರೆಯಲಾಗದ ಘಟನೆಗಳು
.
ಕಾಶ್ಮೀರದಲ್ಲಿ ಸುನಿಲ್‌ರಾಜ್‌ ಕರ್ತವ್ಯ ನಿರ್ವಹಿಸುತ್ತಿದ್ದ ಹತ್ತಿರದ ಯುನಿಟ್‌ನ ಮೇಲೆ ಉಗ್ರರು ದಾಳಿ ನಡೆಸಿ ಸೇನಾ ಯೋಧನ ರುಂಡವನ್ನು ಕತ್ತರಿಸಿ ಕೊಂಡೊಯ್ದಿದ್ದರು. ಬಳಿಕ ಸುನಿಲ್‌ರಾಜ್‌ ಅವರ ತಂಡ ಅಲರ್ಟ್‌ ಆಗಿ ಉಗ್ರರ ವಿರುದ್ಧ ಕಾರ್ಯಾ ಚರಣೆಗಿಳಿದಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.

.2016ರಲ್ಲಿ ಕುಪ್ಪವಾಡಕ್ಕೆ 100ಕ್ಕೂ ಹೆಚ್ಚು ಸೇನಾ ವಾಹನಗಳು ತೆರಳುತ್ತಿದ್ದ ವೇಳೆ ಸುನಿಲ್‌ರಾಜ್‌ ಅವರಿದ್ದ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಅವರ ತಂಡ ಕ್ಷಣಮಾತ್ರದಲ್ಲಿ ಪ್ರತಿ ದಾಳಿ ನಡೆಸಿದ್ದು, ಉಗ್ರರ ಸದ್ದಡಗಿಸಿತ್ತು.

ಒಬ್ಬನನ್ನಾದರೂ ದೇಶಸೇವೆಗೆ ಕಳಿಸಿದ್ದೇನೆ
ನನಗೆ ದೇಶದ ಮೇಲೆ ತುಂಬಾ ಪ್ರೀತಿ, ಸೇನೆಯ ಮೇಲೆ ತುಂಬಾ ಗೌರವ ಮತ್ತು ಅಭಿಮಾನ. ಒಬ್ಬ ಮಗನನ್ನಾದರೂ ದೇಶಸೇವೆಗೆ ಕಳುಹಿಸಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತು. ಆತನ ದೇಶಸೇವೆ ನಮಗೆ ಹೆಮ್ಮೆ.
-ನಮಿರಾಜ್‌, ತಂದೆ 

ಪತಿಯ ಬಗ್ಗೆ ಹೆಮ್ಮೆ
ಪತಿ ರಾಷ್ಟ್ರಸೇವೆಯಲ್ಲಿ ತೊಡಗಿರುವುದು ನನಗೆ ತುಂಬಾ ಗೌರವ ಮತ್ತು ಹೆಮ್ಮೆ. ಹಲವಾರು ಕಠಿಣ ಸವಾಲುಗಳನ್ನು ಎದುರಿಸಿ ರಾಷ್ಟ್ರಸೇವೆಯನ್ನೇ ಉಸಿರಾಗಿಸಿಕೊಂಡಿರುವ ಪತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ.
-ರಮ್ಯಾ, ಪತ್ನಿ

ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next