Advertisement

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

11:16 PM Oct 19, 2021 | Team Udayavani |

ಮುಂಬೈ: ಡ್ರಗ್‌ ಕೇಸ್‌ನಲ್ಲಿ ಬಂಧಿತನಾಗಿರುವ ಆರ್ಯನ್‌ ಖಾನ್‌ಗೆ ಸಂಬಂಧಿಸಿ ಶಿವಸೇನೆ ನಾಯಕರೊಬ್ಬರು ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಆರ್ಯನ್‌ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಎನ್‌ಸಿಬಿ ಅಧಿಕಾರಿಯೊಬ್ಬರ ಪತ್ನಿಗೆ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಸಿಗಲಿಲ್ಲ ಎಂಬ ಏಕೈಕ ಕಾರಣಕ್ಕಾಗಿ, ಆ ಅಧಿಕಾರಿಯು ಆರ್ಯನ್‌ರನ್ನು ಬಲಿಪಶು ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.

ಎನ್‌ಸಿಬಿ ವಿರುದ್ಧದ ಈ ಆರೋಪಗಳ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದೂ ಮುಂಬೈ ಮೂಲದ ಶಿವಸೇನೆ ನಾಯಕ ಕಿಶೋರ್‌ ತಿವಾರಿ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್‌ ಈ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ, ಆರ್ಯನ್‌ ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಎಂದೂ ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

ಬೇಲ್‌ ಸಿಗುವವರೆಗೂ ಖೀರ್‌ ಇಲ್ಲ!
ಪುತ್ರ ಆರ್ಯನ್‌ಗೆ ಜಾಮೀನು ಸಿಗುವವರೆಗೂ ತಮ್ಮ ನಿವಾಸ “ಮನ್ನತ್‌’ನಲ್ಲಿ ಖೀರ್‌(ಸಿಹಿತಿನಿಸು) ಮಾಡುವಂತಿಲ್ಲ ಎಂದು ಮನೆಯ ಕೆಲಸದಾಳುಗಳಿಗೆ ಗೌರಿ ಖಾನ್‌ ಸೂಚಿಸಿದ್ದಾರಂತೆ! ಅಡುಗೆ ಮನೆಯಲ್ಲಿ ಕೆಲಸಗಾರರು ಖೀರ್‌ ಮಾಡುತ್ತಿದ್ದುದನ್ನು ಕಂಡು, ಕೂಡಲೇ ಅದನ್ನು ನಿಲ್ಲಿಸುವಂತೆ ಸೂಚಿಸಿರುವ ಗೌರಿ, “ಆರ್ಯನ್‌ ವಾಪಸಾಗುವವರೆಗೂ ಮನೆಯಲ್ಲಿ ಸಿಹಿ ಮಾಡಬಾರದು’ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಪಠಾಣ್‌, ಟೈಗರ್‌ 3 ಶೂಟಿಂಗ್‌ ರದ್ದು
ಬಾಲಿವುಡ್‌ ನಟ ಶಾರುಖ್‌ ನಟಿಸುತ್ತಿರುವ “ಪಠಾಣ್‌’ ಹಾಗೂ ಸಲ್ಮಾನ್‌ ಖಾನ್‌ ಅಭಿನಯದ “ಟೈಗರ್‌ 3′ ಸಿನಿಮಾಗಳ ಚಿತ್ರೀಕರಣ ರದ್ದಾಗಿದೆ. ಎರಡೂ ಸಿನಿಮಾಗಳಿಗೂ ಪರಸ್ಪರ ಕನೆಕ್ಷನ್‌ ಇದ್ದು, ಆರ್ಯನ್‌ ಪ್ರಕರಣದಿಂದಾಗಿ ಗೊಂದಲಕ್ಕೆ ಸಿಲುಕಿರುವ ಶಾರುಖ್‌ ಸದ್ಯಕ್ಕೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿಲ್ಲ. ಇನ್ನೊಂದೆಡೆ, ಸಲ್ಲು ಕೂಡ ಆರ್ಯನ್‌ ಕೇಸನ್ನು ಫಾಲೋ ಮಾಡುತ್ತಿರುವ ಕಾರಣ ಶೂಟಿಂಗ್‌ನಿಂದ ದೂರ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next