ಮೈಸೂರು: ಆರ್ಯ ಈಡಿಗ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೃಷ್ಣಮೂರ್ತಿ ತಿಳಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಕೃಷ್ಣಮೂರ್ತಿಪುರಂನ ಶ್ರೀರಾಮಂದಿರದಲ್ಲಿ ಆಯೋಜಿಸಿದ್ದ ಉದ್ಯಮಿಗಳು ಹಾಗೂ ಮದ್ಯವ್ಯಾಪಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಆರ್ಯ ಈಡಿಗ ಸಮುದಾಯದ ವೃತ್ತಿ ಮದ್ಯ ಮಾರಾಟ ಮಾಡುವುದಾಗಿದ್ದು, ನಮ್ಮ ಮಕ್ಕಳಿಗೂ ಇದೇ ವೃತ್ತಿಯನ್ನು ಕೊಡಿಸುವ ಬದಲು ಅವರಿಗೆ ಒಳ್ಳೆಯ ಶಿಕ್ಷಣ ನೀಡಿ, ವಿದ್ಯಾವಂತರನ್ನಾಗಿ ಮಾಡಬೇಕಿದೆ. ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆದರೆ, ಸಮುದಾಯ ಮತ್ತಷ್ಟು ಬಲಗೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ಮಾತನಾಡಿ, ಮೈಸೂರಿನ ವಿಜಯನಗರ 3ನೇ ಹಂತದಲ್ಲಿ 5 ಕೋಟಿ ವೆಚ್ಚದಲ್ಲಿ ಆರ್ಯ ಈಡಿಗ ಸಮುದಾಯದ ವಿದ್ಯಾರ್ಥಿನಿಲಯ ನಿರ್ಮಿಸಲು ಚಿಂತನೆ ನಡೆಸಿದ್ದು, ಇದಕ್ಕಾಗಿ ಈಗಾಗಲೇ 35 ಲಕ್ಷ ರೂ. ಸಂಗ್ರಹವಾಗಿದೆ. ಹೀಗಾಗಿ ಆರ್ಥಿಕ ಸಹಾಯ ನೀಡಲಿಚ್ಛಿಸುವ ಸಮುದಾಯದವರು ಆರ್ಥಿಕ ನೆರವು ನೀಡಿ ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಉದ್ಯಮಿಗಳು ಹಾಗೂ ಮದ್ಯ ವ್ಯಾಪಾರಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಪಾಪೇಗೌಡ, ಮಳಾ ಘಟಕದ ಅಧ್ಯಕ್ಷೆ ಸರೋಜಮ್ಮ, ಪದಾಧಿಕಾರಿಗಳಾದ ಡಿ.ಶಿವಣ್ಣ, ಕೆ.ಪಿ.ಪರಮೇಶ್ವರ್, ರಂಗೇಗೌಡ, ಕೃಷ್ಣಮೂರ್ತಿ, ನಿಂಗರಾಜು, ನಾಗರಾಜು, ಪುಟ್ಟಣ್ಣ, ಮೋಹನಕುಮಾರ್ ಹಾಜರಿದ್ದರು.