ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವಿಶ್ವಾಸಮತ ಯಾಚಿಸುವುದಾಗಿ ಪ್ರಕಟಿಸಿರುವುದು, ಬಿಜೆಪಿ ಶಾಸಕರು ರೆಸಾರ್ಟ್ ಮೊರೆ ಹೋಗಿರುವುದು, ಮೈತ್ರಿ ಪಕ್ಷಗಳು ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆ ಕಾರ್ಯಕ್ಕೆ ಮುಂದಾಗಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರು ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ಮೈತ್ರಿ ಸರ್ಕಾರಕ್ಕೆ ಸಂಖ್ಯಾಬಲ ಇಳಿಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ರೂಪಿಸಿದ ಕಾರ್ಯತಂತ್ರವನ್ನು ಜಾರಿಗೊಳಿಸುವ ಹೊಣೆ ಹೊತ್ತ ಕೆಲವರ ಪೈಕಿ ಅರವಿಂದ ಲಿಂಬಾವಳಿ ಪ್ರಮುಖರು. ಕೇಂದ್ರ ಸಚಿವರೊಬ್ಬರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಅವರ ಕಾರ್ಯತಂತ್ರದ ಅನುಷ್ಠಾನ, ಪರಿಣಾಮಗಳ ಬಗ್ಗೆಯೂ ನಿರಂತರವಾಗಿ ಮಾಹಿತಿ ರವಾನಿಸುತ್ತಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.
ಮುಖ್ಯಮಂತ್ರಿಗಳು ಅನಿರೀಕ್ಷಿತವೆಂಬಂತೆ ವಿಶ್ವಾಸಮತ ಯಾಚನೆಯ ಇಂಗಿತ ವ್ಯಕ್ತಪಡಿಸಿರುವುದು ಮೈತ್ರಿ ಸರ್ಕಾರದ ಭವಿಷ್ಯವನ್ನು ನಿರ್ಣಾಯಕ ಹಂತಕ್ಕೆ ತಂದು ನಿಲ್ಲಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ಎಚ್ಚೆತ್ತುಕೊಂಡಿದ್ದು, ಎಚ್ಚರಿಕೆಯ ನಡೆ ಅನುಸರಿಸುತ್ತಿದೆ. ಶನಿವಾರ ಸಂಜೆ ಅರವಿಂದ ಲಿಂಬಾವಳಿಯವರು ದೆಹಲಿಗೆ ತೆರಳಿದ್ದಾರೆ.
ಅತೃಪ್ತ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿರುವ ಅರ್ಜಿ, ಸ್ಪೀಕರ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರ, ನ್ಯಾಯಾಲಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿರುವ ಬೆಳವಣಿಗೆ ಕುರಿತಂತೆ ಕಾನೂನಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದು, ಈ ಬೆಳವಣಿಗೆ ಬಗ್ಗೆ ವರಿಷ್ಠರಿಗೂ ಮಾಹಿತಿ ನೀಡಲಿದ್ದಾರೆ. ಅವರೊಂದಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ ತೆರಳಿದ್ದಾರೆ ಎನ್ನಲಾಗಿದೆ.
ನಾಗೇಂದ್ರ ಆರೋಗ್ಯ ವಿಚಾರಿಸಿದ ಬಿಎಸ್‌ವೈ: ಕಾಂಗ್ರೆಸ್ ಶಾಸಕ ನಾಗೇಂದ್ರ ಅವರಿಗೆ ಕರೆ ಮಾಡಿದ ಯಡಿಯೂರಪ್ಪ, ಅವರ ಆರೋಗ್ಯ ವಿಚಾರಿಸಿದರು. ಯಡಿಯೂರಪ್ಪ ಅವರ ನಿವಾಸಕ್ಕೆ ಶನಿವಾರ ಶಾಸಕರಾದ ಅರವಿಂದ ಲಿಂಬಾವಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿಯವರ ಮೊಬೈಲ್ ಫೋನ್‌ನಿಂದ ಕರೆ ಮಾಡಿದ ಯಡಿಯೂರಪ್ಪ ಅವರು, ನಾಗೇಂದ್ರ ಅವರ ಆರೋಗ್ಯ ವಿಚಾರಿಸಿದರು ಎನ್ನಲಾಗಿದೆ.