Advertisement

ಅರವಿಂದ್‌ ಲಿಂಬಾವಳಿ ಮುತ್ತಿಗೆಗೆ ಯತ್ನ

03:45 AM Jul 06, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್‌ ಕೋವಿಂದ್‌ ಅವರ ಭೇಟಿಗೆ ಅವಕಾಶ ನಿರಾಕರಿಸಿದರು ಎಂಬ ಕಾರಣಕ್ಕೆ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಕೋಲಿ ಸಮುದಾಯ ಹಾಗೂ ಬಹುಜನ ಸಂಘರ್ಷ ಸಮಿತಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ನಡೆಯಿತು.

Advertisement

ರಾಷ್ಟ್ರಪತಿ ಚುನಾವಣೆಗೆ ಮತಯಾಚನೆಗಾಗಿ ಬುಧವಾರ ಬೆಂಗಳೂರಿಗೆ ಬಂದಿದ್ದ ರಾಮ್‌ನಾಥ್‌ ಕೋವಿಂದ್‌ ಅವರು ರಾಜಭವನ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಭೆಗೆ ಆಹ್ವಾನಿತರು, ಆಯ್ದ ಮುಖಂಡರನ್ನು ಹೊರತುಪಡಿಸಿ ಉಳಿದವರು ಹೋಟೆಲ್‌ ಕೊಠಡಿಗೆ ಪ್ರವೇಶಿಸದಂತೆ ಅವರ ಭದ್ರತೆಗೆ ನಿಯೋಜಿಸಿದ್ದ ಎನ್‌ಎಸ್‌ಜಿ ಕಮಾಂಡೋಗಳು ನಿರ್ಬಂಧ ಹೇರಿದ್ದರು.

ರಾಮ್‌ನಾಥ್‌ ಕೋವಿಂದ್‌ ಅವರು ಕೋಲಿ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಅವರನ್ನು ಭೇಟಿ ಮಾಡಲೆಂದು ಕೋಲಿ ಸಮುದಾಯದ ಮುಖಂಡ ರಂಗಸ್ವಾಮಿ ನೇತೃತ್ವದಲ್ಲಿ ಸಮುದಾಯದ ಕೆಲವು ಮುಖಂಡರು ಹಾಗೂ ಬಹುಜನ ಸಂಘರ್ಷ ಸಮಿತಿ ಕಾರ್ಯಕರ್ತರು ಬೆಳಗ್ಗೆಯಿಂದಲೇ ಕಾಯುತ್ತಿದ್ದರು. ಆದರೂ ಅವಕಾಶ ಸಿಗದ ಕಾರಣ ಕೋವಿಂದ್‌ ಅವರ ಭೇಟಿಗೆ ಅವಕಾಶ ಮಾಡಿಕೊಡುವಂತೆ ಶಾಸಕ ಅರವಿಂದ್‌ ಲಿಂಬಾವಳಿ ಅವರಿಗೆ ಮನವಿ ಮಾಡಿದ್ದರು. ಆದರೆ, ಭದ್ರತೆ ದೃಷ್ಟಿಯಿಂದ ಎನ್‌ಎಸ್‌ಜಿ ಕಮಾಂಡೋಗಳು ಅವಕಾಶ ನೀಡಿರಲಿಲ್ಲ.

ಈ ಮಧ್ಯೆ ರಮಾನಾಥ್‌ ಕೋವಿಂದ್‌ ಅವರು ನಿಗದಿತ ಅವಧಿಗೆ ಮುನ್ನವೇ ಹೊರಡಬೇಕಾಗಿದ್ದರಿಂದ ಸಭೆ ಮುಗಿಯುತ್ತಿದ್ದಂತೆ ಯಾರನ್ನು ಭೇಟಿ ಮಾಡದೆ ಕಾರು ಏರಿ ಎಚ್‌ಎಎಲ್‌ ವಿಮಾನ ನಿಲ್ದಾಣದತ್ತ ಹೊರಟರು. ಇದರಿಂದ ಆಕ್ರೋಶಗೊಂಡ ಕೋಲಿ ಸಮುದಾಯದ ಮುಖಂಡರು ಭೇಟಿಗೆ ಅವಕಾಶ ಮಾಡಿಕೊಡಲಿಲ್ಲ ಎಂದು ಅರವಿಂದ್‌ ಲಿಂಬಾವಳಿ ಅವರ ಮೇಲೆ ಮುಗ್ಗಿಬಿದ್ದರು. ಈ ವೇಳೆ ತಳ್ಳಾಟ ನೂಕ್ಕಾಟ ನಡೆಯಿತು. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿದ ಪೊಲೀಸರು ಕೂಡಲೇ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ನಂತರ ಪೊಲೀಸ್‌ ಭದ್ರತೆಯಲ್ಲಿ ಲಿಂಬಾವಳಿ ಅವರನ್ನು ಹೋಟೆಲ್‌ ಆವರಣದಿಂದ ಕಳುಹಿಸಿಕೊಟ್ಟರು.

ಅವರ ಹಿಂದೆ ಬಂದ ಸಂಸದ ಪ್ರಹ್ಲಾದ ಜೋಶಿ ಅವರ ಕಾರಿಗೂ ಮುತ್ತಿಗೆ ಹಾಕಲು ಯತ್ನಿಸಿದ ಸಮುದಾಯದ ಮುಖಂಡರು, ಕೋವಿಂದ್‌ ಅವರ ಭೇಟಿಗೆ ಅವಕಾಶ ನೀಡದಿರಲು ಕಾರಣವೇನು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಹೋಟೆಲ್‌ ಎದುರೇ ಕೆಲ ಕಾಲ ಅರವಿಂದ್‌ ಲಿಂಬಾವಳಿ ವಿರುದ್ಧ ಘೋಷಣೆ ಕೂಗಿ ನಂತರ ಸ್ಥಳದಿಂದ ತೆರಳಿದರು.

Advertisement

ಘಟನೆ ಸಂಬಂಧ ಯಾರೂ ದೂರು ನೀಡಿಲ್ಲ. ಹೀಗಾಗಿ ಪ್ರಕರಣ ಕೂಡ ದಾಖಲಾಗಿಲ್ಲ. ರಾಮ್‌ನಾಥ್‌ ಕೋವಿಂದ್‌ ಅವರ ಬೇಟಿಗೆ ಅವಕಾಶ ನಿರಾಕರಿಸಿದರು ಎಂಬ ಕಾರಣಕ್ಕೆ ಬಿಜೆಪಿ ಮುಖಂಡರ ವಿರುದ್ಧ ಘೋಷಣೆ ಕೂಗಿದ ಕೋಲಿ ಸಮುದಾಯದ ಮುಖಂಡರು ಅಲ್ಲಿಂದ ತೆರಳಿದರು ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಸ್ಪಷ್ಟನೆ
ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್‌ ಕೋವಿಂದ್‌ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಕೋಲಿ ಸಮುದಾಯ ಸೇರಿದಂತೆ ಕೆಲವು ಸಮುದಾಯಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರೇ ಹೊರತು ಯಾರ ಮೇಲೂ ಹಲ್ಲೆ ನಡೆದಿಲ್ಲ. ಅರವಿಂದ ಲಿಂಬಾವಳಿ ಅವರು ತಮ್ಮ ಕಾರಿಗೆ ಹತ್ತುವ ವೇಳೆ ತಳ್ಳಾಟ ನಡೆಯಿತೇ ಹೊರತು ಜಟಾಪಟಿ ನಡೆದಿಲ್ಲ. ಕೋವಿಂದ್‌ ಅವರು ದೆಹಲಿಗೆ ವಾಪಸಾಗಬೇಕಿದ್ದ ವಿಮಾನದ ಸಮಯ ಬದಲಾವಣೆಯಾಗಿದ್ದರಿಂದ ಅವರು ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆ ಕುರಿತಂತೆ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಉಪಾಧ್ಯಕ್ಷ ರಾಜಗೋಪಾಲ ರೆಡ್ಡಿ ಅವರು ಸ್ಪಷ್ಟನೆ ನೀಡಿದ್ದು, ರಾಮ್‌ನಾಥ್‌ ಕೋವಿಂದ್‌ ಭೇಟಿಗೆ ಅವಕಾಶ ಸಿಗದ ಕಾರಣಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು ಹೊರತುಪಡಿಸಿ ಬೇರಾವುದೇ ಘಟನೆ ನಡೆದಿಲ್ಲ. ಅರವಿಂದ ಲಿಂಬಾವಳಿ ನಮ್ಮ ನಾಯಕರಾಗಿದ್ದು, ಅವರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next