ನವದೆಹಲಿ:ಒಂದು ವೇಳೆ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಸರಕಾರಿ ಉದ್ಯೋಗದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆಯೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಜನರಿಗೆ ಉಚಿತ ಭರವಸೆಗಳನ್ನು ನೀಡುವುದನ್ನೂ ಕೂಡಾ ರಾಜಕೀಯ ಪಕ್ಷಗಳು ಮುಂದುವರಿಸಿವೆ ಎಂದು ವರದಿ ತಿಳಿಸಿದೆ.
ಶುಕ್ರವಾರ (ಫೆ.05) ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಕೇಜ್ರಿವಾಲ್, ಯುವಕರನ್ನು ಪಂಜಾಬ್ ನಿಂದ ಬಲವಂತವಾಗಿ ವಿದೇಶಕ್ಕೆ ಕಳುಹಿಸಲಾಗುತ್ತಿದೆ. ಈ ವ್ಯಕ್ತಿಗಳು ತಮ್ಮ ಜಮೀನುಗಳನ್ನು ಕೇವಲ 20-25ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ಒಂದು ವೇಳೆ ಇದು ಮುಂದುವರಿದರೆ ಪಂಜಾಬ್ ನಲ್ಲಿ ಏನಾಗಬಹುದು? ಆ ರೀತಿ ಆಗಲು ನಾವು (ಎಎಪಿ) ಬಿಡುವುದಿಲ್ಲ. ಒಂದು ವೇಳೆ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದರೆ ಸರ್ಕಾರಿ ಉದ್ಯೋಗದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ತಿಳಿಸಿದ್ದಾರೆ.
ರಾಜ್ಯದ ಅಧಿಕಾರದ ಗದ್ದುಗೆ ಹಿಡಿದ ವಿರೋಧ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೇಜ್ರಿವಾಲ್, ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷ 26 ವರ್ಷ ಆಡಳಿತ ನಡೆಸಿದೆ. ಶಿರೋಮಣಿ ಅಕಾಲಿ ದಳ 19 ವರ್ಷ ಪಂಜಾಬ್ ನಲ್ಲಿ ಅಧಿಕಾರ ನಡೆಸಿತ್ತು ಎಂದು ಹೇಳಿದರು.
ಒಂದು ವೇಳೆ ನೀವು(ಮತದಾರರು) ನಮಗೆ ಮತ ಚಲಾಯಿಸಿದರೆ ಕೈಗಾರಿಕಗಳು ಮತ್ತೆ ತಲೆಎತ್ತಲಿದೆ, ಹೊಸ ಕೈಗಾರಿಕೆಗಳಿಗೆ ಅವಕಾಶವಾಗಲಿದೆ, ಹೊಸ ಶಾಲೆ, ಹೊಸ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಇದನ್ನು ನಾವು ದೆಹಲಿಯಲ್ಲಿ ಮಾಡಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.