ನವದೆಹಲಿ: ದಿಲ್ಲಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸತತ ಆರು ಗಂಟೆಗಳ ಕಾಲ ನಾಮಪತ್ರ ಸಲ್ಲಿಸಲು ಕಾಯುತ್ತಿದ್ದು, ಕೇಜ್ರಿವಾಲ್ ನಾಮಪತ್ರ ಸಲ್ಲಿಸುವುದನ್ನು ತಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಪ್ ಆರೋಪಿಸಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಗಿಂತ ಮೊದಲೇ 44 ಮಂದಿ ಸ್ವತಂತ್ರ ಅಭ್ಯರ್ಥಿಗಳು ಟೋಕನ್ ಪಡೆದಿದ್ದು, ಕೇಜ್ರಿವಾಲ್ ಅವರಿಗೆ 45ನೇ ನಂಬರ್ ಟೋಕನ್ ದೊರಕಿರುವುದಾಗಿ ವರದಿ ತಿಳಿಸಿದೆ. ಸೋಮವಾರ ಭರ್ಜರಿ ರೋಡ್ ಶೋ ಹಿನ್ನೆಲೆಯಲ್ಲಿ ಕೇಜ್ರಿವಾಲ್ ನಾಮಪತ್ರ ಸಲ್ಲಿಸುವ ಅವಕಾಶದಿಂದ ವಂಚಿತರಾಗಿದ್ದರು ಎಂದು ವರದಿ ವಿವರಿಸಿದೆ.
ಅರವಿಂದ್ ಕೇಜ್ರಿವಾಲ್ ಅವರ ನಾಮಪತ್ರ ಸಲ್ಲಿಸುವುದನ್ನು ತಡೆಯಲು ಬಿಜೆಪಿ 40ಕ್ಕಿಂತಲು ಹೆಚ್ಚು ಮಂದಿಯನ್ನು ನಾಮಪತ್ರ ಸಲ್ಲಿಸಲು ಕಳುಹಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ನಾನು ನಾಮಪತ್ರ ಸಲ್ಲಿಸಲು ಕಾಯುತ್ತಿದ್ದೇನೆ. ನನ್ನ ಟೋಕನ್ ನಂಬರ್ 45. ಇಲ್ಲಿ ಹಲವಾರು ಮಂದಿ ನಾಮಪತ್ರ ಸಲ್ಲಿಸಲು ಕಾಯುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಹಲವು ಜನರು ಭಾಗಿಯಾಗುತ್ತಿರುವುದು ಸಂತೋಷದ ವಿಷಯ ಎಂದು ಕೇಜ್ರಿವಾಲ್ ಮಧ್ಯಾಹ್ನ ಟ್ವೀಟ್ ಮಾಡಿದ್ದರು.
ಮುಖ್ಯಮಂತ್ರಿ ಚಿಂತಿಸಬೇಕಾದ ಅಗತ್ಯವಿಲ್ಲ. ಯಾರು 3ಗಂಟೆಯೊಳಗೆ ಚುನಾವಣಾಧಿಕಾರಿ ಕಚೇರಿಯೊಳಗೆ ಇದ್ದಿರುತ್ತಾರೋ ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶ ಕೊಡಲೇಬೇಕು ಎಂದು ಆಪ್ ಹೇಳಿದೆ. ಅರವಿಂದ್ ಕೇಜ್ರಿವಾಲ್ ಗಿಂತ ಮೊದಲು 44 ಮಂದಿಯನ್ನು ಬಿಜೆಪಿ ವ್ಯವಸ್ಥಿತವಾಗಿ ಕಳುಹಿಸಿದೆ. ಚುನಾವಣಾ ಆಯೋಗ ಕೂಡಾ ಪ್ರತಿಯೊಬ್ಬರ ನಾಮಪತ್ರಕ್ಕೆ ಅರ್ಧ ಅಥವಾ ಒಂದು ಗಂಟೆ ಕಾಲಾವಕಾಶ ನೀಡುತ್ತಿದೆ. ಅದರಲ್ಲಿ ಹಲವು ಅಭ್ಯರ್ಥಿಗಳ ನಾಮಪತ್ರ ಪೂರ್ಣವಾಗಿಲ್ಲ ಎಂದು ಮನೀಶ್ ಸಿಸೋಡಿಯಾ ಟ್ವೀಟ್ ನಲ್ಲಿ ದೂರಿದ್ದಾರೆ.
ಭಾರತೀಯ ಜನತಾ ಪಕ್ಷ ಏನೇ ಮಾಡಲಿ, ನೀವು ಕೇಜ್ರಿವಾಲ್ ನಾಮಪತ್ರ ಸಲ್ಲಿಸುವುದನ್ನು ತಡೆಯಲು ಸಾಧ್ಯವಿಲ್ಲ. ಜತೆಗೆ ಸತತ ಮೂರನೇ ಬಾರಿ ಕೇಜ್ರಿವಾಲ್ ಸಿಎಂ ಆಗುವುದನ್ನು ತಡೆಯಲು ಆಗುವುದಿಲ್ಲ. ನಿಮ್ಮ ಸಂಚು ಯಶಸ್ವಿಯಾಗುವುದಿಲ್ಲ ಎಂದು ಸಿಸೋಡಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.