ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ (AAP) ಅರವಿಂದ್ ಕೇಜ್ರಿವಾಲ್ ಜಂತರ್ ಮಂತರ್‌ನಲ್ಲಿ ಭಾನುವಾರ(ಸೆ22 ) ಜನತಾ ಕಿ ಅದಾಲತ್ ಕಾರ್ಯಕ್ರಮ ನಡೆಸಿದರು. ಈ ವೇಳೆ ಆರ್ ಎಸ್ ಎಸ್(RSS) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ 5 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಎಲ್ಲಾ ಗೌರವಗಳೊಂದಿಗೆ, ನಾನು ಮೋಹನ್ ಭಾಗವತ್ ಜಿ ಅವರಿಗೆ ಐದು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ಮೋದಿ ಜಿ ದೇಶಾದ್ಯಂತ ಪಕ್ಷಗಳನ್ನು ಒಡೆಯುವ ಮತ್ತು ಇಡಿ ಮತ್ತು ಸಿಬಿಐಗೆ ಆಮಿಷ ಒಡ್ಡುವ ಮೂಲಕ, ಬೆದರಿಕೆ ಹಾಕುವ ಮೂಲಕ ಸರಕಾರಗಳನ್ನು ಉರುಳಿಸುತ್ತಿದ್ದಾರೆ, ಇದು ಸರಿಯೇ?
ಮೋದಿಯವರು ಅತ್ಯಂತ ಭ್ರಷ್ಟ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ, ಅವರೇ ಭ್ರಷ್ಟರೆಂದು ಕರೆದಿದ್ದಾರೆ, ಅಂತಹ ರಾಜಕೀಯವನ್ನು ನೀವು ಒಪ್ಪುತ್ತೀರಾ?
“ಬಿಜೆಪಿ ಹುಟ್ಟಿದ್ದು ಆರ್‌ಎಸ್‌ಎಸ್‌ನ ಗರ್ಭದಿಂದ, ಬಿಜೆಪಿ ದಾರಿ ತಪ್ಪದಂತೆ ನೋಡಿಕೊಳ್ಳುವುದು ಆರ್‌ಎಸ್‌ಎಸ್‌ನ ಜವಾಬ್ದಾರಿ, ನೀವು ಎಂದಾದರೂ ಮೋದಿಜಿ ತಪ್ಪು ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿದ್ದೀರಾ?
ಲೋಕಸಭೆ ಚುನಾವಣೆ ವೇಳೆ ಜೆಪಿ ನಡ್ಡಾ ಅವರು ಆರ್‌ಎಸ್‌ಎಸ್ ಅಗತ್ಯವಿಲ್ಲ ಎಂದು ಹೇಳಿದ್ದರು. ಮಗ ಇಷ್ಟು ಬೆಳೆದಿದ್ದಾನಾ? ಮಗ ತನ್ನ ಅಸಮಾಧಾನವನ್ನು ಮಾತೃಸಂಸ್ಥೆಯ ಮೇಲೆ ತೋರಿಸುತ್ತಿದ್ದಾನೆ. ಅವನು ಹೀಗೆ ಹೇಳಿದಾಗ ನಿಮಗೆ ಬೇಸರವಾಗಲಿಲ್ಲವೇ?
75 ವರ್ಷಗಳ ನಂತರ ನಾಯಕರು ನಿವೃತ್ತರಾಗುತ್ತಾರೆ ಎಂದು ಕಾನೂನನ್ನು ಮಾಡಿದ್ದೀರಿ.ಮೋದಿ ಜಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಅಡ್ವಾಣಿ ಅವರಿಗೆ ಅನ್ವಯಿಸಿದ್ದು ಮೋದಿಜಿಗೆ ಏಕೆ ಅನ್ವಯಿಸುವುದಿಲ್ಲ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರು ತನ್ನ ಪ್ರಾಮಾಣಿಕತೆಯನ್ನು ಅನುಮೋದಿಸುವವರೆಗೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಪಣ ತೊಟ್ಟಿದ್ದಾರೆ.