Advertisement

ಕುತೂಹಲ ಕೆರಳಿಸಿದ ಕಮಲ್‌-ಕೇಜ್ರಿ ಭೇಟಿ

01:15 PM Sep 22, 2017 | Team Udayavani |

ಚೆನ್ನೈ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗುರುವಾರ ಮುಂಜಾನೆ ಚೆನ್ನೈಗೆ ತೆರಳಿ ತಮಿಳು ಸೂಪರ್‌ಸ್ಟಾರ್‌ ಕಮಲ್‌ ಹಾಸನ್‌ರನ್ನು ಭೇಟಿಯಾಗಿದ್ದಾರೆ. ಈ  ಮೂಲಕ ಬಹುಭಾಷಾ ನಟನ ರಾಜಕೀಯ ನಡೆ ನಿಗೂಢವಾಗುತ್ತಾ ಸಾಗಿದೆ.

Advertisement

ಕಳೆದೊಂದು ತಿಂಗಳ ಅವಧಿಯಲ್ಲಿ ಕಮಲ್‌ ಹಾಸನ್‌ ಭೇಟಿ ಮಾಡಿರುವ ಎರಡನೇ ಹೈ ಪ್ರೊಫೈಲ್‌ ರಾಜಕಾರಣಿ ಕೇಜ್ರಿವಾಲ್‌. ಸೆಪ್ಟೆಂಬರ್‌ ಆರಂಭದಲ್ಲೇ ತಿರುವನಂತಪುರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಕಮಲ್‌, ನಂತರ ಸಿಪಿಎಂ ಮುಖಂಡ ಸೀತಾರಾಮ್‌ ಯೆಚೂರಿ ಅವರನ್ನೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ಕೂಡ ನಟನ ಬೆಂಬಲಕ್ಕೆ ನಿಂತಿದೆ. ಈ ನಡುವೆ ದಿಲ್ಲಿ ಸಿಎಂ ಭೇಟಿ ಮತ್ತಷ್ಟು ಕುತೂಹಲ ಕೆರಳಿಸಿದೆ.

ಗುರುವಾರ ಬೆಳಗ್ಗೆಯೇ ಕೇಜ್ರಿವಾಲ್‌ ವಿಮಾನವೇರಿ ಚೆನ್ನೈ ತಲುಪಿದಾಗ, ಕಮಲ್‌ ಹಾಸನ್‌ರ ಕಿರಿಯ ಪುತ್ರಿ ಅಕ್ಷರಾ ಹಾಸನ್‌ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ದಿಲ್ಲಿ ಸಿಎಂ ಅಲ್ಲಿಂದ ನೇರವಾಗಿ ಅಲ್ವಾರ್‌ಪೇಟ್‌ನಲ್ಲಿರುವ ಕಮಲ್‌ ಮನೆಗೆ ತೆರಳಿದ್ದು, ಇಬ್ಬರೂ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾರೆ. ನಂತರ ಜತೆಗೆ ಕುಳಿತು ಊಟ ಕೂಡ ಮಾಡಿದ್ದಾರೆ. ಈ ದಿಢೀರ್‌ ಹಾಗೂ ಮಹತ್ವದ ಭೇಟಿ ವೇಳೆ ಚರ್ಚಿಸಿದ ವಿಷಯಗಳ ಕುರಿತು ನಟ ಕಮಲ್‌ ಹಾಸನ್‌ ಆಗಲಿ, ದಿಲ್ಲಿ ಸಿಎಂ ಕೇಜ್ರಿವಾಲ್‌ ಆಗಲಿ ಹೆಚ್ಚಿನ ಮಾಹಿತಿ ನೀಡಿಲ್ಲ.

ನಾವು ಸಂಬಂಧಿಗಳು
ಮಾತುಕತೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನಟ ಕಮಲ್‌ ಹಾಸನ್‌, ‘ಭ್ರಷ್ಟಾಚಾರದ ವಿರುದ್ಧ ಹೋರಾಡುವ ಎಲ್ಲರೂ ನನಗೆ ಒಡನಾಡಿಗಳಿದ್ದಂತೆ. ಆರಂಭದಿಂದಲೂ ನಾನು ಕೇಜ್ರಿವಾಲ್‌ರ ಕಾರ್ಯಗಳನ್ನು ಮೆಚ್ಚಿ, ಗೌರವಿಸುತ್ತಾ ಬಂದಿದ್ದೇನೆ. ಹಾಗೇ ನಮ್ಮಿಬ್ಬರ ಆಲೋಚನೆಗಳು ಒಂದೇ ಆಗಿವೆ,’ ಎಂದು ಹೇಳಿದ್ದಾರೆ. ಜತೆಗೆ “ಭ್ರಷ್ಟಾಚಾರ ಹಾಗೂ ಕೋಮುವಾದದ ವಿರುದ್ಧ ಗಂಭೀರವಾಗಿ ಹೋರಾಡುವ ಯಾರನ್ನೇ ಆದರೂ ಭೇಟಿ ಮಾಡಲು ನಾನು ಹಿಂಜರಿಯುವುದಿಲ್ಲ,’ ಎಂದು ಹೇಳಿದ್ದಾರೆ.

ನಾನವರ ದೊಡ್ಡ ಅಭಿಮಾನಿ
ಇದೇ ವೇಳೆ, “ವ್ಯಕ್ತಿಗತವಾಗಿ ಹಾಗೂ ಒಬ್ಬ ಶ್ರೇಷ್ಠ ನಟರಾಗಿ ಕಮಲ್‌ ಸದಾ ನನ್ನನ್ನು ಪ್ರೇರೇಪಿಸಿದ್ದು, ನಾನು ಅವರ ದೊಡ್ಡ ಅಭಿಮಾನಿ,’ ಎಂದಿರುವ ದಿಲ್ಲಿ ಸಿಎಂ, “ಮಾತುಕತೆ ವೇಳೆ ನಾವಿಬ್ಬರೂ ನಮ್ಮ ಅನಿಸಿಕೆ ಹಂಚಿಕೊಂಡಿದ್ದೇವೆ. ದೇಶದಲ್ಲಿ ಭ್ರಷ್ಟಾಚಾರ ಹಾಗೂ ಕೋಮುವಾದ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಕಮಲ್‌ ಹಾಸನ್‌ ರಾಜಕೀಯ ಪ್ರವೇಶಿಸಲೇಬೇಕಾದ ಅನಿವಾರ್ಯತೆ ಇದೆ. ಹಿಂದೆ ಕೂಡ ನಾವಿಬ್ಬರೂ ಸಾಕಷ್ಟು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಿದೆ. ಮುಂದೆ ಕೂಡ ನಾವು ಭೇಟಿಯಾಗುತ್ತಿರುತ್ತೇವೆ,’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next