ಹೊಸದಿಲ್ಲಿ:”ಆಮ್ ಆದ್ಮಿ ಪಕ್ಷದ ಉನ್ನತ ನಾಯಕರು ಭಾನುವಾರ (ಮೇ 19) ಬಿಜೆಪಿ ಪ್ರಧಾನ ಕಚೇರಿಗೆ ಬರುತ್ತೇವೆ. ಎಲ್ಲರನ್ನೂ ಬಂಧಿಸಿ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.
ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಆರೋಪದಲ್ಲಿ ಅವರ ಸಹಾಯಕ ಬಿಭವ್ ಕುಮಾರ್ ಅವರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ “ಪ್ರಧಾನಿ ಜೈಲಿನ ಆಟ ಆಡುತ್ತಿದ್ದಾರೆ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.
”ನಾಳೆ ನನ್ನ ಎಲ್ಲ ಪ್ರಮುಖ ನಾಯಕರು, ಶಾಸಕರು, ಸಂಸದರೊಂದಿಗೆ ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಕೇಂದ್ರ ಕಚೇರಿಗೆ ಬರುತ್ತಿದ್ದೇನೆ.ಯಾರನ್ನು ಬೇಕಾದರೂ ಜೈಲಿಗೆ ಹಾಕಬಹುದು” ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ.
‘ಆಪ್ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ದೆಹಲಿ ಸಚಿವೆ ಅತಿಶಿ, ಸೌರಭ್ ಭಾರದ್ವಾಜ್ ಅವರನ್ನು ಕೂಡ ಬಿಜೆಪಿ ಜೈಲಿಗೆ ಕಳುಹಿಸಲಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಾಜಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಬಂಧನ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಕೇಜ್ರಿವಾಲ್ ವಿರುದ್ಧದ ಪಿತೂರಿಯ ಭಾಗವಾಗಲು ಬಿಜೆಪಿ ಬ್ಲ್ಯಾಕ್‌ಮೇಲ್ ಮಾಡಲು ಅವರನ್ನು ಬಳಸಿಕೊಂಡಿದೆ ಎಂದು ಆಪ್ ಆರೋಪಿಸಿದೆ.