ಚಂಡಿಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮತ್ತೊಂದೆಡೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಜ್ರಿವಾಲ್ ವಿರುದ್ಧ ಗಂಭೀರವಾದ ಆರೋಪ ಹೊರಿಸಿದ್ದಾರೆ.
ಇದನ್ನೂ ಓದಿ:ಇಂದು ದರ್ಶನ್ ಹುಟ್ಟುಹಬ್ಬ: ಹೊಸ ಸಿನಿಮಾಗಳ ಫಸ್ಟ್ ಲುಕ್ ರಿಲೀಸ್
ಅರವಿಂದ್ ಕೇಜ್ರಿವಾಲ್ ಭಯೋತ್ಪಾಕದರ ಬಗ್ಗೆ ಮೃದು ಧೋರಣೆ ಹೊಂದಿದ್ದು, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ವಿಶ್ವಾಸಾರ್ಹವಾದ ವ್ಯಕ್ತಿಯಲ್ಲ ಎಂದು ರಾಹುಲ್ ಗಾಂಧಿ ದೂರಿದ್ದಾರೆ. ಕಾಂಗ್ರೆಸ್ ಮುಖಂಡರು ಯಾವತ್ತೂ ಉಗ್ರರ ಮನೆಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಆಪ್ ನ ದೊಡ್ಡ ನಾಯಕ ಉಗ್ರನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಇದು ಸತ್ಯ ಎಂದು ಪಂಜಾಬ್ ನ ಬರ್ನಾಲಾದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ರಾಹುಲ್ ಗಾಂಧಿ ಈ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
2017ರ ಚುನಾವಣೆಯ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ನ ಮೋಗಾದಲ್ಲಿ ಮಾಜಿ ಖಲಿಸ್ತಾನಿ ಉಗ್ರನ ಮನೆಯಲ್ಲಿ ವಾಸ್ತವ್ಯ ಹೂಡಿರುವುದಾಗಿ ವರದಿ ಹೇಳಿದೆ. ಸರಕಾರ ರಚಿಸಲು ನಮಗೊಂದು ಅವಕಾಶ ಕೊಡಿ ಎಂದು ಕೇಳುತ್ತಿರುವವರು (ಆಪ್) ಪಂಜಾಬ್ ಅನ್ನು ನಾಶ ಮಾಡುತ್ತಾರೆ ಮತ್ತು ರಾಜ್ಯ ಹೊತ್ತಿ ಉರಿಯಬಹುದು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ ಗಡಿಪ್ರದೇಶದಲ್ಲಿರುವ ರಾಜ್ಯವಾಗಿದೆ. ಇದೊಂದು ಸೂಕ್ಷ್ಮವಾದ ಪ್ರದೇಶ. ಕಾಂಗ್ರೆಸ್ ಪಕ್ಷ ಮಾತ್ರ ಪಂಜಾಬ್ ಜನರ ನಾಡಿ ಮಿಡಿತ ಅರಿತಿದೆ ಮತ್ತು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುತ್ತಿದೆ ಎಂದು ರಾಹುಲ್ ಹೇಳಿದರು.