ಮಂಗಳೂರು: ಯಕ್ಷಗಾನ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರು ತನ್ನಂತೆ ರಂಗದಲ್ಲಿ ಮೆರೆದ ಕಲಾವಿದರಿಗೆ ಪ್ರಶಸ್ತಿ ನೀಡುತ್ತಿರುವುದು ಅವರ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಪುರಭವನದಲ್ಲಿ ಬುಧವಾರ ನಡೆದ ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ದಶಮಾನೋತ್ಸವ ಮತ್ತು ಅರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಗಳೂರಿನ ಶ್ರೀದೇವಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ವಿದ್ಯಾರತ್ನ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಿನೆಮಾ ನಿರ್ಮಾಪಕ ತಾರಾನಾಥ ಶೆಟ್ಟಿ ಬೋಳಾರ, ಶಶಿಧರ ಶೆಟ್ಟಿ ಅರುವ ಅತಿಥಿಗಳಾಗಿದ್ದರು.
ಅರುವ ಪ್ರಶಸ್ತಿ ಪ್ರದಾನ
ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಕಲಾವಿದರಾದ ಕುರಿಯ ಗಣಪತಿ ಶಾಸ್ತ್ರಿ, ಸಂಜಯ್‌ಕುಮಾರ್ ಗೋಣಿಬೀಡು, ಕಡಬ ರಾಮಚಂದ್ರ ರೈ, ಮೋಹನ ಶೆಟ್ಟಿಗಾರ್ ಮುಚ್ಚಾರು, ರಾಧಾಕೃಷ್ಣ ನಾವಡ ಮಧೂರು, ರಘುನಾಥ ಶೆಟ್ಟಿ ಬಾಯಾರು ಗಂಗಯ್ಯ ಶೆಟ್ಟಿ ಗೇರುಕಟ್ಟೆ (ಮರಣೋತ್ತರ), ಗಂಗಾಧರ ಶೆಟ್ಟಿ ನಾವೂರು (ಮರಣೋತ್ತರ) ಅವರಿಗೆ 10,000 ರೂ. ನಗದು ಸಹಿತ ಅರುವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಕ್ಷಣ ಮತ್ತು ಧಾರ್ಮಿಕ ಸೇವೆಗಾಗಿ ಜಾರಪ್ಪ ಶೆಟ್ಟಿ ಕಕ್ಯಪದವು, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು, ಉದ್ಯಮಿಯಾದವ ಕೋಟ್ಯಾನ್ ಪೆರ್ಮುದೆ, ಸಮಾಜ ಸೇವೆಗೆ ಡಿ.ಆರ್. ರಾಜು, ಯಕ್ಷಗಾನ ಸೇವೆಗಾಗಿ ಸತ್ಯಪಾಲ ರೈ ಕಡೆಂಜ ಅವರನ್ನು ಸಮ್ಮಾನಿಸಲಾಯಿತು.
ಶಾಂತಾರಾಮ ಕುಡ್ವ ಮೂಡಬಿದಿರೆ ಅಭಿನಂದನಾ ಭಾಷಣ ಮಾಡಿದರು. ಅರುವ ಕೊರಗಪ್ಪ ಶೆಟ್ಟಿ, ಕೆ. ದೇವಿಪ್ರಸಾದ್ ಶೆಟ್ಟಿ ಅರುವ, ಕರುಣಾಕರ ಶೆಟ್ಟಿ ಮೂಲ್ಕಿ, ಎ. ಕಷ್ಣ ಶೆಟ್ಟಿ ತಾರೆಮಾರ್ ಉಪಸ್ಥಿತರಿದ್ದರು.