Advertisement

ಕೃತಕ ಕಾಲಿನಿಂದ ಮೌಂಟ್‌ ಎವರೆಸ್ಟ್‌ ಏರಿದ ಅರುಣಿಮಾ ಸಿನ್ಹಾ

03:47 PM Oct 15, 2020 | Karthik A |

ಅಂಗವಿಕಲತೆಯ ನಡುವೆಯೂ ಜೀವನೋತ್ಸಾಹ ಕಳೆದುಕೊಳ್ಳದೇ ನಮಗೆಲ್ಲರಿಗೂ ಮಾದರಿಯಾದವಳು. ಕೃತಕ ಕಾಲಿನ ಮೂಲಕವೇ ಹಿಮಾಲಯವನ್ನು ಮೆಟ್ಟಿ ನಿಂತವಳು.

Advertisement

ಅವಳೇ ದಿಟ್ಟ ಯುವತಿ ಅರುಣಿಮಾ ಸಿನ್ಹಾ. ರಾಷ್ಟ್ರೀಯ ವಾಲಿಬಾಲ್‌ ತಂಡದ ಆಟಗಾರ್ತಿಯಾಗಿದ್ದ ಈಕೆ ಉತ್ತರ ಪ್ರದೇಶದ ಅಂಬೇಡ್ಕರ್‌ ನಗರದಲ್ಲಿ ಹುಟ್ಟಿ ಬೆಳೆದವಳು. ತನ್ನ 3ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಳು. ಈಕೆ ಭಾರತೀಯ ಸೇನೆಯಲ್ಲಿ ಎಂಜಿನಿಯರ್‌ ಆಗಿದ್ದು, ತಾಯಿ ಆರೋಗ್ಯ ಇಲಾಖೆಯ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಎಳವೆಯಿಂದಲೂ ಆಟದಲ್ಲಿ ಆಸಕ್ತಿ ಹೊಂದಿದ್ದ ಅರುಣಿಮಾ ವಾಲಿಬಾಲ್‌ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಳು.

ಸಿಐಎಸ್‌ಎಫ್ ಸೇರಲು ಪರೀಕ್ಷೆಗಾಗಿ ದೆಹಲಿಗೆ ಪ್ರಯಾಣಿಸುವಾಗ ರೈಲಲ್ಲಿ ಕಳ್ಳರು ಈಕೆಯ ಬ್ಯಾಗ್‌ ಮತ್ತು ಸರ ಕದ್ದು ರೈಲಿನಿಂದ ಹೊರದಬ್ಬುತ್ತಾರೆ. ಇದೇ ವೇಳೆಗೆ ಎದುರಿನಿಂದ ಬಂದ ಇನ್ನೊಂದು ರೈಲಿನ ಚಕ್ರಕ್ಕೆ ಸಿಲುಕಿ ಬಲಗಾಲು ಕಳೆದುಕೊಳ್ಳುತ್ತಾಳೆ.

ಪ್ರಜ್ಞೆ ತಪ್ಪಿದ ಈಕೆಯನ್ನು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿಸಲಾಗುತ್ತದೆ. ವೈದ್ಯರು ಈಕೆಯ ಬಲಗಾಲನ್ನು ಮೊಣಕಾಲಿನ ವರೆಗೂ ಕತ್ತರಿಸುತ್ತಾರೆ. ಆದರೆ ಪ್ರಜ್ಞೆ ಬಂದಾಗ ಅರುಣಿಮಾ ಮಾನಸಿಕವಾಗಿ ಜರ್ಝರಿತಳಾಗಿದ್ದಳು, ವಾಲಿಬಾಲ್‌ ಕನಸು ಛಿದ್ರವಾಗಿತ್ತು.

ಇದೆಲ್ಲದರ ಮಧ್ಯೆ ಆಕೆ ಛಲ ಬಿಡಲಿಲ್ಲ ಜಗತ್ತಿನ ಅತೀ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಕನಸನ್ನು ಕಾಣಲಾರಂಭಿಸಿದಳು. ವಿಚಲಿತಗೊಳ್ಳದೇ ಗುರಿ ಸಾಧನೆಯಡೆಗೆ ಗಮನ ಕೇಂದ್ರೀಕರಿಸಿದಳು. ಕೃತಕ ಕಾಲಿನ ಜೋಡಣೆಯಾದ ಬಳಿಕ ಸಮರ್ಪಕವಾಗಿ ನಡೆಯಲು ಹಲವು ತಿಂಗಳು ಅಥವಾ ವರ್ಷಗಳೇ ಬೇಕು. ಆತ್ಮಸ್ಥೈರ್ಯದ ಬುಗ್ಗೆಯಾದ ಅರುಣಿಮಾ ಕಲವೇ ದಿನದಲ್ಲಿ ಎಲ್ಲರಂತೆ ನಡೆಯಲಾರಂಭಿಸಿದಳು. ಮೌಂಟ್‌ ಎವರೆಸ್ಟ್‌ ಏರಲು ಏನು ಮಾಡಬೇಕೆಂದು ಚಿಂತನೆ ನಡೆಸಿದಳು. ಅದಕ್ಕಾಗಿ 1984ರಲ್ಲಿ ಮೌಂಟ್‌ ಎವರೆಸ್ಟ್‌ ಏರಿದ್ದ ಭಾರತದ ಪ್ರಥಮ ಮಹಿಳೆ ಬಚೆಂದ್ರಿಪಾಲ್‌ ಅವರಲ್ಲಿ ತರಬೇತಿಯನ್ನು ಪಡೆದಳು.

Advertisement

ರೈಲು ಅವಘಡದ 2 ವರ್ಷಗಳ ತರುವಾಯ ಅರುಣಿಮಾ ತನ್ನ 26ನೇ ವಯಸ್ಸಿನಲ್ಲಿ ಕೃತಕ ಕಾಲಿನ ಮೂಲಕವೇ ಮೌಂಟ್‌ ಎವರೆಸ್ಟ್‌ ಏರಿದ ಮೊದಲ ಭಾರತೀಯ ಮಹಿಳೆ ಎನ್ನುವ ಕೀರ್ತಿ ಪತಾಕೆ ಹಾರಿಸಿದಳು. 2013ರ ಮೇ 21ರಂದು ಬೆಳಗ್ಗೆ 10.55ಕ್ಕೆ 17 ಗಂಟೆಗಳ ದೀರ್ಘ‌ ಸಾಹಸದ ಮೂಲಕ ಅರುಣಿಮಾ ಎವರೆಸ್ಟ್‌ ಶಿಖರದ ಶೃಂಗವನ್ನು ತಲುಪಿದಳು. ಶಿಖರದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ನೆಟ್ಟು, ಅದರ ಮುಂದೆ ವಿವೇಕಾನಂದ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾಳೆ. ಶೃಂಗದಲ್ಲಿ ಆಮ್ಲಜನಕದ ಕೊರತೆಯಿಂದ ಕೊನೆಯುಸಿರೆಳೆಯುವ ಹಂತಕ್ಕೆ ತಲುಪಿದ್ದಾಗ ಬ್ರಿಟಿಷ್‌ ಪರ್ವತಾರೋಹಿಯೊಬ್ಬರು ಆಕೆಗೆ ಆಮ್ಲಜನಕ ನೀಡಿ ಸಹಕರಿಸಿದರು.

ಸಾಧನೆಯ ರುಚಿ ಹಿಡಿದಮೇಲೆ ಅಲ್ಲಿಗೇ ನಿಲ್ಲುತ್ತದೆಯೇ. ಅನಂತರ ಆಫ್ರಿಕಾದ ಮೌಂಟ್‌ ಕಿಲಿಮಂಜಾರೊ, ಯೂರೋಪ್‌ನ ಎಲ್‌ಬುರ್, ಆಸ್ಟ್ರೇಲಿಯಾದ ಕೋಜಿಸ್ಕೊ, ಅರ್ಜೆಂಟಿನಾದ ಅಕೊಂಕಾಗುವ ಮತ್ತು ಇಂಡೋನೇಷ್ಯಾದ ಪುನ್‌ಚಕ್‌ ಜಾಯಾ ಏರಿದ ಸಾಧನೆ ಮಾಡಿದ್ದಾಳೆ.

ಅರುಣಿಮಾ 2015ರಲ್ಲಿ ಪದ್ಮಶ್ರೀ ಮತ್ತು ತೆನ್ಜಿಂಗ್‌ ನಾರ್ಗೆ ನ್ಯಾಷನಲ್‌ ಅಡ್ವೆಂಚರ್‌ ಪ್ರಶಸ್ತಿ, 2016ರಲ್ಲಿ ಫ‌ಸ್ಟ್‌ ಲೇಡಿ ಪ್ರಶಸ್ತಿ, ಮಲಾಲಾ ಪ್ರಶಸ್ತಿ, ಮಾತಿ ರತನ್‌ ಸಮ್ಮಾನ್‌, ಯಶ್‌ಭಾರತಿ ಪ್ರಶಸ್ತಿ, ರಾಣಿ ಲಕ್ಷ್ಮೀ ಬಾಯಿ ಪ್ರಶಸ್ತಿ ದೊರೆತಿದೆ. ಈಕೆ “ಬಾರ್ನ್ ಅಗೇನ್‌ ಆನ್‌ ಎ ಮೌಂಟೇನ್‌’ ಎನ್ನುವ ಪುಸ್ತಕ ಕೂಡ ಬರೆದಿದ್ದು, 2014ರಲ್ಲಿ ಪ್ರಧಾನಿ ಮೋದಿ ಇದನ್ನು ಬಿಡುಗಡೆ ಮಾಡಿದ್ದಾರೆ.


ಸಂತೋಷ್‌ ರಾವ್‌, ಪೆರ್ಮುಡ, ಬೆಳ್ತಂಗಡಿ
ಅಂಕಣ: ಅತಿಥಿ ಅಂಗಳ

Advertisement

Udayavani is now on Telegram. Click here to join our channel and stay updated with the latest news.

Next