ಉಡುಪಿ: ರಂಗಭೂಮಿ ರಂಗೋತ್ಸವದಲ್ಲಿ ಹಿರಿಯ ನಟಿ, ರಂಗಕರ್ಮಿ ಪದ್ಮಶ್ರೀ ಅರುಂಧತಿ ನಾಗ್ ಅವರಿಗೆ “ರಂಗಭಾರತಿ’ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶನಿವಾರ ಎಂಜಿಎಂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ ಹವ್ಯಾಸಿ ರಂಗಭೂಮಿಗೆ ಸಿರಿತನವಿದ್ದು, ಉಡುಪಿಯಲ್ಲೂ ರಂಗ ಶಂಕರ ಆರಂಭವಾಗಲಿ, ಕಲಾವಿದರಿಗೆ ಇನ್ನಷ್ಟು ಅವಕಾಶ ಸಿಗುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಮಾತನಾಡಿ, ರಂಗಭೂಮಿ ಕಲಾವಿದರು ಎಂದಿಗೂ ಪ್ರಬುದ್ಧರು. ಕಲಾವಿದರು ರಂಗಭೂಮಿಯಿಂದ ಸಿನೆಮಾಕ್ಕೆ ಹೋಗಿ ಖ್ಯಾತಿಗಳಿಸಿದ ಅನಂತರ ರಂಗಭೂಮಿಯನ್ನು ಮರೆಯಬಾರದು. ಯುವ ಜನತೆ ರಂಗಭೂಮಿ ಕಡೆಗೆ ಹೆಚ್ಚೆಚ್ಚು ಬರಬೇಕು ಎಂದು ಹೇಳಿದರು.
ರಾಜ್ಯ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ಬಿ.ವಿ. ರಾಜಾರಾಮ್, ಯುವ ಉದ್ಯಮಿ ಅಜಯ್ ಪಿ. ಶೆಟ್ಟಿ, ನಿರ್ದೇಶಕ ಕೆ.ಎಂ. ಚೈತನ್ಯ, ರಂಗಕರ್ಮಿ ಗುಂಡಣ್ಣ ಸಿ.ಕೆ., ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಪ್ರವರ್ತಕ ವಿಶ್ವನಾಥ ಶೆಣೈ, ರಂಗಭೂಮಿ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಕಿದಿಯೂರು, ರಾಜಗೋಪಾಲ್ ಬಲ್ಲಾಳ್ ಉಪಸ್ಥಿತರಿದ್ದರು.
ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಅಭಿನಂದನ ಭಾಷಣ ಮಾಡಿದರು. ರಂಗಭೂಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಸ್ತಾವನೆಗೈದರು. ವಿವೇಕಾನಂದ ಪ್ರಶಸ್ತಿ ಪತ್ರ ವಾಚಿಸಿದರು. ಡಾ| ವಿಷ್ಣುಮೂರ್ತಿ ಪ್ರಭು ನಿರೂಪಿಸಿ, ಹರೀಶ್ ಕಲ್ಮಾಡಿ ವಂದಿಸಿದರು. ಅನಂತರ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದಿಂದ ಹ್ಯಾಂಗ್ ಆನ್ ನಾಟಕ ಪ್ರದರ್ಶನಗೊಂಡಿತು.
ಸಿನೆಮಾದ ಕೆಟ್ಟ ಕಲಾವಿದ ರಂಗಭೂಮಿಗೆ ಬೇಡ
ಕೆಟ್ಟ ನಟ ಸಿನೆಮಾದಲ್ಲಿ ಏನೂ ಮಾಡಲಾಗದೇ ವಾಪಸ್ ರಂಗಭೂಮಿಗೆ ಬಂದು ನಾಟಕ ರಂಗವನ್ನು ಹಾಳು ಮಾಡುವಂತಾಗಬಾರದು. ಒಳ್ಳೆಯ ಕಲಾವಿದರು ರಂಗಭೂಮಿಗೆ ಬರಬೇಕು. ಸಿನೆಮಾದ ಕೆಟ್ಟ ಕಲಾವಿದರು ರಂಗಭೂಮಿಗೆ ಬೇಡ ಎಂದು ಅರುಂಧತಿ ನಾಗ್ ಗೋಷ್ಠಿಯಲ್ಲಿ ಹೇಳಿದರು.
ಸಾಮಾಜಿಕ ಸ್ಥಾನಮಾನ, ಪ್ರಚಾರ, ರಾಜಕೀಯ, ಹಣಕ್ಕಾಗಿ ಹವ್ಯಾಸಿ ಕಲಾವಿದರು ರಂಗ ಚಟುವಟಿಕೆಗೆ ಬರುವುದಿಲ್ಲ. ಆತ್ಮತೃಪ್ತಿಗಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಕಂಡಿದ್ದೇನೆ. ರಂಗಭೂಮಿಗೆ ರಾಜಕೀಯ, ಧರ್ಮ ತರಬಾರದು. ವಿದೇಶದಲ್ಲಿ ಇರುವ ರಂಗ ಚೌಕಟ್ಟು ನಮ್ಮಲ್ಲಿ ಬರಬೇಕು ಎಂದರು.
ಕಲ್ಕೂರ ಬಿಲ್ಡರ್ ಆ್ಯಂಡ್ ಡೆವಲಪರ್ನ ಆಡಳಿತ ನಿರ್ದೇಶಕ ರಂಜನ್ ಕಲ್ಕೂರ ಅವರು “ಅರುಂಧತಿ ನಾಗ್ ಇವರೊಂದಿಗೆ ನಾವು-ನೀವು’ ಗೋಷ್ಠಿ ಉದ್ಘಾಟಿಸಿದರು.