ನವದೆಹಲಿ: ಪರ್ವತಮಯ ರಸ್ತೆಯೊಂದರಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಈಗ ಮತ್ತೂಂದು ಹೆಜ್ಜೆ ಮುಂದೆ ಹೋಗಿ, ತವಾಂಗ್‌ನಲ್ಲಿನ ಹಿಮದ ಮೇಲೆ ಆಲ್-ಟೆರೈನ್ ವೆಹಿಕಲ್(ಎಟಿವಿ) ಅಂದರೆ ಎಲ್ಲ ರೀತಿಯ ಭೂಪ್ರದೇಶಗಳ ಮೇಲೂ ಸಂಚರಿಸಬಲ್ಲಂತಹ ವಾಹನವನ್ನು ಚಾಲನೆ ಮಾಡುವ ಮೂಲಕ ಸಾಹಸ ಮೆರೆದಿದ್ದಾರೆ. ತಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸಾಹಸಕ್ಕೆ ಕೈಹಾಕಿರುವುದಾಗಿ 40 ವರ್ಷದ ಪೆಮಾ ಖಂಡು ಹೇಳಿಕೊಂಡಿದ್ದಾರೆ.
ನೆಲದಿಂದ 15,600 ಅಡಿ ಎತ್ತರದಲ್ಲಿ ಭಾರತ-ಟಿಬೆಟ್/ಚೀನಾ ಗಡಿಯಲ್ಲಿನ ತವಾಂಗ್ ಜಿಲ್ಲೆಯ ಪಿಟಿಎಸ್‌ಒ ಸರೋವರದಿಂದ ಮಾಗೋ ಎಂಬ ಪ್ರದೇಶದವರೆಗೆ 107 ಕಿ.ಮೀ. ಫೋರ್-ವೀಲ್ ಡ್ರೈವ್ ಸಾಹಸ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದಾರೆ.
ಒಂದು ಬದಿಯಲ್ಲಿ ಹಿಮಚ್ಛಾದಿತ ಪರ್ವತ ಪ್ರದೇಶ, ಮತ್ತೂಂದು ಬದಿಯಲ್ಲಿ ಆಳವಾದ ಕಮರಿ… ಇವುಗಳ ನಡುವೆ ಉಸಿರುಬಿಗಿಹಿಡಿದು ವಾಹನ ಚಾಲನೆ ಮಾಡುವುದೇ ಖುಷಿ ಎಂದು ಖಂಡು ಹೇಳಿದ್ದಾರೆ.
ಪೊಲಾರಿಸ್ ಎಂಬ ಕಂಪನಿಯ ನ್ಪೋರ್ಟ್ಸ್ ಯುಟಿಲಿಟಿ ವಾಹನವಾಗಿದೆ ಎಟಿವಿ. ಇದು ಆರ್‌ಝೆಡ್‌ಆರ್800 ಮಾಡೆಲ್‌ನದ್ದಾಗಿದ್ದು, ಎರಡು-ಸಿಲಿಂಡರ್, 760 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. ಬೈಕಿಂಗ್ ಮತ್ತು ಸಾಹಸ ಕ್ರೀಡೆಗಳಿಗೆ ಅರುಣಾಚಲವು ಹೇಳಿ ಮಾಡಿಸಿದ ಜಾಗವಾಗಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು ನನ್ನ ಗುರಿ ಎಂದು ಖಂಡು ಟ್ವೀಟ್ ಮಾಡಿದ್ದಾರೆ.