ಹೊಸದಿಲ್ಲಿ: ಕಿಡ್ನಿ ಕಸಿಯಾಗಿ ಮೂರು ತಿಂಗಳ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹಣಕಾಸು ಖಾತೆಯನ್ನು ಗುರುವಾರ ಮತ್ತೆ ವಹಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜೇಟ್ಲಿ ಅವರ ಮರು ನಿಯೋಜನೆ ಮಾಡಿರುವ ಕುರಿತು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಜೇಟ್ಲಿ ಅವರು ಹಣಕಾಸು ಖಾತೆಯೊಂದಿಗೆ,ಕಾರ್ಪೋರೇಟ್ ವ್ಯವಹಾರಗಳ ಖಾತೆಯನ್ನೂ ನಿರ್ವಹಿಸಲಿದ್ದಾರೆ.
65 ರ ಹರೆಯದ ಜೇಟ್ಲಿ ಅವರು ಎಪ್ರಿಲ್ ತಿಂಗಳಿನಿಂದ ಹಣಕಾಸು ಖಾತೆ ನಿರ್ವಹಣೆಯಿಂದ ದೂರ ಉಳಿದಿದ್ದರು. ಹಣಕಾಸು ಖಾತೆಯನ್ನು ಪಿಯೂಷ್ ಗೋಯಲ್ ಅವರು ನಿರ್ವಹಿಸಿದ್ದರು.
ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳದೆ ಸಂಪೂರ್ಣ ವಿಶ್ರಾಂತಿಯಲ್ಲಿದ್ದ ಜೇಟ್ಲಿ ಅವರು ಅಗಸ್ಟ್ 9 ರಂದು ರಾಜ್ಯಸಭಾ ಚುನಾವಣೆ ಮತದಾನಕ್ಕಾಗಿ ಸಂಸತ್‌ಗೆ ಆಗಮಿಸಿದ್ದರು.
2014 ರಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿಗೆ ಜೇಟ್ಲಿ ಒಳಗಾಗಿದ್ದರು.ಹೀಗಾಗಿ ವೈದ್ಯರು ವಿಶೇಷ ನಿಗಾ ವಹಿಸುವಂತೆ ಸೂಚನೆ ನೀಡಿದ್ದರು.