ನವದೆಹಲಿ: ದೀರ್ಘಕಾಲೀನ ಅನಾರೋಗ್ಯದಿಂದ ಶನಿವಾರದಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮತ್ತು ಮಾಜೀ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ನಿಗಮ್ ಬೋಧ್ ಘಾಟ್ ನಲ್ಲಿ ನಡೆಸಲಾಯಿತು.
ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಬಿಜೆಪಿಯ ಪ್ರಧಾನ ಕಛೇರಿಯಲ್ಲಿ ಇರಿಸಲಾಗಿತ್ತು. ಏಮ್ಸ್ ಆಸ್ಪತ್ರೆಯಿಂದ ಜೇಟ್ಲಿ ಅವರ ಮೃತದೇಹವನ್ನು ಕೈಲಾಶ್ ಕಾಲನಿಯಲ್ಲಿರುವ ಅವರ ನಿವಾಸಕ್ಕೆ ತೆಗೆದುಕೊಂಡು ಹೋದ ಬಳಿಕ ಪಕ್ಷದ ಪ್ರಧಾನ ಕಛೇರಿಗೆ ತೆಗೆದುಕೊಂಡು ಹೋಗಲಾಯಿತು.
ರಾಜಕೀಯ, ಉದ್ಯಮ, ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳ ಗಣ್ಯರು ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದರು. ಬಳಿಕ ಅಲ್ಲಿಂದ ಅವರ ಮೃತದೇಹವನ್ನು ನಿಗಮ್ ಬೋಧ್ ಘಾಟ್ ಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಅಲ್ಲಿ ಅಂತಿಮ ಧಾರ್ಮಿಕ ವಿಧಿವಿಧಾನಗಳನ್ನು ಹಿಂದೂ ಸಂಪ್ರದಾಯದಂತೆ ನಡೆಸಲಾಯಿತು. ಬಳಿಕ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಇರಿಸಿದ್ದ ಚಿತೆಗೆ ಅವರ ಪುತ್ರ ರೋಹನ್ ಅವರು ಅಗ್ನಿ ಸ್ಪರ್ಶ ಮಾಡಿದರು. ಸಕಲ ಸರಕಾರಿ ಗೌರವಗಳೊಂದಿಗೆ ಅಗಲಿದ ರಾಜಕೀಯ ಮುತ್ಸದ್ಧಿಯ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು.
ಈ ಮೂಲಕ ದೇಶದ ರಾಜಕೀಯ ರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಸಂಪಾದಿಸಿದ್ದ ಮತ್ತು ಆ ಮೂಲಕ ತನ್ನ ಪಕ್ಷಕ್ಕೊಂದು ಅಮೂಲ್ಯ ಆಸ್ತಿಯಾಗಿ ಹೊರಹೊಮ್ಮಿದ್ದ ಚೇತನವೊಂದು ತನ್ನ ನೆನಪನ್ನು ಉಳಿಸಿ ಮರೆಯಾದಂತಾಗಿದೆ.