ಮುಂಬಯಿ : ಅಂಡರ್ ವರ್ಲ್ಡ್ ಡಾನ್ ಅರುಣ್ ಗಾವಳಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸಿದ್ಧಾಂತಗಳ ಪರಿಕಲ್ಪನೆಯನ್ನು ಆಧರಿಸಿದ ಪರೀಕ್ಷೆಯಲ್ಲಿ ಟಾಪರ್ ಆಗಿ ಮೂಡಿಬಂದಿರುವುದಾಗಿ ವರದಿಯಾಗಿದೆ. ಒಟ್ಟು 80 ಅಂಕಗಳ ಈ ಪರೀಕ್ಷೆಯಲ್ಲಿ ಗಾವಳಿ 74 ಅಂಕಗಳಿಸಿ ತನ್ನ ಪ್ರತಿಭೆಯನ್ನು ಸಾದರಪಡಿಸಿರುವುದು ಗಮನಾರ್ಹವಾಗಿದೆ ಎಂದು ವರದಿ ಹೇಳಿದೆ.
ಗಾಂಧೀಜಿಯವರ ಸಿದ್ಧಾಂತಗಳ ಪರಿಕಲ್ಪನೆ ಕುರಿತಾಗಿ ನಡೆಸಲಾಗಿದ್ದ ಈ ಪರೀಕ್ಷೆಯನ್ನು ನಾಗ್ಪುರ ಸೆಂಟ್ರಲ್ ಜೈಲಿನ 160 ಕೈದಿಗಳು ಬರೆದಿದ್ದರು.
ವರ್ಷಂಪ್ರತಿ ಗಾಂಧಿ ಜಯಂತಿಯ ಮುನ್ನಾ ದಿನ ಈ ಪರೀಕ್ಷೆಯನ್ನು ಅಕ್ಟೋಬರ್ 1ರಂದು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಸಹಯೋಗ ಟ್ರಸ್ಟ್ ಮತ್ತು ಸರ್ವೋದಯ ಆಶ್ರಮ ಜತೆಗೂಡಿ ನಡೆಸುತ್ತವೆ.
2008ರಲ್ಲಿ ಶಿವಸೇನೆಯ ಶಾಸಕ ಕಮಲಾಕರ ಜಮ್‌ಸಂದೇಕರ್ ಹತ್ಯೆಗೆ ಸಂಬಂಧಿಸಿ 2012ರ ಆಗಸ್ಟ್ ನಲ್ಲಿ ಗಾವಳಿಗೆ ಮುಂಬಯಿಯ ಸೆಶನ್ಸ್ ಕೋರ್ಟ್ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಗಾವಳಿ ಅಖೀಲ ಭಾರತೀಯ ಸೇನಾ ಸ್ಥಾಪಕ.
ಗಾವಳಿಯನ್ನು ಮುಂಬಯಿಯಲ್ಲಿ ಸಾಕಿನಾಕಾ ಪೊಲೀಸರು ಬಂಧಿಸಿದ್ದರು. ಕೊಲೆ ಆರೋಪದ ಮೇಲೆ ಐಪಿಸಿ ಸೆ.302, 149, 120ಬಿ, ಮತ್ತು ಮಕೋಕಾ ಕಾಯಿದೆಯ ಸೆ. 3(1), 3(2) ಮತ್ತು 3(4)ರ ಪ್ರಕಾರ ಕೇಸು ದಾಖಲಾಗಿತ್ತು.
ಗಾವಳಿ ಕುರಿತ ಬಾಲಿವುಡ್ ಚಿತ್ರವೂ ಬಂದಿತ್ತು; ಗಾವಳಿ ಪಾತ್ರವನ್ನು ಅರ್ಜುನ್ ರಾಮಪಾಲ್ ನಿರ್ವಹಿಸಿದ್ದರು. ರಾಜಕೀಯದಲ್ಲೂ ಗಾವಳಿ ತನ್ನ ಅದೃಷ್ಟ ಪರೀಕ್ಷಿಸಿದ್ದ.