ಮಣ್ಣಲ್ಲಿ ಹುಟ್ಟಿ, ಮಣ್ಣಲ್ಲಿ ಬೆಳೆದ ಪ್ರತಿಯೊಂದು ಜೀವಿಗಳು ಕೊನೆಗೆ ಮಣ್ಣಲ್ಲಿ ಮಣ್ಣಾಗುವುದೇ ಪ್ರಕೃತಿಯ ನಿಯಮ. ಹಾಗಾಗಿ ಮಣ್ಣಿನ ಜತೆಗೆ ನಮ್ಮ ನಂಟು ನಿತ್ಯ ನಿರಂತರ. ಅನ್ನ ಮತ್ತು ನೆಲೆ ನೀಡುವ ಮಣ್ಣಿನಲ್ಲಿ ಸುಂದರ ಕಲಾಕೃತಿಗಳನ್ನು ಸೃಷ್ಟಿಸಲು ನಮಗೆ ಪ್ರಕೃತಿಯೇ ಪ್ರೇರಣೆ. ಎಳೆಯ ಮಗುವಿನ ಮೊದಲ ಆಟವೇ ಮಣ್ಣಿನ ಜೊತೆಗೆ. ಹಾಗಾಗಿ ಎಳೆಯ ರೊಂದಿಗೆ ಹಿರಿಯರಿಗೂ ಮಣ್ಣಿನೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದು, ಕಲಾಕೃತಿಗಳ ಸೃಷ್ಟಿಗೆ ಅವಕಾಶ ಮಾಡಿಕೊಟ್ಟದ್ದು ಮಣಿಪಾಲದ ತ್ರಿವರ್ಣ ಕಲಾಕೇಂದ್ರ. ಕ್ಲೇ ಪ್ಲೇ ಎನ್ನುವ ಮೂರು ದಿನಗಳ ಶಿಬಿರದಲ್ಲಿ, ಐದರಿಂದ- ಅರುವತ್ತು ವರುಷದ ವರೆಗಿನ ಸುಮಾರು ಅರುವತ್ತು ¤ಮಂದಿ ಕಲಾಸಕ್ತರು ಒಂದಾಗಿ ಬೆರೆತು, ತಮ್ಮ ಸುತ್ತಲಿನ ಪ್ರಾಣಿ, ಪಕ್ಷಿ, ಪರಿಕರಗಳ ಸಹಿತ ಅಳಿದ ಜೀವ ಸಂಕುಲಗಳನ್ನು ಮರು ಸೃಷ್ಟಿಸಿದರು. ಹಾಗೆಯೇ ಸಾಮಾಜಿಕ ಪಿಡುಗಿನ ಬಗ್ಗೆ ಸಂದೇಶ ನೀಡುವ ಅನಕ್ಷರತೆ, ತಂಬಾಕು ಸೇವನೆ, ಮಾದಕ ದ್ರವ್ಯ ಸೇವನೆ ಮುಂತಾದ ಸೃಜನಾತ್ಮಕ ಕಲಾಕೃತಿಗಳ ಜೊತೆಗೆ ವಿವಿಧ ಭಾವನೆಗಳ ಮುಖವಾಡಗಳು, ಕೋಟೆ-ಕೊತ್ತಲಗಳು, ಕಲಾತ್ಮಕ ಹೂ ಕುಂಡಗಳು, ಗುಡಿಸಲು- ಮನೆಗಳು, ಪಕ್ಷಿಗಳ ಪೊಟರೆಗಳು ಹೀಗೆ ಹತ್ತು ಹಲವು ಮಾದರಿಗಳು ಇಲ್ಲಿದ್ದು ಕಲಾ ಪ್ರೇಮಿಗಳ ಮನಸೂರೆಗೊಂಡವು. ಇವರಿಗೆ ಮಾರ್ಗದರ್ಶಕರಾಗಿ ಬಾಸುಮ ಕೊಡಗು, ಸುರೇಶ ಪಿ. ಕಾರ್ಕಳ, ದೇವರಾಜ ನಾಯಕ್, ಪರ್ಕಳ ಹಾಗೂ ಕಲಾಕೇಂದ್ರದ ಶಿಕ್ಷಕಿಯರಾದ ಪವಿತ್ರ ಮತ್ತು ನಯನ ಸಹಕರಿಸಿದರು. ಕಳೆದ ಮೂರು ವರುಷಗಳಿಂದ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಈ ಕೇಂದ್ರದ ನಿರ್ದೇಶಕ, ಕಲಾವಿದ ಹರೀಶ್ ಸಾಗಾ ಮತ್ತು ಬಳಗ ಅಭಿನಂದನಾರ್ಹರು.
ಕೆ. ದಿನಮಣಿ ಶಾಸ್ತ್ರೀ