ಹುಬ್ಬಳ್ಳಿ: ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸ್ ಹಾಗೂ ಮಾಧ್ಯಮದವರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಇಲ್ಲಿನ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಮರಳು ಶಿಲ್ಪ ಕಲಾಕೃತಿಯೊಂದನ್ನು ರಚಿಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ ಅದನ್ನು ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆರು ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೋವಿಡ್ 19 ಸೋಂಕಿತರು ಹಾಗೂ ಪ್ರಾಥಮಿಕ ಹಂತದಲ್ಲಿ ಸಂಪರ್ಕಕ್ಕೆ ಬಂದವರ ವಿವರ ಕಲೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ವೈದ್ಯರು ಜೀವದ ಹಂಗು ತೊರೆದು ಕೋವಿಡ್-19 ರೋಗಿಗಳ ಚಿಕಿತ್ಸೆ ಮಾಡುತ್ತಿದ್ದಾರೆ. ಕಿಮ್ಸ್ ವೈದ್ಯರ ಪರಿಶ್ರಮದಿಂದಾಗಿ ಜಿಲ್ಲೆಯ ಇಬ್ಬರು ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಸಹ ಸಮರ್ಪಣಾ ಭಾವದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಸರ್ಕಾರೇತರ ಸಂಸ್ಥೆಗಳು, ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮಾಧ್ಯಮಗಳು ಸಕ್ರಿಯವಾಗಿದ್ದು ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿವೆ. ಇವರೆಲ್ಲರಿಗೂ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ಕಲಾವಿದ ಮಂಜುನಾಥ ಹಿರೇಮಠ ಮರಳು ಶಿಲ್ಪ ರಚನೆ ಮಾಡಿದ್ದಾರೆ. ಕಲಾಕೃತಿ ಸುಂದರವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಹಂತ ಹಂತವಾಗಿ ಸಡಿಲಿಕೆ: ಕೇಂದ್ರ ಸರಕಾರದ ನಿಯಮಗಳಂತೆ ಮೊದಲ ಹಂತದಲ್ಲಿ ಗ್ರಾಮೀಣ ಭಾಗದ ಹಾಗೂ ಅಗತ್ಯ ವಸ್ತು ತಯಾರಿಸುವ ಕೈಗಾರಿಕೆ ತೆರೆಯಲು ಅನುಮತಿ ನೀಡಲಾಗಿದೆ. ಇದರ ಪರಿಣಾಮ ಅವಲೋಕಿಸಿ ಹಂತ ಹಂತವಾಗಿ ಉದ್ದಿಮೆಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಹುಬ್ಬಳ್ಳಿಯ ಬಹುತೇಕ ಕಂಟೈನ್ಮೆಂಟ್ ಜೋನ್ ಹೊರತು ಪಡಿಸಿ ಬೇರೆ ಸ್ಥಳ ಹಾಗೂ ಧಾರವಾಡ ಬೇಲೂರಿನಲ್ಲಿ ಕೈಗಾರಿಕೆಗಳು ತೆರೆದು ಆರ್ಥಿಕ ಚಟುವಟಿಕೆಗಳು ಪಾರಂಭವಾಗಲಿವೆ ಎಂದು ತಿಳಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ, ವಿಧಾನಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಪ್ರೊ| ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಹುಬ್ಬಳ್ಳಿ ನಗರ ತಹಶೀಲ್ದಾರ ಶಶಿಧರ ಮಾಡ್ಯಾಳ, ಕಲಾವಿದ ಮಂಜುನಾಥ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆರು ಅಡಿ ಎತ್ತರದ ಮರಳು ಕಲಾಕೃತಿ : ಕಲಾವಿದ ಮಂಜುನಾಥ ಹಿರೇಮಠ ಮರಳು ಕಲಾಕೃತಿ ನಿರ್ಮಿಸಿದ್ದು, ಕೊವಿಡ್-19 ತುರ್ತು ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಸಲ್ಲಿಸಬೇಕು ಎನ್ನುವ ಕಾರಣಕ್ಕೆ ಜಿಲ್ಲಾಧಿಕಾರಿಗಳ ಅಭಿಪ್ರಾಯದ ಮೇರೆಗೆ ನಿರ್ಮಾಣವಾಗಿದೆ. ಹತ್ತು ಚದರಡಿ ವಿಸ್ತೀರ್ಣ ಹಾಗೂ ಆರು ಅಡಿ ಎತ್ತರವಿದೆ. ಮರಳು ಹಾಗೂ ನೈಸರ್ಗಿಕ ಬಣ್ಣಗಳಿಂದ ರಚಿಸಲಾಗಿದೆ. ಕಲಾವಿದ ಮಂಜುನಾಥ ಹಿರೇಮಠ ನಾಲ್ಕು ತಾಸುಗಳ ಶ್ರಮವಹಿಸಿ ಅಂತಿಮ ರೂಪ ನೀಡಿದ್ದಾರೆ. ಮಾಸ್ಕ್ ಧರಿಸಿದ ಪೊಲೀಸ್, ವೈದ್ಯರು, ಹಾಗೂ ಪೌರಕಾರ್ಮಿಕರು ಭಾರತದೊಳಗೆ ಕೋವಿಡ್ 19 ತನ್ನ ಕಬಂಧ ಬಾಹು ಚಾಚದಂತೆ ತಡೆಹಿಡಿದ್ದಾರೆ. ಜನರಿಗೆ ಕೋವಿಡ್ 19 ತಿಳಿವಳಿಕೆ ನೀಡುತ್ತಿರುವ ಮಾಧ್ಯಮಗಳ ಸೂಚಕವಾಗಿ ಸುದ್ದಿವಾಹಿನಿಗಳ ಮೈಕ್, ಹಾಗೂ ಲೇಖನಿಯ ಚಿತ್ರವಿದೆ. ಕಲಾಕೃತಿಯ ಅಡಿಯಲ್ಲಿ ” ಕೋವಿಡ್ 19 ಸೈನಿಕರನ್ನು ಗೌರವಿಸೋಣ’ ಎಂಬ ಉಕ್ತಿ ಇದೆ.