ಬೆಂಗಳೂರು: ಕೇವಲ ಒಂದು ವರ್ಗವನ್ನು ಕೇಂದ್ರಿಕರಿಸಿ ಚಿತ್ರಕಲೆ ರಚಿಸಲಾಗುತ್ತಿದೆ. ಈ ಪರಂಪರೆಯನ್ನು ಭವಿಷ್ಯತ್ತಿನ ಯುವ ಕಲಾವಿದರು ಬಿಟ್ಟು ಹೊಸ ಪರಂಪರೆಗೆ ನಾಂದಿ ಹಾಡಬೇಕು.ಮಧ್ಯವ ವರ್ಗದವರನ್ನು ಕೇಂದ್ರಿಕರಿಸಿ ಚಿತ್ರರಚನೆಗೆ ಒತ್ತು ಕೊಟ್ಟಾಗ ಮಾತ್ರ ತಳಮಟ್ಟದವರೆಗೂ ತಲುಪಲು ಸಾಧ್ಯವಾಗುತ್ತಿದೆ ಎಂದು ಕಾಲೇಜ್ ಆಫ್ ಫೈನ್ ಆರ್ಟ್ಸ್ನ ಉಪನ್ಯಾಸಕ ಡಾ.ಎ.ಶ್ರೀಧರ್ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಲಲಿತಕಲಾ ಅಕಾಡೆಮಿ ಸೋಮವಾರ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಗ್ರಾಫಿಕ್ ಫೆಲೋಶಿಫ್ ಕಾರ್ಯಾಗಾರದಲ್ಲಿ ಸಿದ್ಧಪಡಿಸಿದ ಕಲಾಕೃತಿಗಳ ಕಲಾಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲಾವಿದರು ಯಾವತ್ತೂ ಕೇವಲ ಸೀಮಿತ ವರ್ಗವನ್ನು ಕೇಂದ್ರಿಕರಿಸಿ ಚಿತ್ರರಚಿಸಬಾರದು. ಕಲಾಕೃತಿಯ ರಚನೆ ಕೇವಲ ವ್ಯಾಪಾರ ಆಗಬಾರದು ಎಂದರು.
ಕಲಾಕೃತಿಗಳನ್ನು ರಚನೆ ಮಾಡುವಾಗ ಕಲಾಕೃತಿ ರಚಿಸುತ್ತಿರುವುದು ನನಗಾಗಿಯೋ,ಬೇರೆಯವರಿಗಾಗಿಯೋ ಎಂಬ ಉತ್ತರವನ್ನು ಮೊದಲು ಕಂಡು ಕೊಳ್ಳಬೇಕು. ಆ ನಂತರ ನಮ್ಮದೇ ಆದ ದಾರಿಯಲ್ಲಿ ಮುನ್ನಡೆಯಬೇಕು. ಮುದ್ರಕ ಕಲೆಗೂ ಮಹತ್ವದ ಶಕ್ತಿಯಿದ್ದು, ಹೆಚ್ಚಿನ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ವಿವರಿಸಿದರು.
ತಪ್ಪುಗಳು ಮರುಕಳಿಸುವುದಿಲ್ಲ: ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಮಾತನಾಡಿ, 2017ರಲ್ಲಿ ಗ್ರಾಫಿಕ್ ಫೆಲೋಶಿಫ್ ಕಾರ್ಯಾಗಾರ ಆರಂಭಿಸಿದ ವೇಳೆ ಕೆಲವು ಅಡೆತಡೆಗಳು ಉಂಟಾದವು. ಆ ಅಡೆತಡೆಗಳನ್ನು ದಾಟಿ ಇಲ್ಲಿಯವರೆಗೂ ಸಾಗಿ ಬಂದಿರುವುದು ತೃಪ್ತಿ ತಂದಿದೆ. ಮುಂದಿನ ಹಂತದ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳಿಗೆ ಸಮಸ್ಯೆಗಳು ಮರುಕಳಿದಂತೆ ನೋಡಿಕೊಳ್ಳುವ ಭರವಸೆ ನೀಡಿದರು.
ಗ್ರಾಫಿಕ್ ಕಲೆಗೆ ಸ್ಟುಡಿಯೋ ಬೇಕಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಅಕಾಡೆಮಿ ಕಾಳಜಿ ತೋರಿದೆ. ಮುಂದಿನ ವರ್ಷದಿಂದ ಕಾರ್ಯಾಗಾರದಲ್ಲಿ ಸಿದ್ಧಪಡಿಸಿದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಏರ್ಪಡಿಸುವ ಆಲೋಚನೆ ಮಾಡಿರುವುದಾಗಿ ಕಮಲಾಕ್ಷಿ ಸ್ಪಷ್ಪಪಡಿಸಿದರು. ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್ ಇಂದ್ರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.