ಕಲಾತಪಸ್ವಿ ಶಿರಿಯಾರ ಮಂಜು ನಾಯ್ಕರ ನೆನಪಿಗಾಗಿ ಸಾಲಿಗ್ರಾಮ ಮೇಳದ ವ್ಯವಸ್ಥಾಪಕರು ಕಲಾವಿದರ ಮತ್ತು ಯಜಮಾನರ ಬಾಂಧವ್ಯದ ನೆಲೆಯಲ್ಲಿ ನೀಡುವ ಕಲಾ ಬಾಂಧವ್ಯ ಪ್ರಶಸ್ತಿಗೆ ಈ ಬಾರಿ ಮಂದಾರ್ತಿ ಮೇಳದ ಹಿರಿಯ ಎರಡನೇ ವೇಷದಾರಿ ಆಜ್ರಿ ಗೋಪಾಲ ಗಾಣಿಗ ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಪ್ರದಾನ ನ.15ರಂದು ಶಿರಿಯಾರದಲ್ಲಿ ನಡೆಯುವ ಮೇಳದ ಪ್ರಥಮ ಡೇರೆ ಆಟದಂದು ನೆರವೇರಲಿದೆ.ಬಳಿಕ ಈ ಸಾಲಿನ ಹೊಸ ಪ್ರಸಂಗ ಚಂದ್ರಮುಖಿ-ಪ್ರಾಣಸಖಿ ಎನ್ನುವ ಆಖ್ಯಾನದ ಪ್ರದರ್ಶನ ನೆರವೇರಲಿದೆ.
ಹಾರಾಡಿ ತಿಟ್ಟಿನ ಪ್ರಾತಿನಿಧಿಕ ಕಲಾವಿದರಾದ ಆಜ್ರಿ ಗೋಪಾಲ ಗಾಣಿಗರು ಹಾರಾಡಿ ರಾಮ ಗಾಣಿಗರ ಮೊಮ್ಮಗ. ರಾಮ ಗಾಣಿಗರ ಹಾಗೆ ಕೇವಲ ಮಂದಾರ್ತಿ ಮೇಳವೊಂದರಲ್ಲೇ ಸುದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವರು. ಎರಡನೇ ವೇಷ ಪುರುಷ ವೇಷವೆರಡನ್ನೂ ಮಾಡಬಲ್ಲ ಇವರ ಕರ್ಣಾರ್ಜುನದ ಅರ್ಜುನ, ಪುಷ್ಕಳ,ಸುಧನ್ವ ಮುಂತಾದ ಪುರುಷ ವೇಷಗಳು ಹಾರಾಡಿ ಕುಷ್ಟಗಾಣಿಗರ ಪಡಿಯಚ್ಚು.
ಏಳನೇ ತರಗತಿ ಅಭ್ಯಾಸಮಾಡಿ ಆರ್ಗೋಡು ಗೋವಿಂದರಾಯ ಶೆಣೈ ಮತ್ತು ನರಸಿಂಹ ಶೆಣೈಯವರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು.ಸ್ವತಹ ಅರ್ಥದಾರಿಯಾಗಿದ್ದ ತಂದೆಯವರಿಂದ ಮಾತುಗಾರಿಕೆ ಕಲಿತ ಇವರು ಹೆಚ್ಚಿನ ಕಲಿಕೆಗಾಗಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಪಾದಾರ್ಪಣೆ ಮಾಡಿದರು.ಅಲ್ಲಿ ಹೆರಂಜಾಲು ವೆಂಕಟರಮಣ, ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲ ರಾಯರಂಥ ಘಟಾನುಘಟಿಗಳ ವಿದ್ಯಾರ್ಥಿಯಾಗಿ ಯಕ್ಷಗಾನದ ವಿವಿಧ ಅಂಗಗಳಲ್ಲಿ ಪರಿಪೂರ್ಣತೆ ಸಾಧಿಸಿದರು.ಬಾಲ ಗೋಪಾಲ ಸಖೀ ಸ್ರಿàವೇಷ ಮುಂತಾದ ಪಾತ್ರಗಳನ್ನು ಕಮಲಶಿಲೆ, ಸೌಕೂರು , ರಂಜದಕಟ್ಟೆ , ಪೆರ್ಡೂರು ಮೇಳಗಳಲ್ಲಿ ನೆರವೇರಿಸಿ ಇಡಗುಂಜಿ, ಮತ್ತು ಮೂಲ್ಕಿ ಡೇರೆ ಮೇಳಗಳಲ್ಲಿ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು.ಇವರ ಭೀಷ್ಮ, ಪರಶುರಾಮ, ರಾವಣ,ಹಿರಣ್ಯಕಶಿಪು, ಋತುಪರ್ಣ, ಕಮಲಭೂಪ, ಭೀಮ ಮುಂತಾದ ಪಾತ್ರಗಳಲ್ಲಿ ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ ಮತ್ತು ರಾಮಗಾಣಿಗರ ಜಾಪನ್ನು ಗುರುತಿಸಬಹುದು.
ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ