ದಾವಣಗೆರೆ: ಹಿರಿಯ ರಂಗಕರ್ಮಿಗಳು ಯುವ ರಂಗ ನಟ-ನಿರ್ದೇಶಕರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಬೇಕು. ಈ ಮೂಲಕ ರಂಗಭೂಮಿಯಲ್ಲಿ ಸಾಧನೆ ಮಾಡಲು ಉತ್ತೇಜಿಸಬೇಕು ಎಂದು ರಂಗ ಪರಿಚಾರಕ ಆರ್. ಶಿವಕುಮಾರಸ್ವಾಮಿ ಕುರ್ಕಿ ಹೇಳಿದರು.
ಗ್ರಂಥ ಸರಸ್ವತಿ ಪ್ರತಿಭಾ ರಂಗದ ವತಿಯಿಂದ ವಿದ್ಯಾನಗರ ಉದ್ಯಾನವನದ ಕಾವ್ಯಮಂಟಪದಲ್ಲಿ ಹಮ್ಮಿಕೊಂಡಿದ್ದ “ಮಹಾಭಾರತ ಪದ್ಮವ್ಯೂಹ’ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಟಕಗಳಲ್ಲಿ ಅದ್ಭುತವಾಗಿ ಅಭಿನಯಿಸುವ ನಟರು ತಮ್ಮ ನಿಜ ಜೀವನದಲ್ಲಿ ಕಷ್ಟದ ಬದುಕು ನಡೆಸುತ್ತಿರುತ್ತಾರೆ. ರಂಗ ಕಲಾವಿದರರು ವೇದಿಕೆ ಏರುವಾಗಿನ ಮುಂಚೆ ಹಾಗೂ ಇಳಿದ ನಂತರದ ಅವರ ಜೀವನ ಪ್ರಶ್ನಾರ್ಥಕವಾಗಿರುತ್ತದೆ. ಆರ್ಥಿಕ ಭದ್ರತೆಯೂ ಇರದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾರೆ.
ಅದೆಲ್ಲವನ್ನು ಮರೆತು ಪ್ರೇಕ್ಷಕರನ್ನು ರಂಜಿಸುವ ಕಲಾವಿದರಿಗೆ ಆರ್ಥಿಕ ಸಹಾಯ ಒದಗಿಸುವ ಸಲುವಾಗಿ ಸಂಘ-ಸಂಸ್ಥೆಗಳು ಅಲ್ಲಲ್ಲಿ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲು ಮುಂದಾಗಬೇಕಿದೆ. ಇಂತಹ ಸಾಂಸ್ಕೃತಿಕ ಜವಾಬ್ದಾರಿಯನ್ನು ರಂಗಾಸಕ್ತರು ಹೊರಲು ಮುಂದಾಗಬೇಕು ಎಂದರು.
ಕನ್ನಡನಾಡಿನ ಹೆಮ್ಮೆಯ ಸಾಣೇಹಳ್ಳಿಯ ಶಿವಸಂಚಾರ, ಹೆಗ್ಗೊàಡಿನ ನೀನಾಸಂ ಮುಂತಾದ ರಂಗಶಾಲೆಗಳು ಹಾಗೂ ಅವುಗಳಲ್ಲಿ ತಯಾರಾದ ಪ್ರತಿಭಾನ್ವಿತ ಯುವನಟರು ತಮ್ಮ ಇಡೀ ಜೀವನವನ್ನು ರಂಗಭೂಮಿಗೆ ಮುಡುಪಾಗಿಡುತ್ತಾರೆ. ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತಹ ಕಲಾವಿದರಿಗೆ ನಾವು ಕೇವಲ ಚಪ್ಪಾಳೆ ಹಾಕಿ ಖುಷಿ ಪಡಿಸದೆ ಆರ್ಥಿಕ ಸಹಾಯ ನೀಡುವ ಮೂಲಕ ಪೊÅàತ್ಸಾಹಿಸಬೇಕು ಎಂದು ತಿಳಿಸಿದರು.
“ನಾವೂ ನೀವೂ’ ರಂಗ ತಂಡದ ರಂಗಕರ್ಮಿ ಸಿದ್ದರಾಜು ಮಾತನಾಡಿ, ದಾವಣಗೆರೆಗೆ ರಂಗಮಂದಿರದ ಅವಶ್ಯಕತೆಯಿದೆ. ಈ ಕೊರತೆ ಬಹು ದಿನಗಳಿಂದಲೂ ಇದೆ. ಮಹಾನಗರಪಾಲಿಕೆ ನಗರದ ಸೂಕ್ತ ಸ್ಥಳದಲ್ಲಿ ಜಾಗ ಒದಗಿಸಿದರೆ ಅಲ್ಲಿ ವ್ಯವಸ್ಥಿತ ರಂಗಮಂದಿರವನ್ನು ಇಲ್ಲಿನ ದಾನಿಗಳ ಸಹಾಯದಿಂದ ರಂಗಾಸಕ್ತರು ಒಂದಾಗಿ ಸೇರಿ ನಿರ್ಮಿಸಲು ಪ್ರಯತ್ನಿಸುತ್ತೇವೆ ಎಂದರು. “ಮಹಾಭಾರತ ಪದ್ಮವ್ಯೂಹ’ ನಾಟಕ ಪ್ರದರ್ಶನದ ಬಳಿಕ ಸಾಲಿಯಾನ ಉಮೇಶ ನಾರಾಯಣ ಹಾಗೂ ರಾಘು ಪುರಪ್ಪೆಮನೆ ನಿರ್ದೇಶಿಸಿದ ದಕ್ಷಿಣ ಕನ್ನಡದ ಪುರಪ್ಪೆಮನೆ ಥಿಯೇಟರ್ ಸಮುರಾಯ್, ರಂಗ ತಿರುಗಾಟ ತಂಡ ಅಭಿನಯಿಸಿದ “ವೀರ ಅಭಿಮನ್ಯು’ ನಾಟಕವನ್ನು ಏಳು ಕಲಾವಿದರು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಂಡರು.
ಲೇಖಕಿ ಬಿ.ಟಿ. ಜಾನ್ಹವಿ, ನಿರಂಜನ, ಡಾ| ಎಂ.ಜಿ. ಈಶ್ವರಪ್ಪ, ರಾಮಗೊಂಡನಹಳ್ಳಿ ದಯಾನಂದ, ಕೊರಟಿಕೆರೆ ಶಿವಕುಮಾರ, ಎನ್.ಟಿ. ಮಂಜುನಾಥ್, ಶಿವಶರಣಪ್ಪ, ಚನ್ನಬಸಪ್ಪ ಪಾಟೀಲ್ ಹಾಗೂ ಹತ್ತಾರು ಜನ ಪ್ರೇಕ್ಷಕರು ಕಲಾವಿದರಿಗೆ ಆರ್ಥಿಕ ಸಹಾಯ ನೀಡಿದರು.