Advertisement

ಕಲಾವಿದರ ಕರಗಳಲ್ಲಿ ಅರಳುವ ಗಣಪ…!

06:30 PM Aug 29, 2019 | Sriram |

ವಿಶೇಷ ವರದಿ- ಕುಂದಾಪುರ: ಗಣಪತಿ ವಿಗ್ರಹ ರಚನೆಯೂ ಒಂದು ವಿಶೇಷವಾದ ಕಲೆ. ಈ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಇಂತಹ ಅಪರೂಪದ ಕಲೆಯನ್ನು ದೂರದ ಮುಂಬಯಿನಲ್ಲಿ ನೋಡಿ – ನೋಡಿಯೇ ಕಲಿತ ಹುಣ್ಸೆಮಕ್ಕಿಯ ಚಂದ್ರಶೇಖರ್‌ ನಾಯಕ್‌ ಅವರು ಸ್ವತಃ ತಾವೇ ಕಳೆದ 25 ವರ್ಷಗಳಿಂದ ಊರಲ್ಲಿ ಈ ಪುಣ್ಯದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಗಣೇಶೋತ್ಸವ ಆಚರಣೆಯ ಹುಟ್ಟು ಪಡೆದ ಮಹಾರಾಷ್ಟ್ರದ ಮುಂಬಯಿಯಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ 30 ವರ್ಷಗಳ ಹಿಂದೆ ಕೆಲಸಕ್ಕಿದ್ದಾಗ, ಅಲ್ಲೇ ಸಮೀಪದಲ್ಲಿದ್ದ ಕಾರ್ಖಾನೆಯೊಂದರಲ್ಲಿ ಗಣೇಶನ ವಿಗ್ರಹ ತಯಾರು ಮಾಡುತ್ತಿದ್ದರು. ಸಂಜೆ ವೇಳೆ ಅಲ್ಲಿಗೆ ಹೋಗುತ್ತಿದ್ದ ಚಂದ್ರಶೇಖರ್‌ ಅವರು ಆಸಕ್ತಿಯಿಂದ ನೋಡಿ – ನೋಡಿ ಕೆಲವು ದಿನಗಳಲ್ಲಿಯೇ ವಿಗ್ರಹ ರಚನೆಯನ್ನು ಕರಗತ ಮಾಡಿಕೊಂಡರು.


2-3 ತಿಂಗಳು ಗಣಪತಿ ವಿಗ್ರಹ ರಚನೆ
ಬಳಿಕ ಊರಿಗೆ ಬಂದ ಇವರು ಕಳೆದ 25 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ವಿಗ್ರಹ ತಯಾರಿಸಿ ವಿವಿಧೆಡೆಯ ಸಾರ್ವಜನಿಕ ಗಣೇಶೋತ್ಸವ, ಮನೆ – ಮನೆಗಳಲ್ಲಿ ನಡೆಯುವ ಚೌತಿ ಆಚರಣೆಗೆ ಕೊಡುವ ಕೆಲಸ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ಇವರು ಕಾರು ಚಾಲಕರಾಗಿದ್ದು, ಕ್ಲೇ ಮಾಡಲಿಂಗ್‌ನಲ್ಲಿ ವಿಶೇಷ ಆಸಕ್ತಿ. ಚೌತಿ ಹಬ್ಬ ಬಂತೆಂದರೆ 2-3 ತಿಂಗಳು ಗಣಪತಿ ವಿಗ್ರಹ ರಚನೆ ಮಾಡುವುದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರೊಂದಿಗೆ ಶಾರದೆ ಹಾಗೂ ದೇವಿಯ ಮೂರ್ತಿಗಳನ್ನು ತಯಾರಿಸುತ್ತಾರೆ.

ಪರಿಸರ ಸ್ನೇಹಿ ಗಣಪತಿ
ಚಂದ್ರಶೇಖರ್‌ ಅವರಿಗೆ ಈ ವರ್ಷ ಒಟ್ಟು 79 ಗಣೇಶನ ವಿಗ್ರಹ ಮಾಡಿಕೊಡಲು ಬೇಡಿಕೆ ಬಂದಿದೆ. ಇವರು ಆವೆ ಮಣ್ಣಿನಲ್ಲಿ ವಿನಾಯಕನ ವಿಗ್ರಹಗಳನ್ನು ಸಿದ್ಧಪಡಿಸುತ್ತಿದ್ದು, ಜತೆಗೆ ರಾಸಾಯನಿಕ ಬಣ್ಣಗಳನ್ನು ಹೊರತುಪಡಿಸಿ, ಪರಿಸರ ಸ್ನೇಹಿ ವಾಟರ್‌ ಕಲರ್‌ಗಳನ್ನುವ ಮುಂಬಯಿನಿಂದ ತರಿಸಿಕೊಂಡು ಬಳಸುತ್ತಿದ್ದಾರೆ. ಇದು ದುಬಾರಿಯಾದರೂ ಕೂಡ ಇದರಿಂದ ನೀರು ಕಲುಷಿತಗೊಳ್ಳುವುದಿಲ್ಲ ಹಾಗೂ ಸುಲಭವಾಗಿ ನೀರಲ್ಲಿ ಕರಗಿ ಹೋಗುತ್ತದೆ.

ಎಲ್ಲಿಗೆಲ್ಲ ?
ಇವರು ತಯಾರಿಸುವ ಗಣಪತಿ ವಿಗ್ರಹಗಳು ಗೋಳಿಯಂಗಡಿ, ರಟ್ಟಾಡಿ, ತೊಂಭತ್ತು, ಬಿದ್ಕಲ್‌ಕಟ್ಟೆ, ಜಪ್ತಿ, ಹೈಕಾಡಿ, ಹಾಲಾಡಿ, ಆವರ್ಸೆ, ವಂಡಾರು, ಅಮಾಸೆಬೈಲು, ಕಟಪಾಡಿ, ಉದ್ಯಾವರ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಆಚರಿಸುವ ಸಾರ್ವಜನಿಕ ಗಣೇಶೋತ್ಸವ ಆಚರಣೆಯಲ್ಲಿ ಪೂಜಿಸಲ್ಪಡುತ್ತವೆ.

ವರ್ಷ – ವರ್ಷ ಹೆಚ್ಚೆಚ್ಚು
2017 ರಲ್ಲಿ 77 ಗಣಪತಿ ವಿಗ್ರಹಗಳಿಗೆ ಬೇಡಿಕೆ ಬಂದಿದ್ದರೆ, ಕಳೆದ ವರ್ಷ 78 ಕಡೆಗಳಲ್ಲಿ ಗಣಪತಿಗಳಿಗೆ ಬೇಡಿಕೆಯಿತ್ತು. ಈ ವರ್ಷ ಇನ್ನು ಒಂದು ಹೆಚ್ಚು ಅಂದರೆ 79 ವಿನಾಯಕನ ವಿಗ್ರಹಗಳಿಗೆ ಬೇಡಿಕೆ ಬಂದಿದೆ. ಈ ವರ್ಷ ಇದರೊಂದಿಗೆ 4 ಶಾರದೆ ಹಾಗೂ 1 ದೇವಿಯ ಮೂರ್ತಿ ರಚನೆಯನ್ನು ಇವರು ಮಾಡುತ್ತಿದ್ದಾರೆ. ಇನ್ನು ಪ್ರತಿ ವರ್ಷವೂ ಗಣೇಶನ ವಿಗ್ರಹಗಳ ಗಾತ್ರವನ್ನು ಕೂಡ ಸ್ವಲ್ಪ ಮಟ್ಟಿಗೆ ಹೆಚ್ಚಿಸುವುದು ರೂಢಿ ಎನ್ನುತ್ತಾರೆ ಚಂದ್ರಶೇಖರ್‌.

Advertisement

ವಿಶೇಷವೆಂದರೆ ಇವರ ಕಿರಿಯ ಪುತ್ರ, ಎರಡನೇ ತರಗತಿಯ ಗೋಪಾಲ್‌ಗ‌ೂ ಗಣಪತಿ ವಿಗ್ರಹ ರಚಿಸುವ ಆಸಕ್ತಿಯಿದ್ದು, ತಂದೆಯ ಈ ಕಾಯಕಕ್ಕೆ ಮಗನೂ ಸಾಥ್‌ ನೀಡುತ್ತಿದ್ದಾನೆ. ಹಿಂದೆ ಚಂದ್ರಶೇಖರ್‌ ಅವರ ತಂದೆ ತಮ್ಮ ಮನೆಯಲ್ಲಿ ಪೂಜಿಸಲೆಂದು ಪ್ರತಿ ವರ್ಷ ಗಣಪನ ವಿಗ್ರಹ ಮಾಡುತ್ತಿದ್ದರು.

ಪುಣ್ಯದ ಕೆಲಸ
ಸುಮಾರು 7 ಹಂಚಿಗೆ ಆಗುವಷ್ಟು ಮಣ್ಣು ಒಂದು ಗಣಪತಿಯ ವಿಗ್ರಹ ಮಾಡಲು ಬೇಕಾಗುತ್ತದೆ. ಅಂದರೆ ಅಷ್ಟಕ್ಕೆ 85 ರೂ. ಇದ್ದು, ಅದನ್ನು ಮನೆಗೆ ಸಾಗಾಟ ಮಾಡಲು ಸೇರಿದಂತೆ ಇನ್ನಿತರ ಎಲ್ಲ ಖರ್ಚು ವೆಚ್ಚ ಸೇರಿದರೆ 7 ಹಂಚಿನ ಮಣ್ಣಿಗೆ ಸುಮಾರು 120 ರೂ. ಆಗುತ್ತದೆ. ಇದಕ್ಕೆ ಬೇಕಾದ ವಾಟರ್‌ ಕಲರ್‌ ಕೂಡ ದುಬಾರಿ. ಇದರಿಂದ ಹೆಚ್ಚೇನು ಲಾಭವಿಲ್ಲ. ಆದರೆ ಇದೊಂದು ಪುಣ್ಯದ ಕೆಲಸ. ಇದರಲ್ಲಿ ತೃಪ್ತಿಯಿದೆ.
– ಚಂದ್ರಶೇಖರ್‌ ನಾಯಕ್‌,
ವಿಗ್ರಹ ರಚನೆಕಾರರು

Advertisement

Udayavani is now on Telegram. Click here to join our channel and stay updated with the latest news.

Next