ರಾಯಚೂರು: ಲಾಕ್‌ಡೌನ್‌ನಿಂದ ಯಾವುದೇ ರಂಗ ಚಟುವಟಿಕೆಗಳು ನಡೆಯದೆ ಕಲಾವಿದರು ಜೀವನ ನಡೆಸುವುದೇ ಕಷ್ಟವಾಗಿದೆ. ಇಂಥ ವೇಳೆ ಸರ್ಕಾರ ಸಹಾಯಧನ ಘೋಷಿಸಿದ್ದು, ಅದರಲ್ಲೂ ಕೇವಲ 35 ವರ್ಷ ಮೇಲ್ಪಟ್ಟ ಕಲಾವಿದರಿಗೆ ಮಾತ್ರ ನೀಡುವುದಾಗಿ ತಿಳಿಸಿದರು ಯುವ ಕಲಾವಿದರ ಬೇಸರಕ್ಕೆ ಕಾರಣವಾಗಿದೆ.
ಈ ಬಗ್ಗೆ ಯೂತ್ ಆರ್ಟಿಸ್ಟ್ ಗಿಲ್ಡ್‌ನಿಂದ ಈಗಾಗಲೇ ರಾಜ್ಯದಲ್ಲಿ ಅನೇಕ ರೂಪದಲ್ಲಿ ಹೋರಾಟ ನಡೆಸಿ ಖಂಡಿಸಿರುವ ಯುವ ಕಲಾವಿದರು, ಸರ್ಕಾರ ಎಲ್ಲ ಕಲಾವಿದರನ್ನು ಏಕ ರೀತಿಯಲ್ಲಿ ನೋಡಲಿ ಎಂದು ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಿ ಕಲಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅದರಲ್ಲಿ ಬಹುತೇಕ ಯುವ ಕಲಾವಿದರ ಶ್ರಮವೇ ಹೆಚ್ಚಾಗಿರುತ್ತದೆ. ಆದರೆ, ಹಿರಿಯ ಕಲಾವಿದರವಾಗಲಿ, ಸರ್ಕಾರವಾಗಲಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಈಗ ರಾಜ್ಯ ಸರ್ಕಾರ ಕಲಾವಿದರಿಗಾಗಿ ಘೋಷಿಸಿರುವ ಆರ್ಥಿಕ ಪ್ಯಾಕೇಜ್ 35 ವರ್ಷ ಮೇಲ್ಪಟ್ಟವರಿಗೆ ಮಾತ್ರ ಎಂದಿರುವುದು ಕಲಾವಿದರ ಬೇಸರಕ್ಕೆ ಕಾರಣವಾಗಿದೆ. ಕಳೆದ ಎರಡು ವರ್ಷದಿಂದ ಕಲಾ ಚಟುವಟಿಕೆಗಳು ನಿಂತು ಹೋಗಿದೆ. ಇದರಿಂದ ಕೇವಲ 3 ಸಾವಿರ ರೂ. ಪರಿಹಾರ ಯವುದಕ್ಕೂ ಸಾಲುವುದಿಲ್ಲ.
ಕಲಾವಿದರಿಗೆ ಪ್ರತಿ ತಿಂಗಳು ತಲಾ ಕನಿಷ್ಠ ಹತ್ತು ಸಾವಿರ ರೂ. ಸಹಾಯಧನವಾಗಿ ಘೋಷಿಸಬೇಕು ಎಂಬುದು ಕಲಾವಿದರ ಒತ್ತಾಸೆ. ಕಲಾವಿದರನ್ನು ಗುರುತಿಸುವ ಅವರ ವಿವರಗಳನ್ನು ಕಲೆ ಹಾಕುವ ಯಾವುದೇ ಸಮೀಕ್ಷೆಗಳು ಈತನಕ ನಡೆದಿಲ್ಲ. ಸರ್ಕಾರ ಅಕಾಡೆಮಿಗಳ ಮೂಲಕ ಅಂತಹ ಯೋಜನೆ ಕೈಗೆತ್ತಿಕೊಂಡು ಇಡೀ ಕರ್ನಾಟಕದಲ್ಲಿರುವ ಕಲಾವಿದರ ಸ್ಪಷ್ಟ ಅಂಕಿ-ಅಂಶಗಳು ಸರ್ಕಾರದ ಬಳಿ ಇರುವಂತೆ ನೋಡಿಕೊಳ್ಳಬೇಕು.
ಇವು ಮುಂದಿನ ದಿನಗಳಲ್ಲಿ ಅವರಿಗೆ ಸಿಗಬೇಕಾದ ಸೌಲಭ್ಯ ಮತ್ತು ಮಾಹಿತಿ ಸಿಗುವಂತಾಗಲು ಸಹಾಯವಾಗುತ್ತದೆ. ಅದರ ಜತೆಗೆ ಸರ್ಕಾರ ಕೂಡ ಎಲ್ಲ ಕಲಾವಿದರನ್ನು ಒಂದೇ ರೀತಿ ನೋಡಲಿ ಎಂದು ಕಲಾವಿದರ ಒತ್ತಾಯವಾಗಿದೆ