Advertisement

ಪ್ರೇಕ್ಷಕರ ಗಮನಕ್ಕೆ

06:00 AM Jul 20, 2018 | Team Udayavani |

ಸಿನಿಮಾ ಮುಹೂರ್ತ ದಿನದ ಸಂತಸ, ಸಂಭ್ರಮವನ್ನು ನೋಡಿದರೆ “ಅಬ್ಟಾ ಈ ತಂಡ ಎಷ್ಟೊಂದು ಖುಷಿಯಾಗಿದೆ, ಒಗ್ಗಟ್ಟಾಗಿದೆ’ ಎಂಬ ಭಾವನೆ ಮೂಡದೇ ಇರದು. ಅದೇ ನೀವು ಸಿನಿಮಾ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಗೆ ಹೋದರೆ, “ಇಷ್ಟೇ ಜನನಾ, ಮುಹೂರ್ತ ದಿನ ಕುಣಿದು 
ಕುಪ್ಪಳಿಸಿದವರು, ಸೆಲ್ಫಿಗೆ ಫೋಸ್‌ ಕೊಟ್ಟವರು ಎಲ್ಲೋದ್ರು’ ಎಂಬ ಪ್ರಶ್ನೆ ಮೂಡದೇ ಇರದು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ನಿರ್ಮಾಪಕ ಹಾಗೂ ಒಂದಿಬ್ಬರು ಪೋಷಕ ಪಾತ್ರಧಾರಿಗಳು ಬಂದು “ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ, ಸಹಕರಿಸಿ’ ಎಂದು
ಕೇಳಿಕೊಳ್ಳುವಂತಾಗಿತ್ತು.

Advertisement

ಹೌದು, “ಪ್ರಯಾಣಿಕರ ಗಮನಕ್ಕೆ’ ಎಂಬ ಸಿನಿಮಾದ ಬಗ್ಗೆ ನೀವು ಕೇಳಿರಬಹುದು. ಚಿತ್ರ ಈಗ ಬಿಡುಗಡೆಗೆ ಹಂತಕ್ಕೆ ಬಂದಿದ್ದು, ಜುಲೈ 27 ರಂದು ತೆರೆಕಾಣುತ್ತಿದೆ. ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಗೆ ಚಿತ್ರದ ಯಾವೊಬ್ಬ ಕಲಾವಿದರು ಬಂದಿರಲಿಲ್ಲ. ಅದೇ ಸಿನಿಮಾದ ಮೊದಲ ಪತ್ರಿಕಾಗೋಷ್ಠಿ ಕಲಾವಿದರಿಂದ ತುಂಬಿ ತುಳುಕುತ್ತಿತ್ತು. ಆದರೆ, ಬಿಡುಗಡೆಯ ಹೊತ್ತಿಗೆ ಎಲ್ಲರೂ ದೂರವಾಗಿದ್ದರು. ನಿರ್ಮಾಪಕ ಏಕಾಂಗಿ. ಇತ್ತ ಕಡೆ ನಿರ್ದೇಶಕರು,
ಸಿನಿಮಾ ಕೆಲಸವೆಂದು ಅವರು ಗೈರಾಗಿದ್ದರು. ಹಾಗಾಗಿ, ನಿರ್ಮಾಪಕ ಸುರೇಶ್‌ ಹಾಗೂ ಚಿತ್ರದಲ್ಲಿ ನಟಿಸಿದ ಒಂದಿಬ್ಬರು ಕಲಾವಿದರಷ್ಟೇ ಸಿನಿಮಾ ಬಿಡುಗಡೆಯ ಬಗ್ಗೆ ಮಾತನಾಡಬೇಕಾಗಿ ಬಂತು. 

ಅಂದಹಾಗೆ, ಈ ಸಿನಿಮಾವನ್ನು ಸುರೇಶ್‌ ನಿರ್ಮಿಸಿದ್ದಾರೆ. ಬಹುತೇಕ ಸಿನಿಮಾ ಬಸ್‌ವೊಂದರಲ್ಲಿ ನಡೆಯುತ್ತದೆಯಂತೆ. “ಸಿಟಿಯಿಂದ ಹೊರಗೆ ಹೋಗುವ ಬಸ್‌ನಲ್ಲಿ ಏನೆಲ್ಲಾ ನಡೆದುಹೋಗುತ್ತೆ ಎಂಬುದರ ಮೇಲೆ ಕಥೆ ಹೆಣೆಯಲಾಗಿದೆ. ಆ ಬಸ್‌ನಲ್ಲಿ ತರಹೇವಾರಿ ಪಾತ್ರಗಳು ಬರುತ್ತವೆ, ಎಲ್ಲವನ್ನೂ ಹಾಸ್ಯಮಯವಾಗಿ ತೋರಿಸುತ್ತಲೇ, ಚಿತ್ರ ಕೊನೆಗೆ ಗಂಭೀರವಾಗುತ್ತದೆ. ಇದು ಪಕ್ಕಾ ಸ್ವಮೇಕ್‌ ಕಥೆ. “ಪ್ರಯಾಣಿಕರ ಗಮನಕ್ಕೆ’
ಹೆಸರಿಗೆ ತಕ್ಕಂತೆ ಪ್ರಯಾಣದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ, ಬೇರೆ ಬೇರೆ ವರ್ಗದ ಹಾಗೂ ವಿಚಿತ್ರ ಮನಸ್ಥಿತಿ ಇರುವಂತಹ ಏಳು ಪಾತ್ರಗಳು ಒಂದೇ ಬಸ್‌ನಲ್ಲಿ ಪ್ರಯಾಣಿಸುವಾಗ ಏನೆಲ್ಲಾ ಆಗಬಹುದು ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಇದೊಂದು ಸೆಂಟಿಮೆಂಟ್‌ ಥ್ರಿಲ್ಲರ್‌ ಸಿನಿಮಾ. ಕಾಮಿಡಿ, ಸೆಂಟಿಮೆಂಟ್‌ ಜೊತೆ ಜೊತೆಗೇ ಸಿನಿಮಾ ಸಾಗುತ್ತದೆ. ಈ ಚಿತ್ರದಲ್ಲಿ ಮಿನಿ ಬಸ್‌ ಕೂಡಾ ಪ್ರಮುಖ ಪಾತ್ರ
ವಹಿಸುತ್ತಿರುವುದು ವಿಶೇಷ. ದೂರದ ಊರಿಗೆ ಹೋಗುವ ಬಸ್ಸಿಗೆ ಪ್ರಯಾಣಿಕರನ್ನು ಪಿಕ್‌ಅಪ್‌ ಮಾಡುವ ಮಿನಿ ಬಸ್ಸಿನಲ್ಲಿ ಏಳು ಪಾತ್ರಗಳ ಸುತ್ತ ಈ ಸಿನಿಮಾ ಸುತ್ತುತ್ತದೆ’ ಎಂದು ವಿವರ ನೀಡುತ್ತಾರೆ ನಿರ್ಮಾಪಕರು. ಚಿತ್ರದಲ್ಲಿ ನಟಿಸಿದ ನಂಜಪ್ಪ, ಗಿರೀಶ್‌ ಕೂಡಾ ತಮ್ಮ ಅನುಭವ
ಹಂಚಿಕೊಂಡರು. ಚಿತ್ರ ಜಯಲಕ್ಷ್ಮೀ ಮೂವೀಸ್‌ನ ರಾಜು ವಿತರಣೆ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next