Advertisement

ಕಲಾಸಾಧನಾ ಪ್ರಶಸ್ತಿಗೆ  ರೆಂಜಾಳ ರಾಮಕೃಷ್ಣ ರಾವ್‌

12:20 PM Sep 23, 2017 | |

ಯಕ್ಷಗಾನ ಕಲಾವಿದರಲ್ಲಿ ಎರಡು ಬಗೆ. ಕೆಲವು ಕಲಾವಿದರು ಒಂದೊಂದು ಪಾತ್ರಗಳಲ್ಲಿ ಮಿಂಚುತ್ತಾರೆ. ಎಲ್ಲ ಪಾತ್ರಗಳಲ್ಲಿಯೂ ರಂಗವನ್ನು ರಂಗೇರಿಸಬಲ್ಲ ಕಲಾವಿದರೂ ಇದ್ದಾರೆ. ಎರಡನೇ ವರ್ಗಕ್ಕೆ ಸೇರಿದವರು ಕಟೀಲು ಮೇಳದ ಪ್ರಸಿದ್ಧ ವೇಷಧಾರಿ ರೆಂಜಾಳ ರಾಮಕೃಷ್ಣ ರಾವ್‌. 

Advertisement

ರೆಂಜಾಳ ರಾಮಕೃಷ್ಣ ರಾವ್‌ ಅಭಿಜಾತ ಕಲಾವಿದ. ಯಕ್ಷಗಾನ ಕಂಡ ಸವ್ಯಸಾಚಿಗಳಲ್ಲೊಬ್ಬರು. ಬಾಲ್ಯದಿಂದಲೇ ಇವರ ಆಸಕ್ತಿ, ಒಲವು ಯಕ್ಷಗಾನ. ಜೀವನ ಅದಕ್ಕೆ ಮುಡಿಪಾಗಿಡಲು ಅಂತರಂಗ ಪ್ರಚೋದಿಸಿರಬೇಕು. ಕುಡ್ಕಾ ಡಿ ವಿಶ್ವನಾಥ ರೈ ಅವರಲ್ಲಿ ಭರತನಾಟ್ಯದ ಬಾಲಾಭ್ಯಾಸ ಪಡೆದರು. ಅಗರಿ ಶ್ರೀನಿವಾಸ ಭಾಗವತರ ಆಶೀರ್ವಾದದೊಂದಿಗೆ ಕೂಡ್ಲು ಮೇಳದಲ್ಲಿ ತಿರುಗಾಟ ಆರಂಭಿಸಿದರು. ಅಡ್ಕಸ್ಥಳ ನಾರಾಯಣ ಶೆಟ್ಟಿ, ಕುಡಾಣ ಗೋಪಾಲಕೃಷ್ಣ ಭಟ್‌, ಕೊಕ್ಕಡ ಈಶ್ವರ ಭಟ್‌ ಅವರ ಪಾತ್ರನಿರ್ವಹಣೆಯನ್ನು ಗಮನಿಸಿ, ಯಕ್ಷಗಾನದ ಸರ್ವಾಂಗಗಳನ್ನೂ ಅಭ್ಯಸಿಸಿದರು.

ಮುಂದೆ ಕಡಂದೇಲು ಪುರುಷೋತ್ತಮ ಭಟ್‌, ನೆಡ್ಲೆ ನರಸಿಂಹ ಭಟ್‌, ದಿವಾಣ ಭೀಮ ಭಟ್‌ ಅವರು ರಾಮಕೃಷ್ಣ ರಾವ್‌ ಅವರನ್ನು ತಿದ್ದಿತೀಡಿ ಬೆಳೆಸಿದರು. ಯಕ್ಷ ದಿಗ್ಗಜರಾದ ಬಣ್ಣದ ಕುಟ್ಯಪ್ಪು, ಬಣ್ಣದ ಮಾಲಿಂಗ, ಕುಂಞಿರಾಮ ಮಣಿಯಾಣಿ, ದೇಲಂಪಾಡಿ ಗುಡ್ಡಪ್ಪ ಗೌಡ, ಪೆರುವಾಯಿ ನಾರಾಯಣ ಶೆಟ್ಟಿ, ಸಂಪಾಜೆ ಶೀನಪ್ಪ ರೈ ಮಾರ್ಗದರ್ಶನ ಸಿಕ್ಕಿತು. ಕಲ್ಲಾಡಿ ವಿಠಲ ಶೆಟ್ಟಿ ಮತ್ತು ಬಲಿಪ ನಾರಾಯಣ ಭಾಗವತರ ಕೊಡುಗೆ ಮಹತ್ವಪೂರ್ಣವಾಗಿತ್ತು. 

ಮಡಿಕೇರಿ ಚೌಡೇಶ್ವರೀ ಮೇಳ, ಕೂಡ್ಲು ಮೇಳಗಳಲ್ಲಿ ತಿರುಗಾಟದ ಬಳಿಕ  ಕಟೀಲು ಮೇಳ ಒಂದರಲ್ಲೇ ಕಳೆದ 40 ವರ್ಷಗಳ ಕಲಾಸೇವೆಯನ್ನು ಸಲ್ಲಿಸಿದ ರಾಮಕೃಷ್ಣ ರಾವ್‌ ಅವರು ಪ್ರಕೃತ ಹವ್ಯಾಸಿಯಾಗಿ ಕಲಾ ಸೇವೆ ಸಲ್ಲಿಸುತ್ತಿದ್ದಾರೆ.

ಪುರಾಣದ ಆಳ ಅನುಭವವಿದ್ದರೂ ಹಿತಮಿತ ಮಾತುಗಾರಿಕೆ, ಹಾಗೆಯೇ ನಾಟ್ಯಮುಖೇನ ಇಡೀ ರಂಗಸ್ಥಳ ತುಂಬಿಬಿಡುವ ಅವರ ಚಾತುರ್ಯ ಅನನ್ಯ. ಸ್ಪಷ್ಟ ಬಣ್ಣಗಾರಿಕೆ, ಲಾಲಿತ್ಯಪೂರ್ಣ ಹಾವಭಾವ, ನಾಟ್ಯಾಭಿನಯ ಆಕರ್ಷಣೀಯವಾದುದು. ಸರ್ವಾಂಗ ಸುಂದರ ವೇಷಧಾರಿಯಾಗಿ ಇವರು ರಂಗದಲ್ಲಿ ಪಾತ್ರಚಿತ್ರಣ ಮನಮೋಹಕವಾದುದು.

Advertisement

ವಿಟ್ಲ ಸಮೀಪದ ಕೋಡಪದವು ಶ್ರೀ ವೀರಾಂಜನೇಯ ಸ್ವಾಮಿ ಪ್ರತಿಷ್ಠಾನ ಯಕ್ಷಕಲಾ ವಿಶ್ವಸ್ಥ ಮಂಡಳಿ ವತಿಯಿಂದ ನೀಡುವ ಶ್ರೀ ವೀರಾಂಜನೇಯ ಸ್ವಾಮಿ ಕಲಾಸಾಧನಾ ಪ್ರಶಸ್ತಿಯನ್ನು ರೆಂಜಾಳ ರಾಮಕೃಷ್ಣ ರಾವ್‌ ಅವರಿಗೆ ಘೋಷಿಸಲಾಗಿದೆ. ನಾಳೆ, ಸೆ.23ರಂದು ಕೋಡಪದವು ಶ್ರೀ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು. 

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next