Advertisement

ಆರ್ಟ್‌, ಮ್ಯೂಸಿಕ್ಕು ಈ ವೈದ್ಯರ ಟಾನಿಕ್ಕು!

03:45 AM May 10, 2017 | |

ಸಂಗೀತ, ಚಿತ್ರಕಲೆ ಮೂಲಕವೇ ಮನೋರೋಗಗಳಿಗೆ ಮದ್ದು ನೀಡುವ ಅಪರೂಪದ ವೈದ್ಯೆ ಡಾ. ರಮ್ಯಾ ಮೋಹನ್‌. ಭಾರತ- ಇಂಗ್ಲೆಂಡಿನ ನಡುವೆ ಓಡಾಡುತ್ತಲೇ, ಈ ವಿಶಿಷ್ಟ ಚಿಕಿತ್ಸೆಗೆ ಶ್ರುತಿ ಹಾಡಿದ್ದಾರೆ…  

Advertisement

ಸಂಗೀತ, ಚಿತ್ರಕಲೆಯನ್ನು ಬೆರೆಸಿ ಮನರಂಜಿಸುವ ಕಲಾವಿದರು ಅಲ್ಲಲ್ಲಿ ಸಿಗುತ್ತಾರೆ. ಆದರೆ, ಇಲ್ಲೊಬ್ಬರು ವಿಶಿಷ್ಟ ಮನೋರೋಗ ತಜ್ಞೆ ಇದ್ದಾರೆ. “ಎಲ್ಲದಕ್ಕೂ ಆಸ್ಪತ್ರೆಯೇ ಮದ್ದಲ್ಲ’ ಎನ್ನುವ ಪಾಲಿಸಿಯವರು. ಸಮಸ್ಯೆ ಅಂತ ಹೇಳಿಕೊಂಡು ಇವರ ಬಳಿ ಯಾರೇ ಬರಲಿ, ಅವರಿಗೆ ಟ್ಯಾಬ್ಲೆಟ್‌, ಟಾನಿಕ್‌ ಬರೆದುಕೊಡುವುದಿಲ್ಲ. ಡಾ. ರಮ್ಯಾ ಮೋಹನ್‌ ಕೊಡುವ ಎರಡು ಪರಿಣಾಮಕಾರಿ ಮದ್ದು ಒಂದು ಮ್ಯೂಸಿಕ್‌, ಇನ್ನೊಂದು ಪೇಂಟಿಂಗ್‌!

ಬೆಂಗಳೂರು ಮೂಲದ ಡಾ. ರಮ್ಯಾ ಮೋಹನ್‌ ಇಂಥ ಚಮತ್ಕಾರ ಸೃಷ್ಟಿಸಬಲ್ಲ ವೈದ್ಯೆ. ಲಂಡನ್ನಿನಲ್ಲಿ ವಾಸವಿದ್ದು, ಭಾರತ- ಇಂಗ್ಲೆಂಡಿನ ನಡುವೆ ಓಡಾಡುತ್ತಲೇ, ಈ ವಿಶಿಷ್ಟ ಚಿಕಿತ್ಸೆಗೆ ಶ್ರುತಿ ಹಾಡಿದ್ದಾರೆ. ಇತ್ತೀಚೆಗೆ ಲಂಡನ್ನಿನ ಬರ್ಮಿಂಗ್‌ಹ್ಯಾಮ್‌ ಅರಮನೆಯಲ್ಲಿ “ಯುಕೆ- ಇಂಡಿಯಾ ಸಾಂಸ್ಕೃತಿಕ ಮೇಳ’ ನಡೆದಿದ್ದು ನಿಮಗೂ ಗೊತ್ತಿರಬಹುದು. ಅಲ್ಲಿ ಹೊಸತು ಎನ್ನಿಸಿದ ಕೆಲವು ಸಂಗತಿಗಳಲ್ಲಿ ಡಾ. ರಮ್ಯಾ ಪರಿಚಯಿಸಿದ “ಮ್ಯೂಸಿಕ್‌- ಆರ್ಟ್‌ ಥೆರಪಿ’ಯೂ ಒಂದು. ಗಣ್ಯರ ಮೆಚ್ಚುಗೆಗೆ ಪಾತ್ರವಾದ ಕಾರಣ ಆ ಕಾರ್ಯಕ್ರಮದ ಭಾಗವಾಗಿಯೇ ಅವರೀಗ ಇದನ್ನು ಜಗತ್ತಿಗೆ ಪರಿಚಯಿಸಲು ಹೊರಟಿದ್ದಾರೆ. ನರವಿಜ್ಞಾನದೊಂದಿಗೆ ಸಂಗೀತ- ಚಿತ್ರಕಲೆಯನ್ನು ಬೆಸೆಯುವ ವಿಶಿಷ್ಟ ಪ್ರಯತ್ನ ಪ್ರಪಂಚದಲ್ಲಿ ಇದೇ ಮೊದಲು.

ಸ್ಟೆಥೋಸ್ಕೋಪ್‌ಗ್ೂ ಸಂಗೀತಕ್ಕೂ ದೂರದ ನಂಟು. ಹಾಗೆಯೇ ಕುಂಚಕ್ಕೂ… ಆದರೆ, ರಮ್ಯಾ ಹಿಂದೂಸ್ತಾನಿ, ಕರ್ನಾಟಿಕ್‌ ಸಂಗೀತಪ್ರವೀಣೆ. ಕಲಾಕೃತಿಗಳನ್ನೂ ಅಷ್ಟೇ ಶ್ರದ್ಧೆಯಲ್ಲಿ ಅರಳಿಸುವ ಸೃಜನಶೀಲೆ. ಸಂಗೀತ, ಚಿತ್ರಕಲೆಯಲ್ಲಿ ಮುಳುಗಿದರೆ, ಮನಸ್ಸಿನ ನಾನಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಂಬ ಸತ್ಯವನ್ನು ಸ್ವತಃ ಕಂಡುಕೊಂಡು, ಅದನ್ನು ಚಿಕಿತ್ಸೆಗೆ ಮಾರ್ಪಡಿಸಿದ್ದಾರೆ. ಅದರಲ್ಲೂ ಮಕ್ಕಳು ಹದಿಹರೆಯ ಲೋಕವನ್ನು ಪ್ರವೇಶಿಸುವ ಹೊತ್ತಿನಲ್ಲಿ ಮನಸ್ಸಿನಲ್ಲಿ ನಾನಾ ತಳಮಳಗಳನ್ನು ಎದುರಿಸುತ್ತಾರೆ. ಓದಿನಲ್ಲಿ ಹಿಂದೆ ಬೀಳುತ್ತಾರೆ. ಅವರ ಮನದಲ್ಲಿ ಸಣ್ಣಪುಟ್ಟ ಸುನಾಮಿಗಳು ಏಳುತ್ತಲೇ ಇರುತ್ತವೆ. ಇವೆಲ್ಲದಕ್ಕೂ ರಮ್ಯಾ ಅವರ ಮ್ಯೂಸಿಕ್‌ ಆರ್ಟ್‌ ಥೆರಪಿಯಲ್ಲಿ ಪರಿಹಾರವಿದೆ.

“ಐಮನಸ್‌ ಲಂಡನ್‌’ ಸಂಸ್ಥೆಯ ಅಡಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ರಮ್ಯಾ ತಾವು ಸೃಷ್ಟಿಸಿದ ಚಿಕಿತ್ಸಾ ಕಲೆಯನ್ನು ಜಗತ್ತಿನ ಮುಂದಿಡುತ್ತಿದ್ದಾರೆ. ನರವಿಜ್ಞಾನ ಮತ್ತು ಔಷಧ, ಭಾಷೆ ಮತ್ತು ಶಿಕ್ಷಣ, ಕಲಾಪ್ರಯೋಗ, ದೃಶ್ಯ ಕಲೆ ಮತ್ತು ಸಂಸ್ಕೃತಿ- ಈ ಐದು ಇವರ ಚಿಕಿತ್ಸಾ ವಿಧಾನಗಳು. “ಕಲಾಪ್ರಯೋಗದಲ್ಲಿ ಬರುವ ಸಂಗೀತ ಮತ್ತು ನೃತ್ಯ, ದೃಶ್ಯಕಲೆಯಲ್ಲಿ ಕಲಿಸುವ ಪೇಂಟಿಂಗ್‌, ಫೋಟೋಗ್ರಫಿ ಮತ್ತು ವಿನ್ಯಾಸಗಳಿಗೆ ಮನಸ್ಸಿನ ಎಂಥ ಕಾಯಿಲೆಯನ್ನೂ ದೂರ ಮಾಡುವ ಶಕ್ತಿಯಿದೆ’ ಎನ್ನುತ್ತಾರೆ ರಮ್ಯಾ.

Advertisement

ಈ ಚಿಕಿತ್ಸೆಗೆ ಆಕಾರ ನೀಡುವಲ್ಲಿ ರಮ್ಯಾ ಅವರ ಶ್ರಮ ದೊಡ್ಡದು. ಸಂಗೀತಕ್ಕೆ ಇವರೇ ಸಾಹಿತ್ಯ ಬರೆದು, ಕಂಪೋಸ್‌ ಮಾಡುತ್ತಾರೆ. ಭಾರತದ ಇಬ್ಬರು ಸಂಗೀತಕಾರರೂ ಇವರಿಗೆ ಸಾಥ್‌ ನೀಡಿದ್ದಾರೆ. ಹತ್ತಾರು ಭಾವಕ್ಕೆ ತಕ್ಕಂತೆ ಹಾಡುಗಳನ್ನು ಹೊಸೆದಿದ್ದಾರೆ. ಕೆಲವು ವಿಡಿಯೋ ಹಾಡುಗಳು ಬಿಬಿಸಿಯಲ್ಲಿಯೂ ಪ್ರಸಾರಗೊಂಡಿವೆ. ಇವರ ಚಿಕಿತ್ಸಾ ವಿಧಾನ, ಸಂಗೀತ, ಚಿತ್ರಕಲೆಯ ಒಟ್ಟಾರೆ ಪರಿಚಯವಾಗಿ “ಎ ರ್ಯಾಪೊಡಿ ಆಫ್ ಆರ್ಟ್‌ ಆ್ಯಂಡ್‌ ನ್ಯೂರೋಸೈನ್ಸ್‌’ ಮೇ 8ರಿಂದ 12ರ ವರೆಗೆ ಇಂಗ್ಲೆಂಡಿನಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ  www.ramyamohan.com ಭೇಟಿ ನೀಡಬಹುದು.
ಧಿ ಸೌರಭ

Advertisement

Udayavani is now on Telegram. Click here to join our channel and stay updated with the latest news.

Next