Advertisement

31 ಮಂದಿಗೆ ಕೃತಕ ದಂತ ಪಂಕ್ತಿ ಜೋಡಣೆ

12:07 AM May 20, 2019 | Sriram |

ಉಡುಪಿ: ಶೀಘ್ರದಲ್ಲಿ ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ನಡೆಸಿ ಅರ್ಹರಿಗೆ ಉಚಿತವಾಗಿ ದಂತ ಪಂಕ್ತಿ ಜೋಡಣೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಓಂ ಪ್ರಕಾಶ್‌ ಕಟ್ಟಿಮನಿ ಹೇಳಿದರು.

Advertisement

ರಾಷ್ಟ್ರೀಯ ಬಾಯಿ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆ ಮತ್ತು ದಂತ ವೈದ್ಯಕೀಯ ವಿಭಾಗದ ವತಿಯಿಂದ ಭಾರತೀಯ ದಂತ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಮತ್ತು ಅಂಬಲಪಾಡಿ ರೋಟರಿ ಕ್ಲಬ್‌ ಸಹಯೋಗದಲ್ಲಿ ರವಿವಾರ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಿದ್ದ ಅರ್ಹ ಫ‌ಲಾನುಭವಿಗಳಿಗೆ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಾದ್ಯಂತ ಈಗಾಗಲೇ ನೊಂದಾವಣೆ ಮಾಡಿಕೊಂಡ ಬಿಪಿಎಲ್ ಕುಟುಂಬದ 45 ವರ್ಷ ಮೇಲ್ಪಟ್ಟವರಲ್ಲಿ 60 ಮಂದಿಯನ್ನು ಈ ಶಿಬಿರದಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಅರ್ಹ 31 ಮಂದಿಗೆ ಮಂಗಳೂರಿನ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನ ಪ್ರಾಸ್ತೋಡಾಂಟಿಕ್ಸ್‌ ವಿಭಾಗದ ದಂತ ವೈದ್ಯರು, ಖಾಸಗಿ ಹಾಗೂ ಸರಕಾರಿ ದಂತ ವೈದ್ಯರು ದಂತ ಭಾಗ್ಯ ಯೋಜನೆಯಡಿ ಕೃತಕ ದಂತ ಪಂಕ್ತಿಯನ್ನು ಜೋಡಣೆ ಮಾಡಿದರು.

ಅಧ್ಯಕ್ಷತೆಯನ್ನು ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ| ಮದುಸೂಧನ್‌ ನಾಯಕ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನ ಪ್ರಾಸ್ತೋಡಾಂಟಿಕ್ಸ್‌ ವಿಭಾಗದ ಡಾ| ರಕ್ಷಿತ್‌ ಹೆಗ್ಡೆ, ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ| ಚಂದ್ರಶೇಖರ್‌ ಅಡಿಗ, ಭಾರತೀಯ ದಂತ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ| ಮನೋಜ್‌ ಮ್ಯಾಕ್ಸಿಮ್‌ ಡಿ.ಲೀಮಾ, ರೋಟರಿ ಅಧ್ಯಕ್ಷ ಖಲೀಲ್ ಅಹ್ಮದ್‌, ಕಾರ್ಯದರ್ಶಿ ದುರ್ಗಾ ಪ್ರಸಾದ್‌ ಉಪಸ್ಥಿತರಿದ್ದರು.

ಜಿಲ್ಲಾಸ್ಪತ್ರೆಯ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ| ಮಂಜುನಾಥ ಮೇಸ್ತ ಸ್ವಾಗತಿಸಿ, ಜಿಲ್ಲಾ ಎನ್‌ಓಎಚ್ಪಿ ಕಾರ್ಯಕ್ರಮ ಅಧಿಕಾರಿ ಡಾ| ಬೀಸು ನಾಯ್ಕ ವಂದಿಸಿದರು. ಸತೀಶ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Advertisement

ಉಚಿತ ಸೌಲಭ್ಯ
ಸೌಲಭ್ಯ ಪಡೆಯಲಿಚ್ಛಿಸುವವರು ಸಮೀಪದ ಆರೋಗ್ಯ ಕೇಂದ್ರದಲ್ಲಿ ಹೆಸರನ್ನು ನೋಂದಾಯಿಸಬಹುದು. ಖಾಸಗಿ ಆಸ್ಪತ್ರೆಯಲ್ಲಿ ದಂತ ಜೋಡಣೆ ಮಾಡಬೇಕಾದರೆ ಸುಮಾರು 9-10 ಸಾವಿರ ರೂ. ವೆಚ್ಚ ತಗಲುತ್ತದೆ. ಆದರೆ ಸರಕಾರ ಈ ಯೋಜನೆಯಡಿ ಉಚಿತವಾಗಿ ಮಾಡುತ್ತಿದೆ ಎಂದು ಡಾ| ಓಂ ಪ್ರಕಾಶ್‌ ಕಟ್ಟಿಮನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next