ಪುತ್ತೂರು : ಅನಾಥವಾಗಿದ್ದ ನಾಗರ ಹಾವಿನ ಮೊಟ್ಟೆಗಳಿಗೆ ಕೃತಕ ಶಾಖ ನೀಡಿ ಮರಿ ಮಾಡಿ ಅರಣ್ಯಕ್ಕೆ ಬಿಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪರಿಸರ ಪ್ರೇಮಯಾಗಿರುವ ಯುವಕ ತೇಜಸ್ ಕಳೆಸ ಹಲವಾರು ವರ್ಷಗಳಿಂದ ಕಾಡು ಪ್ರಾಣಿ- ಪಕ್ಷಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದು, ಸುಮಾರು 5 ಸಾವಿರಕ್ಕೂ ಮಿಕ್ಕಿದ ನಾಗರಹಾವುಗಳನ್ನು ಇವರು ಈಗಾಗಲೇ ರಕ್ಷಿಸಿ ಸುರಕ್ಷಿತ ತಾಣಕ್ಕೆ ಅವುಗಳನ್ನು ಸೇರಿಸುವ ಕೆಲಸ ಮಾಡಿದ್ದಾರೆ.
ಇದೇ ರೀತಿ ಇತ್ತೀಚಿಗೆ ಪುತ್ತೂರಿನ ಡಾ. ರಮೇಶ್ ಎನ್ನುವವರ ಮನೆಯಲ್ಲಿ 8 ಮೊಟ್ಟೆಗಳು ಪತ್ತೆಯಾಗಿತ್ತು. ಮನೆ ಮಂದಿ ಇದನ್ನು ತೇಜಸ್ ಗಮನಕ್ಕೆ ತಂದಿದ್ದರು. ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದ ತೇಜಸ್ ಈ ಮೊಟ್ಟೆಗಳು ನಾಗರಹಾವಿನ ಮೊಟ್ಟೆಗಳೆನ್ನುವುದನ್ನು ಖಾತರಿಪಡಿಸಿಕೊಂಡಿದ್ದರು.
ಮೊಟ್ಟೆಗಳನ್ನು ಹಾಗೆಯೇ ಬಿಟ್ಟಲ್ಲಿ ಮೊಟ್ಟೆ ಹೊಡೆದು ಹೋಗುವ ಸಾಧ್ಯತೆಯನ್ನು ಮನಗಂಡಿದ್ದ ತೇಜಸ್ ಅರಣ್ಯ ಅಧಿಕಾರಿಗಳ ಸಮ್ಮತಿಯ ಮೇರೆಗೆ ಮೊಟ್ಟೆಗಳನ್ನು ತನ್ನ ಮನೆಗೆ ತಂದು ಕೃತಕ ಶಾಖ ನೀಡುವ ವ್ಯವಸ್ಥೆಯನ್ನು ಮಾಡಿದ್ದರು. 57 ದಿನಗಳ ಬಳಿಕ ಎಲ್ಲಾ 8 ಮೊಟ್ಟೆಗಳಿಂದ ಮರಿಗಳು ಹೊರಬಂದಿದ್ದು, ಇದೀಗ ಈ ಮರಿಗಳು ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿದ್ದಾರೆ. ಪುತ್ತೂರು ಹೊರವಲಯದ ಅರಣ್ಯಕ್ಕೆ ಎಲ್ಲಾ ಮರಿಗಳನ್ನು ಬಿಡುವ ಮೂಲಕ ರಕ್ಣಣೆ ಒದಗಿಸಿದ್ದಾರೆ.
ಎಳವೆಯಿಂದಲೇ ಪರಿಸರ ಹಾಗೂ ಪ್ರಾಣಿ-ಪಕ್ಷಿಗಳ ಮೇಲೆ ಅಪಾರ ಕಾಳಜಿ ಹೊಂದಿರುವ ತೇಜಸ್ ಕಾಲೇಜು ದಿನಗಳಲ್ಲೇ ಹಾವುಗಳ ಹಾಗೂ ಕಾಡಿನಿಂದ ನಾಡಿಗೆ ಬರುವ ಸಣ್ಣ ಪ್ರಾಣಿಗಳ ರಕ್ಷಣೆ ಕಾರ್ಯದಲ್ಲಿ ನಿರತರಾಗಿದ್ದರು. ಜಿಂಕೆ, ಬರಿಂಕ, ಕೆಂಚಳಿಲು ಸೇರಿದಂತೆ ಹಲವು ಪ್ರಾಣಿಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ತೇಜಸ್ ಹಾವುಗಳನ್ನು ಹಿಡಿಯುವದಲ್ಲೂ ನಿಸ್ಸೀಮರಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಯಾವ ಭಾಗದಲ್ಲೂ ಮನೆಗೆ ಅಥವಾ ಇತರ ಜನವಸತಿ ಪ್ರದೇಶಗಳಿಗೆ ವಿಷಕಾರಿ ಹಾವುಗಳು ಕಾಣಿಸಿಕೊಂಡಲ್ಲಿ ತೇಜಸ್ ಗೆ ಕರೆ ಬರುವುದು ಸಾಮಾನ್ಯವಾಗಿದೆ. ಇಂಥ ವಿಷಕಾರಿ ಹಾವುಗಳನ್ನು ತನ್ನ ಚಾಕಚಕ್ಯತೆಯಿಂದ ಸಲೀಸಾಗಿ ಹಿಡಿದು ಅವುಗಳನ್ನು ಅರಣ್ಯ ಇಲಾಖೆಯ ಒಪ್ಪಿಗೆಯ ಬಳಿಕ ಕಾಡಿಗೆ ಬಿಡುವ ಕೆಲಸವನ್ನು ಮಾಡುತ್ತಿದ್ದಾರೆ.
ಹಾವುಗಳ ರಕ್ಷಣೆಯ ಸಂದರ್ಭದಲ್ಲಿ ಹಲವು ರೀತಿಯ ತೊಂದರೆಗಳನ್ನೂ ತೇಜಸ್ ಅನುಭವಿಸಿದ್ದಾರೆ. ಒಂದು ಬಾರಿ ನಾಗರಹಾವೊಂದನ್ನು ರಕ್ಷಿಸುವ ವೇಳೆ ಹಾವು ಅವರ ಕೈಗೆ ಕಚ್ಚಿದ ಪರಿಣಾಮ ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಆ ಬಳಿಕ ಹಾವು ಹಿಡಿಯುವ ಕಾರ್ಯವನ್ನು ನಿಲ್ಲಿಸಲು ತೀರ್ಮಾನಿಸಿದ್ದ ತೇಜಸ್ ಗೆ ಹಲವರು ವಿಷಕಾರಿ ಹಾವುಗಳಿಂದಾಗಿ ತೊಂದರೆಯೊಳಗಾಗುವುದನ್ನು ಮನಗಂಡು ಮತ್ತೆ ಹಾವು ಹಿಡಿಯುವ ಹವ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.