Advertisement

ಬೀಜದ ಕೃತಕ ಅಭಾವ ಸೃಷ್ಟಿ

02:49 PM Nov 11, 2019 | Team Udayavani |

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಸುಗ್ಗಿಯಲ್ಲಿ ಭತ್ತ ನಾಟಿ ಮಾಡಿದ ರೈತರಿಗೆ ಈ ಭಾರಿ ಬಂಪರ್‌ ಬೆಳೆ ಬಂದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

Advertisement

ವಿಜಯನಗರ ಕಾಲುವೆ ವ್ಯಾಪ್ತಿಯಲ್ಲಿ ಭತ್ತ ನಾಟಿ ಮಾಡಿದ್ದ ರೈತರು ಈಗಾಗಲೇ ಕಟಾವು ಮಾಡಿದ್ದಾರೆ. ಎಕರೆಗೆ 40ರಿಂದ 45 ಚೀಲ ಭತ್ತದ ಇಳುವರಿ ಬಂದಿದ್ದು ಈ ಸಲ ಔಷಧಿ ಸಿಂಪರಣೆ ಮತ್ತು ಮೇಲುಗೊಬ್ಬರ ಅತ್ಯಂತ ಕಡಿಮೆ ಹಾಕಲಾಗಿದ್ದು ಖರ್ಚು ಸಹ ಕಡಿಮೆಯಾಗಿದೆ. ಇದರಿಂದ ರೈತರ ಮುಖದಲ್ಲಿ ನಗು ಕಾಣುತ್ತಿದ್ದು, ಬೇಸಿಗೆ ಬೆಳೆಯೂ ಇದೇ ತರಹ ಬಂದರೆ ನಾಲ್ಕೈದು ವರ್ಷಗಳಿಂದ ಒಂದೇ ಬೆಳೆ ಬೆಳೆದು ಸಂಕಷ್ಟದಲ್ಲಿದ್ದ ರೈತರು ಸ್ವಲ್ಪ ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ.

ಅಚ್ಚುಕಟ್ಟು ಪ್ರದೇಶದಲ್ಲಿ ಸುಗ್ಗಿ ಬೆಳೆಯಾಗಿ ಸೋನಾಮಸೂರಿ ಭತ್ತ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ನಾಲ್ಕೈದು ವರ್ಷಗಳಿಂದ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾದ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಮಾಡಿಲ್ಲ. ಇದರಿಂದ ಭೂಮಿಯಲ್ಲಿ ಫಲವತ್ತತೆ ಹೆಚ್ಚಿದೆ.

ಭತ್ತದ ಬೀಜ ಅಭಾವ: ಬೇಸಿಗೆಯಲ್ಲಿ ಸಾಮಾನ್ಯವಾಗಿ 100-135 ದಿನದೊಳಗೆ ಕಟಾವಿಗೆ ಬರುವ ಭತ್ತವನ್ನು ರೈತರು ನಾಟಿ ಮಾಡುತ್ತಾರೆ. ಬೇಸಿಗೆಯಲ್ಲಿ ಕಾವೇರಿ ಸೋನಾ, ಗಂಗಾವತಿ ಸೋನಾ, ಗಂಗಾವತಿ ಎಮರ್ಜೆನ್ಸಿ ಐಆರ್‌64 ಭತ್ತದ ತಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಎಲ್ಲಾ ಭತ್ತದ ತಳಿಗಳು 100-135 ದಿನಗಳೊಳಗೆ ಕಟಾವಿಗೆ ಬರುತ್ತವೆ.

ನಾಲ್ಕೈದು ವರ್ಷಗಳಿಂದ ಬೇಸಿಗೆಯಲ್ಲಿ ಭತ್ತ ನಾಟಿ ಮಾಡದೇ ಇರುವುದರಿಂದ ಅಲ್ಪಾವಧಿ  ಭತ್ತದ ಬೀಜದ ಕೊರತೆಯುಂಟಾಗಿದ್ದು, ಬೀಜದ ಭತ್ತಕ್ಕೆ ಅಧಿ ಕ ದರ ಕೊಟ್ಟು ತರಬೇಕಾದ ಅನಿವಾರ್ಯ ಸ್ಥಿತಿಯುಂಟಾಗಿದೆ. ಗಂಗಾವತಿಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಲ್ಪಾವಧಿ  ಭತ್ತದ ಬೀಜ ಸಂಗ್ರಹ ಲಭ್ಯವಿದೆ. ಕೃಷಿ ಇಲಾಖೆ ಸಹ ರೈತರಿಗೆ ಬೇಸಿಗೆ ಭತ್ತದ ಬೀಜ ಕೊರತೆಯಾಗದಂತೆ ನೋಡಿಕೊಳ್ಳುವುದು ಅವಶ್ಯವಿದೆ.

Advertisement

ಕೃಷಿ ಇಲಾಖೆ ರೈತರ ನೆರವಿಗೆ ಬರಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಭತ್ತದ ಬೆಳೆ ಉತ್ತಮ ಇಳುವರಿ ಬಂದಿದ್ದು, ಬೇಸಿಗೆಯಲ್ಲಿ ಬೆಳೆಯುವ ಅಲ್ಪಾವಧಿ  ಭತ್ತದ ಬೀಜದ ಕೊರತೆಯುಂಟಾಗಿದೆ. ಕೆಲ ಬೀಜ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯ ರೈತರ ನೆರವಿಗೆ ಬರಬೇಕಿದೆ.

 

-ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next