ಹೈದರಾಬಾದ್ : ಸಂವಿಧಾನದ 35ಎ ಮತ್ತು 370ನೇ ವಿಧಿಗಳು ಇತರ ರಾಜ್ಯಗಳ ಹಕ್ಕುಗಳಿಗೆ ವಿರೋಧಾತ್ಮಕವಾಗಿರುವುದರಿಂದ ಅವುಗಳನ್ನು ಕಿತ್ತು ಹಾಕುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎನ್ ಸಂತೋಷ್ ಹೆಗ್ಡೆ ಹೇಳಿದ್ದಾರೆ.
‘1948ರಲ್ಲಿ ಕಾಶ್ಮೀರದ ಮಹಾರಾಜ ತನ್ನ ರಾಜ್ಯವನ್ನು ಭಾರತದೊಂದಿಗೆ ವಿಲಯನಗೊಳಿಸುವ ಸಂದರ್ಭದಲ್ಲಿ ಆ ರಾಜ್ಯದ ಜನತೆಗೆ ಕೆಲವೊಂದು ಭರವಸೆಗಳನ್ನು ನೀಡಿ ಸಂವಿಧಾನದಲ್ಲಿ 35ಎ ಮತ್ತು 370ನೇ ವಿಧಿಯನ್ನು ಸೇರಿಸಲಾಗಿತ್ತು’ ಎಂದವರು ಮಾಧ್ಯಮದೊಂದಿಗೆ ಹೇಳಿದರು.
‘ಈ ವಿಧಿಗಳಲ್ಲಿ ಬಳಸಲಾಗಿರುವ ಪದಗಳು ಈ ಭರವಸೆ ಶಾಶ್ವತ ಎನ್ನುವ ರೀತಿಯಲ್ಲಿವೆ; ಆದರೆ ಅನಂತರದಲ್ಲಿ ದೇಶದಲ್ಲಾಗಿರುವ ಬದಲಾವಣೆಗಳು ಮತ್ತು ಸಂಭವಿಸಿರುವ ವಿದ್ಯಮಾನಗಳಿಂದ ಈ ವಿಧಿಗಳು ಮುಂದುವರಿಯುವುದು ಅಸಾಧವಾಗಿವೆ. ಕಾಶ್ಮೀರವು ದೇಶದ ಅವಿಭಾಜ್ಯ ಅಂಗ ಎನ್ನುವುದಾದಲ್ಲಿ ಇತರ ರಾಜ್ಯಗಳೊಡನೆ ಹೋಲಿಸುವಾಗ ಅದಕ್ಕೆ ಪ್ರತ್ಯೇಕ ಸ್ಥಾನಮಾನ ಇರುವಂತಿಲ್ಲ’ ಎಂದು ಹೆಗ್ಡೆ ಹೇಳಿದರು.
‘ಇವತ್ತಿನ ಸಂದರ್ಭದಲ್ಲಿ ಜಮ್ಮು ಕಾಶ್ಮೀರಕ್ಕಿರುವ ಈ ವಿಶೇಷ ಸ್ಥಾನಮಾನದಿಂದಾಗಿ ದೇಶವು ಸಮಗ್ರವಾಗಿ ಮತ್ತು ಏಕವಾಗಿ ಇರುವುದಕ್ಕೆ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಆದುದರಿಂದ ಸಂವಿಧಾನದಲ್ಲಿ ಈ ವಿಧಿಗಳು ಮುಂದುವರಿಯುವುದು ಅಸಾಧ್ಯ ಎಂದು ನನಗನ್ನಿಸುತ್ತದೆ’ ಎಂದು ಹೆಗ್ಡೆ ಹೇಳಿದರು.
‘ಆದುದರಿಂದ ಇಂದಿನ ಪರಿಸ್ಥಿತಿಯಲ್ಲಿ 35ಎ ಮತ್ತು 370ನೇ ವಿಧಿಯನ್ನು ರದ್ದು ಮಾಡುವುದೇ ಸೂಕ್ತ. ಏಕೆಂದರೆ ಈ ಕಾಯಿದೆಯಡಿ ಜಮ್ಮು ಕಾಶ್ಮೀರಕ್ಕೆ ಇರುವ ಸ್ವಾಯತ್ತೆಯು ಇತರ ರಾಜ್ಯಗಳ ಹಕ್ಕುಗಳಿಗೆ ವಿರೋಧಾತ್ಮಕವಾಗಿವೆ. ಜಮ್ಮು ಕಾಶ್ಮೀರ ಭಾರತ ಅವಿಭಾಜ್ಯ ಅಂಗವೆಂದಾದಲ್ಲಿ ಅದಕ್ಕೆ ಇತರ ರಾಜ್ಯಗಳಂತೆ ಸಮಾನ ಸ್ಥಾನಮಾನ ಇರಬೇಕಾಗುತ್ತದೆ’ ಎಂದು ಹೆಗ್ಗೆ ಹೇಳಿದರು.
‘ಈಗಾಗಲೇ 70 ವರ್ಷಗಳು ಸಂದು ಹೋಗಿವೆ; 35ಎ ಮತ್ತು 370ನೇ ವಿಧಿಗಳ ಉದ್ದೇಶ ಈ ಅವಧಿಯಲ್ಲಿ ಈಡೇರಿದೆ. ಈಗ ಕಾಶ್ಮೀರ, ಭಾರತದ ಅವಿಭಾಜ್ಯ ಅಂಗ ಅಲ್ಲ ಎಂದು ಹೇಳುವಂತಿಲ್ಲ. ಆದುದರಿಂದ ಈ ಎರಡು ವಿಧಿಗಳಿಗೆ ಸಂವಿಧಾನದಲ್ಲಿ ಯಾವುದೇ ಸ್ಥಾನ ಇರಲಾಗದು’ ಎಂದವರು ಹೇಳಿದರು.
ಸಂವಿಧಾನದ 370ನೇ ವಿಧಿಯು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತದೆ ಮತ್ತು 35ಎ ವಿಧಿಯು ಈ ರಾಜ್ಯದಲ್ಲಿ ಹೊರಗಿನವರು ಭೂಮಿ, ಆಸ್ತಿಪಾಸ್ತಿ ಖರೀದಿಸುವುದನ್ನು ನಿಷೇಧಿಸುತ್ತದೆ.
ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾನು ಅಧಿಕಾರ ಉಳಿಸಿಕೊಂಡಲ್ಲಿ ಈ ಎರಡು ವಿಧಿಗಳನ್ನು ರದ್ದು ಮಾಡುವ ಭರವಸೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದೆ.