ದೇಶಕ್ಕೆ ಉತ್ತಮ ಸೇಬು ಹಣ್ಣುಗಳನ್ನು ನೀಡುವುದು ಮಾತ್ರವಲ್ಲದೆ ವೀರ ಯೋಧರನ್ನು ದೇಶಕ್ಕೆ ಕೊಡುಗೆಯಾಗಿ ನೀಡುವ ಒಂದು ರಾಜ್ಯ ಹಿಮಾಚಲ ಪ್ರದೇಶ. 4 ಪರಮ ವೀರ ಚಕ್ರ ಪುರಸ್ಕೃತರು ಇಲ್ಲಿದ್ದಾರೆ. ಅವರಲ್ಲಿ ಸಂಜಯ್ ಕುಮಾರ್ ಕೂಡ ಒಬ್ಬರು.
ಆಪರೇಷನ್ ವಿಜಯ್ ಎಂಬ ಹೆಸರು ಕೇಳಿದರೆ ಭಾರತೀಯರ ಮೈ ರೋಮಾಂಚನಗೊಳ್ಳುತ್ತದೆ. 1999 ಮೇ ತಿಂಗಳಲ್ಲಿ ಕಾರ್ಗಿಲ್ ಯುದ್ಧ ಆರಂಭವಾಯಿತು. ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಕಾರ್ಗಿಲ್ ಜಿಲ್ಲೆಯಲ್ಲಿ ಲೈನ್ ಆಫ್ ಕಂಟ್ರೋಲ್ (LOC) ಮೂಲಕ ನುಸುಳಿದ್ದು ಗೊತ್ತಾದ ತತ್‌ಕ್ಷಣ ಭಾರತೀಯ ಸೇನೆ ತನ್ನ ದಾಳಿಯನ್ನು ತೀವ್ರಗೊಳಿಸಿತು. ಪಾಕಿಸ್ಥಾನದ ಈ ನಡೆ ಭಾರತಕ್ಕೆ ಸಂಪೂರ್ಣವಾಗಿ ಆಶ್ಚರ್ಯವನ್ನುಂಟು ಮಾಡಿತು. ಯುದ್ಧದಲ್ಲಿ ಭಾರತ ವಿಜಯ ಸಾಧಿಸಲು ಕಾರಣ ಸಂಜಯ್ ಕುಮಾರ್ ಕೂಡ ಒಬ್ಬರು. ಕಾರ್ಗಿಲ್ ಯುದ್ಧದಲ್ಲಿ ಅವರು ತೋರಿಸಿದ ಸಾಧನೆಗೆ ಪರಮವೀರಚಕ್ರ ಪುರಸ್ಕಾರವನ್ನು ಮುಡಿಗೇರಿಸಿಕೊಂಡಿದ್ದಾರೆ.
1999 ಜುಲೈ 4 ಭಾರತೀಯ ಇತಿಹಾಸದಲ್ಲೇ ಮಹತ್ವದ ದಿನ. ಏಕೆಂದರೆ ಭಾರತೀಯ ಪಡೆಗಳು ಅಂದು ಪಾಯಿಂಟ್ 4,875 ಅನ್ನು ವಶಪಡಿಸಿಕೊಳ್ಳಲು ಹೊರಟಿದ್ದವು. ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ ಅಂದರೆ 1999ರಲ್ಲಿ 13 ಜೆಕ್ ರೈಫಲ್ಸ್ ಬೆಟಾಲಿಯನ್‌ಗೆ ದರಾಜ್ ಬಳಿಯ ಗುಮರಿ ಬೇಸ್ ಕ್ಯಾಂಪ್ ರಕ್ಷಿಸುವ ಹೊಣೆ ಸಂಜಯ್ ಕುಮಾರ್ ಅವರಿಗೆ ನೀಡಲಾಗಿತ್ತು. 70 ಡಿಗ್ರಿಯನ್ನು ಹೋಲುವ ಬೆಟ್ಟವನ್ನು ಭಾರತೀಯ ಪಡೆಗಳು ಏರಬೇಕಿತ್ತು. ಕೊರೆಯುವ ಚಳಿ ಮತ್ತು ಇತರ ಹಲವು ಅಡೆತಡೆಗಳೊಂದಿಗೆ ಅದನ್ನು ಏರಬೇಕಿತ್ತು. ಶತ್ರುಗಳೊಡನೆ ಮುಖಾಮುಖೀಯಾಗುವ ಅರಿವಿದ್ದರೂ ಸೇನಾಪಡೆಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದವು. ಶತ್ರು ಸಂಖ್ಯೆಯ ಬಲದ ಅರಿವಿಲ್ಲದೇನೆ ಯುದ್ಧಕ್ಕೆ ನಮ್ಮ ಯೋಧರು ತಯಾರಾಗಿದ್ದರು.
ಆ ತಂಡದಲ್ಲಿದ್ದ ಸಂಜಯ್ ಕುಮಾರ್ ನಿದ್ರೆ ಮಾಡದೆ ಬರೋಬ್ಬರಿ 30 ಗಂಟೆಗಳಾಗಿತ್ತು. ಯುದ್ಧದಲ್ಲಿ ಎಡೆಬಿಡದೆ ಗುಂಡು ಹಾರಿಸುತ್ತಿದ್ದ ಸಂಜಯ್ ಕುಮಾರ್ ಎದೆಗೆ ಅದಾಗಲೇ ಐದು ಗುಂಡುಗಳು ಹೊಕ್ಕಿದ್ದವು. ಆದರೂ ಸಂಜಯ್ ಕುಮಾರ್ ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ನೋಡು ನೋಡುತ್ತಿದ್ದಂತೆ ಶತ್ರುಗಳ ಬಂಕರ್ ಸ್ಫೋಟಗೊಂಡು ಅದರಲ್ಲಿದ್ದ ಪಾಕ್ ಸೈನಿಕರು ಹತರಾಗಿದ್ದರು. ಕೊನೆಗೆ ಅಧಿಕಾರಿಗಳಿಂದ ಶತ್ರು ಸೈನಿಕರು ಉಳಿದಿಲ್ಲ ಎಂದು ಮನವರಿಕೆ ಆಗುವವರೆಗೆ ಗುಂಡು ಹಾರಿಸುತ್ತಲೇ ಇದ್ದರು.
ಸಂಜಯ್ ಕುಮಾರ್ ಅವರು ಮುಷ್ಕಿ ಕಣಿವೆಯ 4,875 ಮೀಟರ್ ಎತ್ತರದ ಬೆಟ್ಟವನ್ನು ವಶಕ್ಕೆ ತೆಗೆದುಕೊಳ್ಳುವ, ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸ್ವಯಂ ಪ್ರೇರಿತರಾಗಿ ತೆಗೆದುಕೊಂಡಿದ್ದರು. ದಿಢೀರನೆ ಎದುರಾದ ದಾಳಿಯನ್ನು ಎದುರಿಸಿದ ಸಂಜಯ್, ತಮ್ಮ ರಕ್ಷಣೆಯನ್ನು ಲೆಕ್ಕಿಸದೆ ವೈರಿಗಳ ಮೇಲೆ ನೇರಾನೇರ ಯುದ್ಧಕ್ಕಿಳಿದರು. ಮೂವರು ಸೈನಿಕರನ್ನು ಹತ್ಯೆ ಮಾಡುವ ವೇಳೆ ತಾವು ಗಾಯಗೊಂಡರು. ಗಾಯ ಲೆಕ್ಕಿಸದೆ ಮುಂದುವರಿದು ಮತ್ತೂಂದು ಸುತ್ತು ದಾಳಿ ನಡೆಸಿದಾಗ ವೈರಿಪಡೆಯ ಸೈನಿಕನ ಮೆಷಿನ್ ಗನ್ ಕೈ ಜಾರಿ ಬಿದ್ದು,ಆತ ಓಡತೊಡಗಿದ. ಗನ್ ಕೈಗೆ ತೆಗೆದುಕೊಂಡ ಸಂಜಯ್ ಕುಮಾರ್ ಸೈನಿಕನಿಗೆ ಗುಂಡುಹಾರಿಸಿದರು.
ಗಾಯಗೊಂಡಿದ್ದರೂ ಕಣದಿಂದ ಹಿಂದೆ ಸರಿಯಲು ನಿರಾಕರಿಸಿದ ಅವರ ಶೌರ್ಯ ಇತರರನ್ನು ಹುರಿದುಂಬಿಸಿತು. ಅದಕ್ಕಾಗಿ ಭಾರತ ಸರಕಾರ ಅವರಿಗೆ ಭಾರತದ ಅತ್ಯುನ್ನತ ಪರಮವೀರಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ರೈಫಲ್ಸ್ ಮ್ಯಾನ್ ಸಂಜಯ್ ಕುಮಾರ್ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಬೈಕಣ ಗ್ರಾಮದಲ್ಲಿ ಜನಿಸಿದರು. ಸಂಜಯ್ ಅವರ ಚಿಕ್ಕಪ್ಪ ಕೂಡ ಭಾರತೀಯ ಸೇನೆಯಲ್ಲಿದ್ದು, 1965 ಇಂಡೋ- ಚೀನಾ ಯುದ್ಧದಲ್ಲಿ ಭಾಗವಹಿಸಿದ್ದರು. 1996 ರಲ್ಲಿ ಎಸೆಸೆಲ್ಸಿ ಪರೀಕ್ಷೆ ಪಾಸಾದ ಸಂಜಯ್ ಕುಮಾರ್ ಮುಂದೆ ಸೈನ್ಯ ಸೇರಿದರು. ಸೈನ್ಯಕ್ಕೆ ಸೇರುವ ಮೊದಲು ಅವರು ನವದೆಹಲಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಕೇವಲ 23 ವರ್ಷ. ಸೈನ್ಯ ಸೇರಿದ 13 ಜೆಕ್ ರೆಪೈಲ್ಸ…ನಲ್ಲಿ ಸಿಪಾಯಿಯಾಗಿ ನಿಯುಕ್ತಿಗೊಂಡರು.
ಪ್ರಸ್ತುತ ಅವರು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಭೋದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾಧರ ಶಾನು ಮಧುಕರ, ಶ್ರೀ ಮಾರಿಕಾಂಬಾ ಪ.ಪೂ. ಕಾಲೇಜು, ಶಿರಸಿ