Advertisement

ಮಳೆಯ ದಿನಗಳ ಶಾಲಾ ನೆನಪುಗಳು ಮಜಬೂತಾಗಿದ್ದವು..!

12:47 PM Apr 18, 2021 | Team Udayavani |

ಮುಂಗಾರು ಹಾಗೆಯೇ…ಮನದ ಗರಿ ಬಿಚ್ಚಿ ಕುಣಿಯುವ ಹಾಗೆ ಮಾಡುತ್ತದೆ. ‘ಮುಂಗಾರು ಜಿನುಗುತಿರೆ ಅಂಗಳದಿ ಆಡೋಣ ಗೆಳೆಯ’ ಎಂಬ ಸಾಲನ್ನು ಎಲ್ಲೋ ಓದಿದ ನೆನಪು..ಪ್ರತಿ ಬಾರಿಯೂ ಮಳೆ ಸುರಿದಾಗ ಅದೇನೋ ಆನಂದ ಮನಸಿಗೆ. ನವಿಲು ಗರಿಬಿಚ್ಚಿ ಕುಣಿಯುವಂತೆ ಮಳೆಯಲ್ಲಿ ಕುಣಿಯುವ ತವಕ. ಮಳೆ ಅಂದ್ರೆ ಹಾಗೇನೇ ಖುಷಿಯೂ ಇದೆ ಜೊತೆಯಲ್ಲಿ ಹಲವು ನೆನಪುಗಳ ಸುಖವೂ ಇದೆ… ಮಳೆ ಹನಿಗಳನ್ನು ಟಪ ಟಪ ಬಡಿಯುತ್ತಾ ಆಡುವುದೆಂದರೇ, ಎಲ್ಲಿಲ್ಲದ ಸಂಭ್ರಮ.

Advertisement

ಹೊಸ ಕೊಡೆಯನ್ನೇನೋ ಶಾಲೆಗೆ ಹೋಗುವಾಗ ತೆಗೆದುಕೊಂಡು ಹೋಗಲು ಕಾತುರ, ಆದರೆ ಹೊಸ ಕೊಡೆ ಒದ್ದೆಯಾಗುವ ಆಸೆಯಂತೂ ಯಾರಿಗೂ ಇಲ್ಲ. ಕೊಡೆಯನ್ನು ನೀಟಾಗಿ ಮಡಚಿ ಬ್ಯಾಗಲ್ಲಿಟ್ಟರೆ ತೆಗೆಯುವ ಮನಸ್ಸಂತು ಬರುವುದೇ ಇಲ್ಲ. ಗೆಳತಿಯ ಹೆಗಲಿಗೆ ಕೈ ಹಾಕಿ ಅವಳ ಕೊಡೆಯಡಿಯಲ್ಲೇ ಹೋಗುವ ಆ ಎಳೆಯ ದಿನಗಳ ಒಂಥರಾ ಸ್ವಾರ್ಥವಲ್ಲದ ಸ್ವಾರ್ಥ. ಎಷ್ಟೇ ಭರ್ಜರಿ ಮಳೆಯಿದ್ದರೂ ಗೆಳೆಯ ಗೆಳತಿಯರ ಕೊಡೆಯೊಳಗೆ ನುಸುಳಿಕೊಂಡು ಆಚೆ ಈಚೆ ಎಳೆದಾಡಿಕೊಂಡು ಹೋಗುವುದೇ ಸಮಾಧಾನ. ಪುಣ್ಯ ನನ್ನ ಕೊಡೆ ಒದ್ದೆಯಾಗಲಿಲ್ಲ ಎಂಬ ನಿಟ್ಟುಸಿರಿನ ಭಾವ ಇನ್ನೊಂದು ಕಡೆ..ಶಾಲೆಯ ಕಿಟಕಿಯ ಸರಳುಗಳಲ್ಲಿ ನೇತಾಡುವ ಕೊಡೆಗಳು ಅದರಿಂದ ನೀರು ಹರಿದು ಜಾರಿ ಬಿದ್ದ ಆ ದಿನಗಳು. ತರಗತಿಯ ಹಿಂಭಾಗದಲ್ಲಿ ಶಿಕ್ಷಕರಿಗೆ ಕದ್ದು ಕೊಡೆಯನ್ನು ಬಿಡಿಸಿಟ್ಟು ಒಣಗಿಸುತ್ತಿದ್ದ  ನೆನಪುಗಳು ಎಲ್ಲವೂ ಇಂದಿಗೂ ಮಧುರ.

ಓದಿ :  ಗತಕಾಲದ ವೈಭವ ಸಾರುವ ಕೋಟಿ ಚೆನ್ನಯ ಥೀಮ್ ಪಾರ್ಕ್

ಮಳೆಗಾಲದಲ್ಲಿ ನ್ಯೂಸ್ ಪೇಪರ್ ಓದದವರು ಓದುತ್ತಾರೆ. ಜಿಲ್ಲಾಧಿಕಾರಿಗಳ ಹೆಸರು ತಿಳಿಯದವರಿಗೂ ತಿಳಿದುಬಿಡುತ್ತದೆ ಕಾರಣ ಜಿಲ್ಲಾಧಿಕಾರಿಗಳು ಮಳೆಗಾಲದಲ್ಲಿ ರಜೆ ಕೊಡುವ ದೇವರಿದ್ದಂತೆ…! ಮಳೆಗಾಲದಲ್ಲಿ ಹೊರಗೆ ಆಡಲು ಆಗುವುದಿಲ್ಲ ಆದರೆ ಮಕ್ಕಳು ಮನೆಯಲ್ಲಿ ಬಗೆ ಬಗೆಯ ತಿನಿಸುಗಳನ್ನು ಸವಿಯುವುದನ್ನು ತಪ್ಪಿಸಲು ಸಾಧ್ಯವೇ??.ಹಲಸಿನ ಬೀಜ ,ಹುಣಸೆ ಬೀಜ , ಹಪ್ಪಳಗಳನ್ನು ತಿನ್ನುವ ಮಜವೇ ಬೇರೆ. ಒಂದಷ್ಟು ಹುಣಸೆ ಬೀಜಗಳನ್ನು ಶಾಲೆಗೂ ಒಯ್ಯುತ್ತಿದ್ದೆವು. ಟೀಚರ್ ಕಣ್ಣುತಪ್ಪಿಸಿ ಪಾಠದ ಸಮಯದಲ್ಲಿ ಕಟುಂ ಕುಟುಂ ಮಾಡುತ್ತಿದ್ದೆವು. ಯಾರ ಚಡ್ಡಿ ಜೇಬುಗಳನ್ನು ರೈಡ್ ಮಾಡಿದ್ರು ಒಂದು ಮುಷ್ಟಿ ಹುಣಸೆ ಬೀಜ ಇರುವುದಂತೂ ಗ್ಯಾರಂಟಿ.

Advertisement

ಮಳೆಗಾಲದಲ್ಲಿ ಸಮವಸ್ತ್ರಗಳನ್ನು ಒಣಗಿಸುವುದು  ದೊಡ್ಡ ಟಾಸ್ಕ್. ಅರೆ ಬರೆ ಒಣಗಿದ ಬಟ್ಟೆಗಳಲ್ಲಿ ಕಮಟು ವಾಸನೆ ಜೊತೆಗೆ ಚುಕ್ಕಿ ಚುಕ್ಕಿ ನೀರು ಕಲೆ. ಒಲೆಯ ಮೇಲೆ, ಬಿಸಿ ಪಾತ್ರೆಯ ಮೇಲೆ ಇಸ್ತ್ರಿ ಪೆಟ್ಟಿಗೆ ಹೀಗೆ ಎಲ್ಲ ಪ್ರಯೋಗಗಳು ಬಟ್ಟೆಯ ಮೇಲೆ ನಡೆಯುತ್ತಿದ್ದವು. ಸಂಜೆ ಬರುವಾಗ ಬಟ್ಟೆ ಚೀಲದ ಸಮೇತ ಪುಸ್ತಕಗಳು ಒದ್ದೆಯಾಗುತ್ತಿದ್ದವು ಪುಸ್ತಕಗಳನ್ನು ಒಣಗಿಸಲು ಕೂಡ ಹರಸಾಹಸ ಒದ್ದೆಯಾದ ಚೀಲ, ಚಳಿಗೆ ನಡುಗುವ ಕೈಕಾಲು..ಗುಜುರಿ ಬಸ್ಸಿನಲ್ಲಿ ಒಳಬರುವ ಹನಿಗಳು..ಒಂದಷ್ಟು ಜನರ ಒದ್ದೆ ಕೊಡೆಗಳ ನೀರು, ರಸ್ತೆ ಬದಿ ನಿಂತಾಗ ಕೆಸರಾಮಯವಾದ ಸಮವಸ್ತ್ರಗಳು..ಆ ದಿನಗಳು ಮಜಬೂತಾಗಿದ್ವು…!

– ದುರ್ಗಾ ಭಟ್ ಕೆದುಕೋಡಿ

ಆಳ್ವಾಸ್ ಕಾಲೇಜು, ಮೂಡುಬಿದಿರೆ

ಓದಿ : ಪ್ರತಿಯೊಂದು ಹಬ್ಬದಲ್ಲೂ ತುಳುನಾಡಿನ ಸಾರವಿದೆ: ಮಹೇಶ್‌ ಎಸ್‌. ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next