Advertisement

ವಿಧಿ ಚಿತ್ತ ಸತ್ಯ ವಿಧಿ ಚಿತ್ತ !

08:25 PM Dec 29, 2019 | Lakshmi GovindaRaj |

ಗಾಂಧೀಜಿಯವರು 1934ರ ಫೆ. 24 -25ರಂದು ಸಂಪಾಜೆಯಿಂದ ಕುಂದಾಪುರದವರೆಗೆ ಪ್ರವಾಸ ಮಾಡಿದರು. ಅವರು 1932ರ ಅನಂತರ ಅಸ್ಪೃಶ್ಯತೆ ವಿರುದ್ಧ ದೇಶಾದ್ಯಂತ ಪ್ರವಾಸ ನಡೆಸಿದ್ದರು. ಅವರು ಫೆ. 25ರಂದು ಉಡುಪಿ ಅಜ್ಜರಕಾಡಿನಲ್ಲಿ ಮಾಡಿದ ಭಾಷಣದ ಸಾರಾಂಶ ಗಾಂಧೀಜಿ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ “ಹರಿಜನ್‌’ ಪತ್ರಿಕೆಯಲ್ಲಿ ಹೀಗಿದೆ:

Advertisement

“ದಲಿತರಿಗೆ ಪ್ರವೇಶ ಕೊಡದ ಕಾರಣ ಬ್ರಾಹ್ಮಣರಿಗೆ ಬೆನ್ನು ಹಾಕಿದ ದೇವರ ಸ್ಥಾನದ ಬಗ್ಗೆ ಬಹಳ ದಿನಗಳಿಂದ ಕೇಳಿದ್ದೇನೆ. ಮುಂದೆ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ದೊರಕುವಂತಹ ಸಾರ್ವಜನಿಕ ಅಭಿಪ್ರಾಯ ರೂಪಣೆಯಾಗಬೇಕು ಎಂದು ಕೇಳಿಕೊಳ್ಳುತ್ತೇನೆ. ಈ ಕಾರ್ಯ ಸೌಹಾರ್ದ- ಗೌರವಾನ್ವಿತವಾಗಿ (ಜೆಂಟ್ಲೆಸ್ಟ್‌ ಆಫ್ ಮೀನ್ಸ್‌) ಆಗಬೇಕು. ಇದು ಆತ್ಮಶುದ್ಧಿಗಾಗಿ (ಸೆಲ್ಫ್ ಪ್ಯೂರಿಫಿಕೇಶನ್‌) ಆಗಬೇಕು. ದೇವಸ್ಥಾನಗಳಿಗೆ ಹೋಗುವವರಲ್ಲಿಯೇ ಬಹುಮಂದಿ ಇಚ್ಛೆಪಟ್ಟು ಆಗದ ಹೊರತು ಇದು ನಿಜವಾದ ಪ್ರವೇಶ ಆಗುವುದಿಲ್ಲ.

ಉಡುಪಿಯಲ್ಲಿ ದಲಿತೋದ್ಧಾರದ ಚಟುವಟಿಕೆಗಳು ದ್ವಿಗುಣಗೊಂಡು ಇಡೀ ರಾಜ್ಯಕ್ಕೆ ಮಾದರಿಯಾಗಬೇಕು, ಮೇಲ್ಪಂಕ್ತಿಯಾಗಬೇಕು. ಅಸ್ಪçಶ್ಯತಾ ನಿವಾರಣೆಯ ಸಂದೇಶ ಭಾತೃತ್ವದ ಸಂದೇಶವಾಗಿದೆ’. ಆಗ ಅಜ್ಜರಕಾಡಿನಿಂದ ಈಗ ತೋರುವ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಮಾರ್ಗವಾಗಲೀ, ರಾಜ್ಯ ಹೆದ್ದಾರಿ, ಕವಿ ಮುದ್ದಣ ಮಾರ್ಗವಾಗಲೀ ಇರಲಿಲ್ಲ. ಗಾಂಧೀಜಿಯವರು ಅಜ್ಜರಕಾಡಿನಿಂದ ತೆಂಕುಪೇಟೆಗೆ ಬಂದು, ರಥಬೀದಿಯಲ್ಲಿ ಒಂದು ಪ್ರದಕ್ಷಿಣೆ ಬಂದು (“ರಾಷ್ಟ್ರಬಂಧು’ ಪತ್ರಿಕೆಯಲ್ಲಿ ವರದಿಯಾಗಿದೆ)

ಬಡಗುಪೇಟೆ ಮೂಲಕ ಕಲ್ಸಂಕ ಮಾರ್ಗವಾಗಿ ಕುಂದಾಪುರಕ್ಕೆ ಹೋಗುವಾಗ ಬ್ರಹ್ಮಾವರದಲ್ಲಿ ಸಾರ್ವಜನಿಕರು ಸಲ್ಲಿಸಿದ ದಲಿತೋದ್ಧಾರದ ನಿಧಿ ಸ್ವೀಕರಿಸಿ ಹೀಗೆ ಮಾತನಾಡಿದರು: “ಅಸ್ಪೃಶ್ಯತಾ ನಿವಾರಣೆಯಾಗದಿದ್ದರೆ ಹಿಂದೂ ಧರ್ಮಕ್ಕೆ ಉಳಿಗಾಲವಿಲ್ಲ’. ಇದಾದ ಬಳಿಕ ಉಡುಪಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಸ್‌.ಯು. ಪಣಿಯಾಡಿ ದೇವಸ್ಥಾನಗಳಿಗೆ ದಲಿತರ ಪ್ರವೇಶ ಕುರಿತು ಚಳವಳಿ ನಡೆಸಿದ್ದರು. ಶ್ರೀ ಪೇಜಾವರರು ಅಸ್ಪೃಶ್ಯತೆ ವಿರುದ್ಧ ಹೋರಾಟವನ್ನು ಇನ್ನೊಂದು ಮಜಲಿಗೆ ಒಯ್ದರು.

* ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಚಿಕ್ಕಪ್ರಾಯದಲ್ಲಿ ಸನ್ಯಾಸ ಸ್ವೀಕರಿಸಿದಾಗಿನ ಸಾಮಾಜಿಕ ಸ್ಥಿತಿಗತಿ ಈಗಿನಂತಲ್ಲ. ಪೇಜಾವರ ಗ್ರಾಮದ ಮಠದಲ್ಲಿ ನಡೆದ ಘಟನೆ… ಒಕ್ಕಲುಗಳಲ್ಲಿ ಕೆಲವು ಜಾತಿಯವರು ಮಠದ ಹೊರಗಿದ್ದು ಕೆಲವು ಜಾತಿಯವರು ಒಳಗೆ ಬರುತ್ತಿದ್ದರು. ಇದು ಹಿಂದೂ ಧರ್ಮಕ್ಕೆ ಕಳಂಕ ಎಂದು ಆಗಲೇ ಗಮನಿಸಿದ್ದ ಶ್ರೀಪಾದರು ಎಲ್ಲ ಜಾತಿಯ ಒಕ್ಕಲುಗಳನ್ನೂ ಒಳಗೆ ಬರಹೇಳಿ ಪ್ರಸಾದ ನೀಡಿದರು. ಇದು 1940-50ರ ದಶಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next