Advertisement

4 ಜಿಪಂ ಕ್ಷೇತ್ರ ಏರಿಕೆ, 14 ತಾಪಂ ಕ್ಷೇತ್ರ ಕಡಿತ

06:29 PM Feb 19, 2021 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 23 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿದ್ದು, ಮುಂಬರುವ ಚುನಾವಣೆಯವರೆಗೆ ಒಟ್ಟು 27 ಕ್ಷೇತ್ರಗಳಿಗೆ ಏರಿಕೆಯಾಗಲಿದೆ. 5 ತಾಲೂಕು ಪಂಚಾಯ್ತಿಗಳಿಂದ ಒಟ್ಟು 89 ಕ್ಷೇತ್ರಗಳಿದ್ದು, 75ಕ್ಕೆ ಇಳಿಕೆಯಾಗಲಿದೆ.

Advertisement

ರಾಜ್ಯ ಚುನಾವಣಾ ಆಯೋಗ ಜಿಪಂ ಮತ್ತು ತಾಪಂ ಕ್ಷೇತ್ರಗಳನ್ನು ಪುನರ್‌ರಚಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಅಧಿಕೃತ ಪತ್ರ ಬರೆದಿದೆ. ಈ ಆದೇಶದಲ್ಲಿ ಪ್ರತಿ ಜಿಲ್ಲೆಯಲ್ಲಿರಬೇಕಾದ ಜಿಪಂ ಮತ್ತು ತಾಪಂ ಕ್ಷೇತ್ರಗಳ ಸಂಖ್ಯೆಯನ್ನು ನಮೂದಿಸಲಾಗಿದೆ. ಆ ಸಂಖ್ಯೆಗಳಿಗನುಗುಣವಾಗಿ ಕ್ಷೇತ್ರಗಳನ್ನು ಪುನರ್‌ರಚಿಸಲು ಸೂಚನೆ ನೀಡಲಾಗಿದೆ.

ಅದರಂತೆ ಚಾಮರಾಜನಗರ ಜಿಪಂಗೆ 27 ಕ್ಷೇತ್ರ (ಸದಸ್ಯ) ಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಚಾಮರಾಜನಗರ ತಾಲೂಕಿಗೆ 9, ಕೊಳ್ಳೇಗಾಲ ತಾಲೂಕಿಗೆ 4, ಹನೂರು ತಾಲೂಕಿಗೆ 5, ಗುಂಡ್ಲುಪೇಟೆ ತಾಲೂಕಿಗೆ 6 ಹಾಗೂ ಯಳಂದೂರು ತಾಲೂಕಿಗೆ 3 ಜಿಪಂ ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ.

ಜಿಪಂ ಕ್ಷೇತ್ರಗಳು: ಪ್ರಸ್ತುತ ಚಾಮರಾಜನಗರ ಜಿಪಂನಲ್ಲಿ 23 ಕ್ಷೇತ್ರಗಳಿವೆ. ಚಾಮರಾಜನಗರ ತಾಲೂಕಿನಲ್ಲಿ ಹರದನಹಳ್ಳಿ, ಆಲೂರು, ಹರವೆ, ಅಮಚವಾಡಿ, ಉಡಿಗಾಲ, ಮಾದಾಪುರ ಸಂತೆಮರಹಳ್ಳಿ, ಚಂದಕವಾಡಿ ಸೇರಿ ಒಟ್ಟು 8 ಜಿಪಂ ಕ್ಷೇತ್ರಗಳಿವೆ. ಇಲ್ಲಿ 1 ಕ್ಷೇತ್ರ ಹೆಚ್ಚಳವಾಗಲಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ಕೌದಳ್ಳಿ, ಬಂಡಳ್ಳಿ, ಲೊಕ್ಕನಹಳ್ಳಿ, ಸತ್ಯೇಗಾಲ, ಮಾರ್ಟಳ್ಳಿ, ಪಾಳ್ಯ, ಕುಂತೂರು, ರಾಮಾಪುರ ಸೇರಿ ಈಗ ಒಟ್ಟು 8 ಜಿಪಂ ಕ್ಷೇತ್ರಗಳಿವೆ. ಪ್ರಸ್ತುತ ಕೊಳ್ಳೇಗಾಲದೊಳಗೆ ಇದ್ದ ಹನೂರು ಪ್ರತ್ಯೇಕ ತಾಲೂಕಾಗಿರುವುದರಿಂದ ಕೊಳ್ಳೇಗಾಲ ತಾಲೂಕಿನಲ್ಲಿ 4 ಜಿಪಂ ಕ್ಷೇತ್ರಗಳು, ಹನೂರು ತಾಲೂಕಿಗೆ 5 ಕ್ಷೇತ್ರಗಳು ಹಂಚಿಕೆಯಾಗಲಿವೆ. ಹೀಗಾಗಿ ಚಾ.ನಗರ ತಾಲೂಕಿನಷ್ಟೇ ಸಂಖ್ಯೆಯ 8 ಕ್ಷೇತ್ರಗಳನ್ನು ಹೊಂದಿದ್ದ ಕೊಳ್ಳೇಗಾಲ ಈಗ 4 ಕ್ಷೇತ್ರಗಳಿಗೆ ಸೀಮಿತವಾಗಲಿದೆ.

ಇದನ್ನೂ ಓದಿ:ಪಂಚಮಸಾಲಿ ಮೀಸಲಿಗೆ ವಿರೋಧದ ಆರೋಪ: ಸ್ಪಷ್ಟನೆ ನೀಡಿದ ಡಿಸಿಎಂ ಸವದಿ

Advertisement

ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರಸ್ತುತ ಬೇಗೂರು, ಹಂಗಳ, ತೆರಕಣಾಂಬಿ, ಬರಗಿ, ಕಬ್ಬಹಳ್ಳಿ ಸೇರಿ 5 ಕ್ಷೇತ್ರಗಳಿವೆ. ಇಲ್ಲಿ 1 ಕ್ಷೇತ್ರ ಹೆಚ್ಚಳವಾಗಲಿದೆ. ಯಳಂದೂರು ತಾಲೂಕಿನಲ್ಲಿ ಅಗರ, ಕಸಬಾ ಸೇರಿ 2 ಕ್ಷೇತ್ರಗಳಿದ್ದವು. ಇಲ್ಲಿ 1 ಕ್ಷೇತ್ರ ಹೊಸದಾಗಿ ಸೃಷ್ಟಿಯಾಗಲಿದೆ. ಒಟ್ಟಾರೆ ಜಿಲ್ಲೆಯಲ್ಲಿ 4 ಜಿಪಂ ಕ್ಷೇತ್ರಗಳು ಹೊಸದಾಗಿ ರಚನೆಯಾಗಲಿವೆ.

ತಾಪಂ ಕ್ಷೇತ್ರಗಳು: ಜಿಲ್ಲೆಯಲ್ಲಿ ಒಟ್ಟು 89 ತಾಪಂ ಕ್ಷೇತ್ರ (ಸ್ಥಾನ )ಗಳಿದ್ದವು. ಪುನರ್‌ರಚನೆಯಲ್ಲಿ 14 ತಾಪಂ ಕ್ಷೇತ್ರಗಳನ್ನು ಜಿಲ್ಲೆ ಕಳೆದುಕೊಳ್ಳಲಿದೆ. ಪ್ರಸ್ತುತ ಚಾಮರಾಜನಗರ ತಾಪಂ ವ್ಯಾಪ್ತಿಯಲ್ಲಿ 29 ಕ್ಷೇತ್ರಗಳಿವೆ. ಇದು 24 ಕ್ಷೇತ್ರಗಳಾಗಲಿವೆ. ಗುಂಡ್ಲುಪೇಟೆ ತಾಪಂನಲ್ಲಿ 20 ಕ್ಷೇತ್ರಗಳಿದ್ದವು, 16 ಕ್ಷೇತ್ರಗಳಾಗಲಿವೆ.ಕೊಳ್ಳೇಗಾಲ ತಾಪಂನಲ್ಲಿ 29 ಕ್ಷೇತ್ರಗಳಿದ್ದವು. ಈಗ 10 ಕ್ಷೇತ್ರಗಳಾಗಲಿವೆ. ಯಳಂದೂರು ತಾಪಂನಲ್ಲಿ 11 ಕ್ಷೇತ್ರಗಳಿದ್ದವು, ಇಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸದಾಗಿ ರಚನೆಯಾಗಿರುವ ಹನೂರು ತಾಪಂಗೆ 14 ತಾಪಂ ಕ್ಷೇತ್ರಗಳು ಸೃಷ್ಟಿಯಾಗಲಿವೆ. ಈ ಪುನರ್‌ ರಚನೆಯಿಂದ ಕೊಳ್ಳೇಗಾಲ ತಾಲೂಕಿನಲ್ಲೇ ಅತಿ ಕಡಿಮೆ ತಾಪಂ ಕ್ಷೇತ್ರಗಳಾಗಲಿವೆ! ಇದುವರೆಗೂ ಕಡಿಮೆ ಸ್ಥಾನಗಳಿದ್ದ ಯಳಂದೂರು ತಾಲೂಕಿನಲ್ಲಿ ಕೊಳ್ಳೇಗಾಲ ತಾಲೂಕಿಗಿಂತ ಹೆಚ್ಚು ಸ್ಥಾನಗಳಾಗಲಿವೆ!

Advertisement

Udayavani is now on Telegram. Click here to join our channel and stay updated with the latest news.

Next