ಮಹಾಭಾರತ ಪುರಾಣ ಮನುಷ್ಯನ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದು ಹಾಗೆ ಧರ್ಮರಕ್ಷಣೆ ಮಾಡುವ ಕಾರ್ಯವನ್ನು ನಮಗೆ ತಿಳಿಸಿಕೊಡುವ ಶ್ರೇಷ್ಠ ಧರ್ಮ ಗ್ರಂಥವಾಗಿದೆ. ಹಾಗೇ ಕೆಲವೊಮ್ಮೆ ಧರ್ಮಸ್ಥಾಪನೆಗಾಗಿ ನೋವು ಸೋಲು ಹತಾಶೆಯನ್ನು ಅನುಭವಿಸಬೇಕಾಗುತ್ತದೆ.
ಅದಕ್ಕೆ ಉತ್ತಮ ಉದಾಹರಣೆಯಂತೆ ಸಿಗುವುದು ಮಹಾಭಾರತದ ದುರಂತ ನಾಯಕ ಕರ್ಣ. ಕುಂತಿಯ ಪುತ್ರನಾಗಿ ಜನಿಸಿದರು ಕೂಡ ಸೂತಪುತ್ರನಾಗಿ ಜೀವನ ನಡೆಸಬೇಕಾದ ಪರಿಸ್ಥಿತಿ ಕರ್ಣ ನದಾಗಿರುತ್ತದೆ. ಬಿಲ್ವಿದ್ಯೆ ಕಲಿಯುವ ಇಚ್ಛೆ ಅವನಲ್ಲಿ ಇದ್ದರೂ ಕೂಡ ಸಂಪ್ರದಾಯ ಹಾಗೂ ಪರಂಪರೆಗಳು ಅವನು ಬಿಲ್ವಿದ್ಯೆ ಕಲಿಯಲು ಅಡ್ಡಿಯಾಗುತ್ತದೆ. ಒಂದರ್ಥದಲ್ಲಿ ಸಂಪ್ರದಾಯ ಹಾಗೂ ಪರಂಪರೆಗಳೆ ಕರ್ಣನ ಶತ್ರುಗಳಾಗಿ ಬಿಡುತ್ತವೆ. ಕೊನೆಗೆ ಅವೆಲ್ಲವನ್ನು ಮೆಟ್ಟಿ ನಿಲ್ಲುವ ಮನಸ್ಸು ಮಾಡಿ ಬಿಲ್ವಿದ್ಯೆ ಕಲಿಯುವ ಬಯಕೆಯಿಂದ ದ್ರೋಣಾಚಾರ್ಯರಲ್ಲಿ ಗೆ ಹೋದಾಗ ಅಲ್ಲಿ ಕರ್ಣನಿಗೆ ಅಪಮಾನವಾಗುತ್ತದೆ. ಈ ಅಪಮಾನವನ್ನು ಸವಾಲಾಗಿ ಸ್ವೀಕರಿಸಿದ ಕರ್ಣ ದ್ರೋಣಾಚಾರ್ಯರಿಗೆ ಗುರುಗಳಾದ ಪರಶುರಾಮನಲ್ಲಿ ಬಿಲ್ವಿದ್ಯೆ ಕಲಿಯಲು ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿ ಬಿಲ್ವಿದ್ಯೆಯನ್ನು ಕಲಿತುಕೊಳ್ಳುತ್ತಾನೆ ಅಷ್ಟೇ ಅಲ್ಲದೆ ಬಿಲ್ವಿದ್ಯೆಯಲ್ಲಿ ಪ್ರವೀಣನಾಗುತ್ತಾನೆ.
ಆದರೆ ಒಂದು ದಿನ ತೊಡೆಯ ಮೇಲೆ ಗುರು ಪರುಶುರಾಮರು ಮಲಗಿದ್ದಾಗ ದುಂಬಿಯೊಂದು ಕರ್ಣನ ಕಾಲನ್ನು ಕಚ್ಚಲಾರಂಭಿಸುತ್ತದೆ. ರಕ್ತ ಒಂದು ಕಡೆಯಿಂದ ಬರುತ್ತಿದ್ದರೂ ಕೂಡ ಗುರು ಪರಶುರಾಮನ ನಿದ್ದೆಗೆ ಭಂಗವಾಗಬಾರದೆಂದು ದೃಢಸಂಕಲ್ಪ ಮಾಡಿ ಕುಳಿತಿರುತ್ತಾನೆ. ಆ ರಕ್ತ ಪರಶುರಾಮರ ದೇಹ ಸ್ಪರ್ಶವಾಗುವ ಮೂಲಕ ಅವರು ನಿದ್ದೆಯಿಂದ ಎದ್ದು ಆಶ್ಚರ್ಯದಿಂದ ಹಾಗೂ ಕೋಪದಿಂದ ಯಾರು ನೀನು? ಕೀಟ ತನ್ನನ್ನು ಕಚ್ಚುತ್ತಿದ್ದರೂ ಸಹ ಧೃಡ ಸಂಕಲ್ಪಮಾಡಿ ಸಹನೆಯಿಂದ ಕುಳಿತಿರುವೆಯಲ್ಲ ಬ್ರಾಹ್ಮಣನೋ ಸೂತಪುತ್ರನೋ ಎಂದು ಪ್ರಶ್ನಿಸುತ್ತಾರೆ. ಕೊನೆಗೂ ಕರ್ಣ ತಾನು ಸೂತಪುತ್ರನೆಂದು ಒಪ್ಪಿಕೊಳ್ಳುತ್ತಾನೆ. ಆದರೆ ಈ ವಿಷಯ ಪರಶುರಾಮನಿಗೆ ತುಂಬಾ ನೋವನ್ನುಂಟು ಮಾಡುತ್ತದೆ.
ಪರುಶುರಾಮರು ಕರ್ಣನಿಗೆ ನಿನ್ನ ಸಾಮರ್ಥ್ಯ ಶಾಪವನ್ನು ನೀಡುತ್ತಾರೆ. ಅನಂತರದ ದಿನದಲ್ಲಿ ಹಸ್ತಿನಾಪುರದಲ್ಲಿ ದ್ರೋಣಾಚಾರ್ಯರಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ಕೌರವ ಹಾಗೂ ಪಾಂಡವರಿಗೆ ವಿದ್ಯೆಯನ್ನ ಪ್ರದರ್ಶಿಸುವ ಸಮಯ ಎದುರಾಗುತ್ತದೆ. ಇದೇ ಸಮಯ ಅರ್ಜುನನನ್ನು ಶ್ರೇಷ್ಠ ಬಿಲ್ವದಾರಿ ಎನ್ನುವ ಘೋಷಣೆಗಳು ಕೇಳಿಬಂದಾಗ ಕರ್ಣ ರಣರಂಗದಲ್ಲಿ ತನ್ನ ವಿದ್ಯೆಯ ಪ್ರದರ್ಶನವನ್ನು ತೋರಿಸಲು ಮುಂದಾಗುತ್ತಾನೆ. ಆದರೆ ಅಲ್ಲಿ ಸುತಪುತ್ರನಿಗೆ ಪ್ರದರ್ಶನ ಮಾಡುವ ಹಕ್ಕಿರುವುದಿಲ್ಲ ಹಾಗೆ ಅಲ್ಲಿ ಕೌರವ ಹಾಗೂ ಪಾಂಡವರನ್ನು ಹೊರತುಪಡಿಸಿ ಬೇರೆ ಯಾರಾದರೂ ವಿದ್ಯೆಯನ್ನು ಪ್ರದರ್ಶಿಸಬೇಕಾದರೆ ಆತ ಒಂದು ರಾಜ್ಯದ ರಾಜನಾಗಿರಬೇಕು ಇದನ್ನು ಅರಿತ ದುರ್ಯೋಧನ ಕರ್ಣನೊಂದಿಗೆ ಮೈತ್ರಿ ಮಾಡಿಕೊಂಡು ಆತನನ್ನ ಅಂಗರಾಜ್ಯದ ರಾಜನೆಂದು ಅದೇ ಸಭೆಯಲ್ಲಿ ಘೋಷಿಸುತ್ತಾನೆ. ಈ ಮೂಲಕ ಕರ್ಣನಿಗೆ ತನ್ನ ವಿದ್ಯೆಯನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ. ಅನಂತರದ ದಿನದಲ್ಲಿ ದುರ್ಯೋಧನ ಹಾಗೂ ಕರ್ಣ ಪ್ರಾಣ ಸ್ನೇಹಿತರಾಗುತ್ತಾರೆ. ಕರ್ಣನ ಮಿತೃತ್ವ, ದಾನ, ಇವೆಲ್ಲದರಲ್ಲೂ ಗೆದ್ದು ದಾನಶೂರ ಕರ್ಣನೆಂದು ಜಗತ್ ವಿಖ್ಯಾತನಾಗುತ್ತಾನೆ.
ಆದರೆ ಕುರುಕ್ಷೇತ್ರದಂತ ಯುದ್ಧದಲ್ಲಿ ಗೆಲ್ಲಲಾಗುವುದಿಲ್ಲ ಕಾರಣ ಕರ್ಣ ಅಧರ್ಮದ ಜತೆ ಮೈತ್ರಿ ಮಾಡಿಕೊಂಡಿರುತ್ತಾನೆ.
ಕುರುಕ್ಷೇತ್ರ ಯುದ್ಧದಲ್ಲಿ ತನ್ನ ಸಾಮರ್ಥ್ಯದ ಬಗ್ಗೆ ಅರಿವಿದ್ದರೂ ಸೋಲನ್ನು ಅನುಭವಿಸುತ್ತಾನೆ ಕಾರಣ ಕುಂತಿಗೆ ನೀಡಿದ ವಚನ ಹಾಗೂ ಕೃಷ್ಣ ನುಡಿದ ಮನಪರಿವರ್ತನೆ ಮಾತುಗಳು ಆದರೂ ಕರ್ಣ ತಾನು ಜೀವಂತವಾಗಿರುವವರೆಗೂ ದುರ್ಯೋಧನನ ರಕ್ಷಣೆ ಮಾಡುತ್ತಾನೆ ಎಂಬ ವಚನವನ್ನು ದುರ್ಯೋಧನನಿಗೆ ನೀಡಿದ್ದು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ. ಕೊನೆಗೂ ಕರ್ಣ ಗುಣದಲ್ಲಿ ಗೆದ್ದು ಯುದ್ಧದಲ್ಲಿ ಸೋಲುತ್ತಾನೆ. ಇದು ಮಹಾಭಾರತದ ಮೂಲ ತಿರುಳಾದರೆ ಇನ್ನೊಂದೆಡೆ ಇಂದ್ರನು ತನ್ನ ಮಗನ ರಕ್ಷಣೆಗೆ ಕರ್ಣನ ಕವಚ ಕೇಳಿದ್ದು ಇದು ತನ್ನ ಪ್ರಾಣವನ್ನು ಯೋಚಿಸದೆ ಅದನ್ನು ಸಹ ನೀಡಿದ. ಇಂದಿಗೂ ಜಗತ್ತು ಆತನನ್ನು ಸ್ಮರಣಿಸುವುದು ನಿಷ್ಕಲ್ಮಶ ಸ್ನೇಹ ಮತ್ತು ಪ್ರತಿಫಲ ಬಯಸದ ಧಾನದಿಂದ.
-ಭರತ್ ಹೊಸಮಠ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು