ಜೀವನದಲ್ಲಿ ಸುಖ-ದುಃಖ ಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾವುದೇ ಕೆಲಸ, ಪರಿಶ್ರಮ, ಸ್ಪರ್ಧೆ ಇರಲಿ. ಗೆಲುವು ನಮ್ಮದಾದರೆ ನಮ್ಮ ಮನಸ್ಸು ಸಂತಸ, ಸಂಭ್ರಮದಿಂದ ಬೀಗುತ್ತದೆ. ಸೋಲು ನಮ್ಮದಾಯಿತು ಎಂದುಕೊಳ್ಳಿ, ಅದೇ ಮನಸ್ಸು ಅದರ ದುಪ್ಪಟ್ಟು ಹತಾಶೆಗೆ ಒಳಗಾಗುತ್ತದೆ. ಇದು ಮಾನವ ಸಹಜ ಗುಣ. ಇದರಿಂದಾಗಿ ನಮ್ಮಲ್ಲಿ ಕೀಳರಿಮೆ ಸೃಷ್ಟಿಯಾಗಿ ನಾವು ಪ್ರತಿಯೊಂದೂ ವಿಷಯದಲ್ಲೂ ಮುಂದಡಿ ಇಡುವಾಗ ಒಂದಿಷ್ಟು ದ್ವಂದ್ವದಲ್ಲಿ ಸಿಲುಕುತ್ತೇವೆ. ನಾವು ಈ ಕಾರ್ಯದಲ್ಲಿ ಗೆಲ್ಲುತ್ತೇವೆಯೋ ಇಲ್ಲವೋ?, ಒಂದು ವೇಳೆ ಸೋತರೆ ಬೇರೆಯವರು ನಮ್ಮನ್ನು ಹೀಗಳೆದು ಅವ ಮಾನಿಸಿದರೆ.. ಹೀಗೆ ನಮ್ಮ ಯೋಚನಾ ಲಹರಿ ಮುಂದುವರಿಯುತ್ತದೆ. ಈ ರೀತಿಯಾದಾಗ ನಾವು ಆ ಕಾರ್ಯ ದಿಂದ ಹಿಂದೆ ಸರಿಯುವುದು ಶತಃಸಿದ್ಧ.
ಒಂದೂರಲ್ಲಿ ಒಬ್ಬ ರೈತನಿದ್ದ. ಅವನಿಗೆ ಒಂದು ಹೊಲವಿತ್ತು. ಆತ ತುಂಬಾ ಪರಿಶ್ರಮಿ. ಪ್ರತೀ ದಿನ ಆತ ತನ್ನ ಭುಜದ ಮೇಲೆ ಎರಡೂ ಬದಿಯಲ್ಲಿ ಮಣ್ಣಿನ ಮಡಿಕೆಯನ್ನು ಕಟ್ಟಿರುವ ಬಿದಿರನ್ನು ಹೊತ್ತು ಕೊಂಡು ಒಂದು ನೀರಿರುವ ಕೊಳದ ಹತ್ತಿರ ಹೋಗಿ ಆ ಎರಡೂ ಮಡಿಕೆಯಲ್ಲಿ ನೀರು ತುಂಬಿಕೊಂಡು ಬಂದು ತನ್ನ ಹೊಲಕ್ಕೆ ನೀರು ಹಾಯಿಸುತ್ತಿದ್ದ. ಆದರೆ ಬಲ ಬದಿಯಲ್ಲಿ ಕಟ್ಟಿದ ಮಡಿಕೆಗೆ ಒಂದು ಸಣ್ಣ ರಂಧ್ರವಿತ್ತು. ಆ ರೈತ ನೀರು ತುಂಬಿಸಿಕೊಂಡು ತನ್ನ ಹೊಲದತ್ತ ಬರುವಾಗ ಅರ್ಧದಷ್ಟು ನೀರು ಸೋರಿ ಹೋಗುತ್ತಿತ್ತು. ಇದನ್ನು ಗಮನಿಸಿದ ಎಡ ಬದಿಯ ಮಡಿಕೆ “ನೀನು ನಿಷ್ಪ್ರಯೋ ಜಕ’ ಎಂದು ಹೇಳಿ ಗೇಲಿ ಮಾಡಿ ನಗ ತೊಡಗಿತು. ಇದರಿಂದ ಹತಾಶೆಗೊಳಗಾದ ಬಲ ಬದಿಯ ಆ ಮಡಿಕೆ ಒಂದು ದಿನ ರೈತನಲ್ಲಿ ಕೇಳಿತು “ನಾನು ಕೆಲಸಕ್ಕೆ ಬಾರದ ಮಡಿಕೆ. ನೀನ್ಯಾಕೆ ನನ್ನನ್ನು ಮಾರಿ ಹೊಸ ಮಡಿಕೆ ತೆಗೆದುಕೊಳ್ಳಬಾರದು? ಎಂದು. ಮಡಿಕೆಯ ಮಾತಿನ ಮರ್ಮ, ಅದರ ನೋವು ರೈತನಿಗೆ ಅರಿವಾಯಿತು.
ಆದರೂ ಮರುದಿನವೂ ಎಂದಿನಂತೆ ಎರಡೂ ಮಡಿಕೆಗಳನ್ನು ಕಟ್ಟಿದ್ದ ಬಿದಿರನ್ನು ತನ್ನ ಭುಜದ ಮೇಲಿರಿಸಿ ಕೊಳದತ್ತ ತೆರಳಿದ. ಎರಡೂ ಮಡಿಕೆಗಳಲ್ಲಿ ನೀರು ತುಂಬಿಸಿಕೊಂಡು ಹೊಲದತ್ತ ಹೆಜ್ಜೆ ಹಾಕಿದ. ಆದರೆ ರಂಧ್ರವಿರುವ ಮಡಿಕೆಗೋ ತೀವ್ರ ಹತಾಶೆ, ನೋವು. ಈ ಕಾರಣದಿಂದಾಗಿಯೇ ರೈತ ದಾರಿ ಮಧ್ಯೆ ಆ ಮಡಿಕೆಯನ್ನು ಉದ್ದೇಶಿಸಿ ಹೇಳಿದ. “ಮಡಿಕೆಯೇ, ಸ್ವಲ್ಪ ಕೆಳಗೆ ಇರೋ ನೆಲ ನೋಡು. ನೀನು ಇಲ್ಲಿ ಬೆಳೆದಿರುವ ಹೂವಿನ ಗಿಡಗಳಿಗೆ ಪ್ರತಿದಿನ ನೀರುಣಿಸಿ, ಅವು ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸಲು ನೆರವಾಗಿರುವೆ. ಆ ಹೂಗಳನ್ನು ನಾನು ದೇವರ ನಿತ್ಯ ಪೂಜೆಗೆ ಅರ್ಪಿಸು ತ್ತಿದ್ದೇನೆ. ಹೀಗಿರುವಾಗ ನೀ ಹೇಗೆ ನಿಷ್ಪ್ರ ಯೋಜಕನಾಗಲು ಸಾಧ್ಯ?’. ರೈತನ ಈ ಮಾತುಗಳನ್ನು ಕೇಳಿ ರಂಧ್ರ ಇರೋ ಮಡಿಕೆಗೆ ಹೆಮ್ಮೆಯಾದರೆ ಗೇಲಿ ಮಾಡಿದ ಮಡಿಕೆಗೆ ಮುಖಭಂಗವಾಯಿತು.
ಮಾನವ ಜೀವನವೂ ಹೀಗೆಯೇ. ಕಷ್ಟ-ಸುಖ, ನೋವು-ನಲಿವು, ಸೋಲು-ಗೆಲುವು.. ಇವೆಲ್ಲವೂ ನಮ್ಮ ಜೀವನದ ಅವಿಭಾಜ್ಯ ಅಂಗಗಳೇ. ಇವೆಲ್ಲವುಗಳಿಗೆ ಹೆದರಿ ಹಿಂಜರಿದರೆ ಅಥವಾ ಬೀಗಿದರೆ ನಮ್ಮ ಜೀವನ ಎಂದಿಗೂ ಪರಿಪೂರ್ಣ ವಾಗದು. ಸೋಲು, ನೋವು, ಸಂಕಷ್ಟ ಗಳನ್ನು ಅನುಭವಿಸಿದಾಗ ಮಾತ್ರವೇ ಗೆಲುವು, ಸುಖ, ನೆಮ್ಮದಿಯ ನೈಜ ಅನುಭವವನ್ನು ನಾವು ಪಡೆಯಬಹುದು. ಹಾಗೆಯೇ ಗೆಲುವು, ಸುಖ, ನೆಮ್ಮದಿಯ ನೈಜ ಸಂಭ್ರಮ, ಸಡಗರ ಸೋಲು, ನೋವು, ಸಂಕಷ್ಟದ ಹಿಂದಿದೆ. ತೀರಾ ಹತಾಶರಾದಾಗ, ನಮ್ಮನ್ನ ನೋಡಿ ನಕ್ಕು ಗೇಲಿ ಮಾಡುವವರ ಮಾತಿಗೆ ಗಮನ ಕೊಡದೆ, ಕುಗ್ಗದೇ, ನಮ್ಮಿಂದಾದ ಒಳ್ಳೆಯ ಕೆಲಸವನ್ನ ನೆನೆದು ನಮ್ಮ ಮನಸ್ಸಿಗೆ ನಾವೇ ಸಾಂತ್ವನ ಹೇಳ್ಳೋಣ. ಒಳ್ಳೆಯ ದಿನಕ್ಕಾಗಿ, ಕ್ಷಣಕ್ಕಾಗಿ ಕಾಯೋಣ.
ಮಲ್ಲಿಕಾ ಕೆ., ಮಂಗಳೂರು