Advertisement

ರಾಮ –ಸೀತೆಯ ಸುತ್ತ ಸ್ತ್ರೀವಾದ ಮತ್ತು ಪುರುಷ ಸಂವೇದನೆ

09:30 AM Apr 20, 2018 | Karthik A |

ಇಂದಿನ ಜಗತ್ತಿಗೆ ವೈಯಕ್ತಿಕ ಜೀವನ ಬೇರೆ, ನಮ್ಮ ಸಾಮಾಜಿಕ ಚಿಂತನೆ ಬೇರೆಯಾಗಿರುತ್ತದೆ. ದೇವರನ್ನು ದ್ವೇಷಿಸುತ್ತಲೇ ಮನೆಗೆ ಹೋಗಿ ಹೆಂಡತಿ ನೀಡುವ ದೇವರ ಪ್ರಸಾದವನ್ನು ಭಯ-ಭಕ್ತಿಯಿಂದ ಸ್ವೀಕರಿಸುವ ನಾಸ್ತಿಕರು ಇದ್ದಾರೆ. ರಾಮನು ಏಕಪತ್ನಿವ್ರತಸ್ಥನೆಂದು ಉಪದೇಶ ಮಾಡಿ ಮನಸಿನಲ್ಲೇ ಪರಸ್ತ್ರೀಯರನ್ನು ಕಾಮಿಸುವ ಆಸ್ತಿಕರೂ ಇದ್ದಾರೆ. ಆದರೆ ಪಾಲನೆ, ಬದುಕು ಎರಡು ಒಂದೇ, ಅದು ರಾಮನ ಚರಿತ್ರೆ.

Advertisement

ಶ್ರೀರಾಮ ಸಮಸ್ತ ಕಲ್ಯಾಣ ಗುಣ ನಿಧಿ, ಸೀತೆ ಸದ್ಗುಣ, ಸ್ವಚಾರಿತ್ರ್ಯೆಯ ಬಾಳದೀವಿಗೆ. ಈ ಎರಡು ವ್ಯಕ್ತಿತ್ವಗಳ ಜೀವನ ರೂಪಾಂತರವೇ ಆದರ್ಶ ದಾಂಪತ್ಯ ಜೀವನವೆಂದು ಆಸ್ತಿಕ ಜಗತ್ತು ವೈಭವಿಕರಿಸುತ್ತದೆ. ನಾಸ್ತಿಕ ಜಗತ್ತು ಇದಕ್ಕೆ ತದ್ವಿರುದ್ದವಾಗಿ ರಾಮನ ವ್ಯಕ್ತಿತ್ವವನ್ನು ಪ್ರಶ್ನಿಸುತ್ತದೆ, ಸೀತೆಯ ಬಗ್ಗೆ, ಇವರ ದಾಂಪತ್ಯದ ಬಗ್ಗೆ ಕೂಡ ಸಂಶಯಿಸುತ್ತದೆ. ಹಾಗೆ ಸಂಶಯಿಸುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಕೂಡ ಅದು ನಂಬುತ್ತದೆ. ಇದರ ಮಧ್ಯೆ ಸ್ತ್ರೀವಾದ ಅಂತ ಒಂದಿದೆ, ಅದರ ದೃಷ್ಟಿಕೋನವೇನು? ಅದರ ದೃಷ್ಟಿಯಲ್ಲಿ ಸೀತೆಯ ಸ್ಥಾನವೇನು? ರಾಮನ ಅಸ್ತಿತ್ವವೇನು? ಇವು ಕೂಡ ನೋಡಲೇಬೇಕಾದ ಸಂಗತಿಗಳಾಗಿವೆ.

ಒಂದರ್ಥದಲ್ಲಿ ನಾಸ್ತಿಕ-ಸ್ತ್ರೀವಾದಗಳೆರಡು ರಾಮನ ವಿಷಯದಲ್ಲಿ ಏಕಾಭಿಪ್ರಾಯವನ್ನೇ ಹೊಂದಿವೆ. ‘ಸೀತೆಯನ್ನು ಅಗ್ನಿಪ್ರವೇಶಕ್ಕೆ, ತದನಂತರ ಕಾಡಿಗೆ ಅಟ್ಟಿದ ರಾಮ, ರಾಮನೇ? ಅವನಿಗೆ ಸ್ತ್ರೀಯರ ಬಗ್ಗೆ ಗೌರವ ಇರಲಿಲ್ಲವೆ?’ ಎಂದು ನೇರವಾಗಿ ಪ್ರಶ್ನಾಬಾಣಗಳನ್ನು ಅವು ಸಂಧಿಸುತ್ತಲೇ ಇವೆ. ಹೌದು ಅತ್ಯಂತ ನಿರ್ದಯವಾಗಿ ಸೀತೆಯನ್ನು ಕಾಡಿಗೆ ಅಟ್ಟಿದ, ಆದರೆ ಅದು ಅವನು ಒಬ್ಬ ಗಂಡನಾಗಿ ಮಾಡಿದ ಕೆಲಸವಲ್ಲ, ಬದಲಾಗಿ ಒಂದು ಸಾಮ್ರಾಜ್ಯದ ಚಕ್ರವರ್ತಿಯಾಗಿ, ಆ ಕ್ಷಣಕ್ಕೆ ಅವನು ತೆಗೆದುಕೊಂಡು ನಿರ್ಣಯ ಅಂತ ಆಸ್ತಿಕ ಜಗತ್ತು ಅದರ ಹಿನ್ನೆಲೆಯನ್ನು ವಿವರವಾಗಿ ಪ್ರಸ್ತುತಪಡಿಸುತ್ತದೆ. ಈಗ ನೇರವಾಗಿ ಮುಂದಕ್ಕೆ ಹೋಗೋಣ.

ಸ್ತ್ರೀವಾದದ ದೃಷ್ಟಿಯಲ್ಲಿನ ಸೀತೆಗೂ, ಸ್ತ್ರೀ ಸಂವೇದನೆಯಲ್ಲಿ ಅಡಗಿರುವ ಸೀತೆಗೂ ಅಗಾಧ ವ್ಯತ್ಯಾಸವಿದೆ. ಸ್ತ್ರೀವಾದ ಸೀತೆಯ ಮೂಲಕ (ಅಂದರೆ ಅವಳಿಗೆ ಆದ ಅನ್ಯಾಯವನ್ನು ಪ್ರಶ್ನಿಸುವ ಮೂಲಕ) ಅದು ಇಂದಿನ ಸಾಮಾಜಿಕ ಕಟ್ಟುಪಾಡು, ಪುರುಷ ಪ್ರಧಾನ ವ್ಯವಸ್ಥೆ, ಸಂಸ್ಕೃತಿ-ಸಂಪ್ರದಾಯಗಳನ್ನು ಪ್ರಶ್ನಿಸುತ್ತದೆ. ಅದೇ ಸಂವೇದನೆ ಸೀತೆಯ ಸಹನೆ, ಮನೋಸ್ಥೈರ್ಯದಂಥ ಗುಣವಿಶೇಷಗಳನ್ನು ತನ್ನ ಸಂವೇದನೆಯೊಂದಿಗೆ ಜೋಡಿಸಿಕೊಂಡು ತನ್ನ ನೋವಿನಿಂದ ಹೊರಬರಲು ಸೀತೆಯ ಪಾತ್ರವನ್ನೇ ಗುರಾಣಿಯಾಗಿಸಿಕೊಳ್ಳುತ್ತಿದೆ. ಸ್ತ್ರೀ ವಾದ-ಸಂವೇದನೆಯಿಂದ ಸ್ವಲ್ಪಹೊರಗೆ ಬಂದು ಪುರುಷವಾದ, ಪುರುಷ ಸಂವೇದನೆ ಕಡೆಗೂ ಸ್ವಲ್ಪನೋಡದೆ ಹೋದರೆ ಹೇಗೆ?

ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಪುರುಷವಾದ ಅಂತ ಪ್ರತ್ಯೇಕವಾಗಿ ಯಾವುದೂ ಇಲ್ಲ, ಹೀಗಾಗಿ ಪುರುಷವಾದವನ್ನು ಪಕ್ಕಕ್ಕಿಟ್ಟು ಪುರುಷ ಸಂವೇದನೆಯನ್ನು ನೋಡೋಣ. ಹೌದು ಪುರುಷ ಸಂವೇದನೆ ಎಂದು ಏನಾದರೂ ಇದೆಯೇ? ಇದ್ದರೂ ಅದರ ಬಗ್ಗೆ ಚಿಂತಿಸವವರು ಎಷ್ಟು ಮಂದಿಯಿದ್ದಾರೆ? ನಿಜ, ಪುರುಷ ಪ್ರಧಾನ ಎಂಬ ಕಾರಣಕ್ಕೆ ನಮ್ಮಲ್ಲಿ ಪುರುಷ ಸಂವೇದನೆ ಯಾರಿಗೂ ಬೇಡವಾಗಿದೆ. ಇಂದಿನ ಕಾನೂನುಗಳನ್ನೇ ನೋಡಿ, ಒಂದು ಹೆಣ್ಣಿನ ಮಾತಿಗೆ ನೀಡುವಷ್ಟು ಮನ್ನಣೆ ಒಂದು ಗಂಡಿನ ಮಾತಿಗೆ ನೀಡುವುದಿಲ್ಲ. ಒಂದು ಹೆಣ್ಣಿನ ನೋವಿಗೆ ಧ್ವನಿಯಾಗುವಂತೆ, ಒಂದು ಗಂಡಿಸಿನ ನೋವಿಗೆ ಧ್ವನಿಯಾಗುವುದಿಲ್ಲ. ಇದೇ ಕಾರಣಕ್ಕೆ ನನಗೆ ಪುರುಷ ಸಂವೇದನೆ ಕೂಡ ಬಹಳ ಮುಖ್ಯವೆನ್ನಿಸುತ್ತದೆ.

Advertisement

ನಾನು ರಾಮನ ಪಾತ್ರವನ್ನು ಈ ಸಂವೇದನೆಯೊಂದಿಗೆ ಜೋಡಿಸಿ ನೋಡಲು ಬಯಸುತ್ತೇನೆ. ಇಲ್ಲಿ ರಾಮನು ಒಬ್ಬ ಚಕ್ರವರ್ತಿಯಾಗಿರುವಂತೆ, ತನ್ನ ಹೆಂಡತಿಗೆ ಗಂಡನು ಕೂಡ ಆಗಿದ್ದಾನೆ. ಅಂದಿನ ಸಮಾಜಕ್ಕೆ ಅವನು ಆದರ್ಶನಾಗಿದ್ದ, ಅವನು ಯಾವುದೇ ತಪ್ಪುಮಾಡುವುದಿಲ್ಲ, ತಪ್ಪು ಮಾಡುವವರನ್ನು ಸಹಿಸುವುದಿಲ್ಲ ಅಂತ ಅವನ ರಾಜ್ಯ ಮಾತ್ರವಲ್ಲ ಇತರ ರಾಜ್ಯಗಳ ಪ್ರಜೆಗಳು ನಂಬಿದ್ದರು. ಆದರ್ಶಗಳ ಪಾಲನೆಯಲ್ಲಿ ಅವನ ಮೇಲಿದ್ದ ಒತ್ತಡವನ್ನು ಯಾರೂ ಗಮನಿಸಲಾರದೇ ಹೋಗಿದ್ದಾರೆ. ನಿಜ, ಇಂದಿನ ಜಗತ್ತಿಗೆ ವೈಯಕ್ತಿಕ ಜೀವನ ಬೇರೆ, ನಮ್ಮ ಸಾಮಾಜಿಕ ಚಿಂತನೆ ಬೇರೆಯಾಗಿರುತ್ತದೆ. ದೇವರನ್ನು ದ್ವೇಷಿಸುತ್ತಲೇ ಮನೆಗೆ ಹೋಗಿ ಹೆಂಡತಿ ನೀಡುವ ದೇವರ ಪ್ರಸಾದವನ್ನು ಭಯ – ಭಕ್ತಿಯಿಂದ ಸ್ವೀಕರಿಸುವ ನಾಸ್ತಿಕರು ಇದ್ದಾರೆ. ರಾಮನು ಏಕಪತ್ನಿವ್ರತಸ್ಥನೆಂದು ಉಪದೇಶ ಮಾಡಿ ಮನಸಿನಲ್ಲೇ ಪರಸ್ತ್ರೀಯರನ್ನು ಕಾಮಿಸುವ ಆಸ್ತಿಕರೂ ಇದ್ದಾರೆ. ಆದರೆ ಪಾಲನೆ, ಬದುಕು ಎರಡು ಒಂದೇ, ಅದು ರಾಮನ ಚರಿತ್ರೆ.

ಆದರ್ಶಗಳನ್ನು ಬೆನ್ನತ್ತಿ ಬದುಕಿದ ಮಹನೀಯರ ಯಾವುದೇ ಕಥೆಗಳನ್ನು ನೋಡಿದರೂ ಅಲ್ಲಿ ಅವರ ಪತ್ನಿಯರೆಲ್ಲಾ ನೋವಿನಲ್ಲಿ ಸೀತೆಯರೇ ಆಗಿರುತ್ತಾರೆ. ಆದರೂ, ಅವರು ತಮ್ಮ ಪುರುಷರ ಆದರ್ಶಗಳಿಗೆ ಜೊತೆಗೂಡಿ ಬದುಕಿದ್ದವರೇ! ಅಗಸ ಆಡಿದ ಮಾತಿಗೆ ರಾಮನು ಸೀತೆಯನ್ನು ಕಾಡಿಗೆ ಅಟ್ಟಿದ ಎಂಬುವುದು ರಾಮನ ಮೇಲಿರುವ ಅತಿದೊಡ್ಡ ಆರೋಪ. ಇದನ್ನು ನಾನು ಬೇರೆಯದೇ ದೃಷ್ಟಿಕೋನದಲ್ಲಿ ನೋಡ ಬಯಸುತ್ತೇನೆ. ರಾಮನು ಸೀತೆಯನ್ನು ಕಾಡಿಗೆ ಕಳಿಸುವ ಮೂಲಕ ಅವಳಿಗೆ ನ್ಯಾಯವನ್ನೇ ಮಾಡಿದ. ಒಂದು ಸಮಾಜಕ್ಕಾಗಿ, ಹಾಗೇ ಪತ್ನಿಗಾಗಿ ಅವನೊಂದು ನಿಲುವು ತೆಗೆದುಕೊಳ್ಳಬೇಕಿತ್ತು. ಅವೆರಡನ್ನೂ ಅವನು ಇದರ ಮೂಲಕ ಈಡೇರಿಸಿದ.

ಒಂದು ಕ್ಷಣ ಯೋಚಿಸಿ, ರಾಮ ಆ ವ್ಯಕ್ತಿಯ ಮಾತನ್ನು ಅಲಕ್ಷಿಸಬಹುದಿತ್ತು. ಆದರೆ ನಾಳೆ ಇದರ ಮುಂದುವರಿದ ಭಾಗವಾಗಿ ಮತ್ತೂಬ್ಬ, ಮತ್ತೂಂದು ಬೆರಳು ಸೀತೆಯ ಕಡೆಗೆ ತೋರಿಸುತ್ತಿದ್ದ. ಪ್ರತಿಯೊಂದಕ್ಕೂ ಆಗ ಸೀತೆಯನ್ನು ಆಧಾರವಾಗಿಟ್ಟುಕೊಂಡು ಮಾತನಾಡುವವರ ಸಂಖ್ಯೆ ರಾಜ್ಯದಲ್ಲಿ ಬೆಳೆದು ಹೋಗುತ್ತಿತ್ತು. ಆಗ ಸೀತೆ ಮಾನಸಿಕವಾಗಿ ನಿತ್ಯ ಯಾತನೆ, ಕಿರುಕುಳ ಅನುಭವಿಸಬೇಕಾಗುತ್ತಿತ್ತು. ಅವಳ ಆ ವೇದನೆಗೆ ಉತ್ತರ ಕೊಡುವವರು ಅಲ್ಲಿ ಯಾರು ಇರುತ್ತಿದ್ದರು? ಅವಳನ್ನು ಕಾಡಿಗೆ ಕಳಿಸುವ ಮೂಲಕ ಸಮಾಜದ ಕೊಳಕಿನಿಂದ ಅವಳನ್ನು ಮುಕ್ತಗೊಳಿಸಿದ. ಅವಳು ಕಾಡಿಗೆ ಹೋದ ಕಾರಣಕ್ಕೆ ಸಮಾಜದಲ್ಲಿ ಅವಳ ಬಗ್ಗೆ ಉಂಟಾದ ಭಾವನೆ, ಅದು ಏನಾಯಿತು? ಇದನ್ನು ನೀವು ನಾಸ್ತಿಕ, ಆಸ್ತಿಕ, ಸ್ತ್ರೀವಾದಗಳಲ್ಲಿ ಹುಡುಕಿದರೆ ಸಿಗದೆ ಹೋಗಬಹುದು. ಆದರೆ ಪುರುಷ ಸಂವೇದನೆ ಹುಡುಕಿದರೆ ದೊರೆಯುತ್ತದೆ. ರಾಮನು ಸಮಾಜದ ಮಧ್ಯೆ ತನ್ನ ಪ್ರೀತಿಯಿಂದ ದೂರವಾಗಿ ತನ್ನಲ್ಲಿ ತಾನೇ ನೋವು ನುಂಗಿಕೊಂಡು ಬದುಕಿದ. ಅವನ ವೇದನೆ (ಅದು ಬಹುಶಃ ವಾಲ್ಮೀಕಿಗಳಿಗೆ ಮಾತ್ರ ಅರ್ಥವಾಗಿರಬೇಕು) ಕುರಿತು ನಾವು ಮಾತನಾಡುವುದಿಲ್ಲ, ಅದೇ ದುರಂತ.

ನಮ್ಮಲ್ಲಿ ಸ್ತ್ರೀವಾದಿಗಳು ಪುರುಷರ ಬಗ್ಗೆ ಬರೆಯುವಾಗ ಅವರನ್ನು ಲಂಪಟರು, ಕಾಮುಕರು, ಧನದಾಹಿಗಳು ಹೀಗೆಲ್ಲಾ ಚಿತ್ರಿಸುತ್ತಾರೆ. ಹೀಗಾಗಿ ಇವರೆಲ್ಲಾ ಪ್ರಗತಿಪರರು, ಚಿಂತಕರಾಗಿ ಸಮಾಜ ಗೌರವಿಸುತ್ತದೆ. ಅದೇ ಪುರುಷರು (ಸಾಹಿತಿಗಳು) ಯಾವುದೋ ಒಂದು ಸ್ತ್ರೀ ಪಾತ್ರದಲ್ಲಿ ಇಂತಹುದೇ ಗುಣವಿಶೇಷಗಳನ್ನು ಚಿತ್ರಿಸಿದರೆ ಮುಗಿದೇ ಹೋಯಿತು, ಅವನು ಸ್ತ್ರೀ ದ್ವೇಷಿಯಾಗಿ ಬಿಡುತ್ತಾನೆ. ಪ್ರಗತಿ ವಿರೋಧಿ, ಒಂದು ಜನಾಂಗಕ್ಕೆ ಸೇರಿದ್ದರೆ ಅವರಿಗೆ ಮನುವಾದಿ ಪಟ್ಟವನ್ನೂ ಕಟ್ಟಲಾಗುತ್ತದೆ. ಗುಣವಿಶೇಷಗಳಿಗೆ ಗಂಡು-ಹೆಣ್ಣು ಭೇದವಿಲ್ಲ, ಸಂವೇದನೆಗೂ ಕೂಡ. ಆದರೆ ನಮ್ಮ ಸಾಹಿತ್ಯ, ಸಮಾಜ, ಕಾನೂನುಗಳೆಲ್ಲ ಏಕಮುಖವಾಗಿವೆ. ಇಲ್ಲಿ ಪುರುಷರ ನಡತೆಗಳು ಮಾತ್ರವೇ ಕಾಣಸಿಗುತ್ತವೆ. ಆದರೆ ಅವನ ಸಂವೇದನೆ ಮಾತ್ರ ಯಾರಿಗೂ ಕಾಣುವುದಿಲ್ಲ. ಕಂಡರೂ ಅದು ಚಿಂತನಾರ್ಹ ಸಂಗತಿಯೇ ಆಗಿರುವುದಿಲ್ಲ. ಪುರುಷರ ಮೇಲಿನ ದೌರ್ಜನ್ಯ, ದಬ್ಟಾಳಿಕೆ, ಮಾನಸಿಕ ಹಿಂಸೆಗಳು ನಮಗೆ ಮುಖ್ಯವೆನ್ನಿಸುವುದೇ ಇಲ್ಲ.

ರಾಮನ ವೇದನೆಯಂತೆ ಪುರುಷ ಸಂವೇದನೆಯೂ ಕೂಡ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನೆಲೆಯಿಲ್ಲದೇ ಹೋಗಿದೆ. ರಾಮ ತನ್ನ ಸಮಾಜಕ್ಕಾಗಿ ಮಾಡಿದ ತ್ಯಾಗವನ್ನು ಆ ಸಮಾಜವೇ ಅಪಹಾಸ್ಯ ಮಾಡಿದಂತೆ, ಪುರುಷ ಸಂವೇದನೆಯನ್ನು ಮಾತನಾಡಿದರೆ ಅದು ಕೂಡ ಅಪಹಾಸ್ಯವಾಗುವುದು ಸಹಜ. ರಾಮನ ಸಂವೇದನೆ ಅವನ ಆದರ್ಶ, ಪರಂಪರೆಗಳ ಮಧ್ಯೆ ಅನಾಥವಾಯಿತು. ಆಸ್ತಿಕರಿಗೆ ಅವನು ದೈವ, ನಾಸ್ತಿಕರಿಗೆ, ಸ್ತ್ರೀವಾದಿಗಳಿಗೆ ಅವನು ಹೆಂಡತಿಗೆ ಮೋಸ ಮಾಡಿದ ಗಂಡ. ಆದರೆ ಅವನ ಸಂವೇದನೆ ಆಸ್ತಿಕ, ನಾಸ್ತಿಕ, ಸ್ತ್ರೀವಾದ, ಕೊನೆಗೆ ಸೀತೆಯೂ ಕೂಡ ಗುರುತಿಸಲಾರದೆ ಹೋದಳು. ಎಷ್ಟಾದರೂ ರಾಮನು ಕೂಡ ಪುರುಷ, ಅವನದು ಕೂಡ ಪುರುಷ ಸಂವೇದನೆಯೇ!

— ರವೀಂದ್ರ ಕೊಟಕಿ

Advertisement

Udayavani is now on Telegram. Click here to join our channel and stay updated with the latest news.

Next