Advertisement
ಮನೆ ಕಟ್ಟಿದ ಮೇಲೆ, ಮತ್ತೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಬೇಕೆಂದರೆ ಸ್ವಲ್ಪ ತಲೆನೋವೇ. ಇಟ್ಟಿಗೆ ಇಲ್ಲ, ಸಿಮೆಂಟ್, ಮರಳು ತರಬೇಕು. ಕ್ಯೂರಿಂಗ್ ಮಾಡಿಸಬೇಕು. ಅಬ್ಬಬ್ಟಾ ಎಲ್ಲ ಸೇರಿ ದೊಡ್ಡ ರೇಜಿಗೆಯಾಗಿಬಿಡುತ್ತದೆ. ಮನೆ ಕಟ್ಟುವುದೇ ಸುಲಭ ಅಂತ ಅನಿಸಿಬಿಟ್ಟು ಆಲ್‌ಟ್ರೇಷನ್ ಮಾಡುವುದೇ ದೊಡ್ಡ ಹರಸಾಹಸ ಎಂದೆನಿಸುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ದಿಢೀರ್ ಎಂದು ಮನೆಯ ಒಳಗೆ ಏನಾದರೂ ಪಾರ್ಟಿಷನ್ ವಿಭಜಕಗಳನ್ನು ಮಾಡಬೇಕು ಎಂದರೆ ‘ಒಣ ಗೋಡೆ’ ಅಂದರೆ ಗಾರೆ ನೀರು ಬಳಸದೆ ಮಾಡಿಕೊಳ್ಳಬಹುದಾದ ‘ಡ್ರೈ ವಾಲ್’ ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇವು ಸಾಮಾನ್ಯವಾಗಿ ಮೂರರಿಂದ ನಾಲ್ಕು ಇಂಚಿನಷ್ಟು ದಪ್ಪದ್ದು, ಎರಡೂ ಕಡೆ ಮಟ್ಟಸವಾದ ಗಟ್ಟಿ ಮೇಲ್ಮೈ ಹೊಂದಿರುವ ಬೋರ್ಡ್‌ಗಳನ್ನು ಅಳವಡಿಸಲಾಗಿರುವ ಲೈಟ್ ವೇಯ್ಟ್ ಕಾಂಕ್ರಿಟ್ ಅಂದರೆ ಹಗುರ ಕಾಂಕ್ರಿಟ್ ಮಧ್ಯಭಾಗ ಹೊಂದಿರುವ ಹಲಗೆಯಾಗಿರುತ್ತದೆ. ಇವನ್ನು ಕೆಳಗೆ ಫ್ಲೋರಿಗೂ, ಮೇಲೆ ಸೀಲಿಂಗ್‌ಗೂ ಸಿಕ್ಕಿಸುವ ಮೂಲಕ ದಿಢೀರ್ ಆಗಿ ಗೋಡೆ ತಯಾರಾಗುತ್ತದೆ.
ಕಾರಿಡಾರ್ ಇತ್ಯಾದಿಗಾಗಿ, ಮೂಲೆಯನ್ನೂ ಒಳಗೊಂಡಂತೆ ‘ಎಲ್’ ಆಕಾರದಲ್ಲಿ ಗೋಡೆ ಕಟ್ಟಬೇಕೆಂದಿದ್ದರೆ, ಮೂಲೆಗೆ ಹೊಂದುವಂತೆ ಸೂಕ್ತ ಚಾನೆಲ್ ಇಲ್ಲವೇ ‘ಎಲ್’ ಆ್ಯಂಗಲ್ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ದಿಢೀರ್ ಗೋಡೆಗಳು ಸಾಕಷ್ಟು ಮೆದು ವಸ್ತುಗಳಿಂದಲೇ ತಯಾರಾದ ಕಾರಣ, ಮೂಲೆಗಳು ಸುಲಭದಲ್ಲಿ ಘಾಸಿಗೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದುದರಿಂದ, ಮೂಲೆಗಳಿಗೆ ಕಡೇಪಕ್ಷ ಅಲ್ಯೂಮಿನಿಯಮ್ ಆ್ಯಂಗಲ್‌ಗಳನ್ನು ಹಾಕುವುದು ಉತ್ತಮ. ಮೂಲೆ ಪಕ್ಕದಲ್ಲಿಯೇ ಬಾಗಿಲು ಇಡುವುದನ್ನು ತಪ್ಪಿಸಲು ಆಗದಿದ್ದರೆ, ಬಾಗಿಲನ್ನು ತೆಗೆದು ಹಾಕುವಾಗ ಉಂಟಾಗುವ ಕಂಪನಗಳನ್ನು ತಡೆಯಲು ಶಕ್ತಿಶಾಲಿಯಾಗಿರುವಂತೆ ಮೂಲೆಗಳಲ್ಲಿ ದಪ್ಪನೆಯ ಚಾನೆಲ್‌ಗಳನ್ನು ಹಾಕಬೇಕಾಗುತ್ತದೆ. ಕರ್ವ್ ಗೋಡೆ
ಸಣ್ಣ ಮಟ್ಟದ ಕಮಾನು ಆಕಾರದ ಗೋಡೆಗಳನ್ನು ಕಟ್ಟುವುದು ಅಷ್ಟೊಂದು ಸುಲಭವಲ್ಲದಿದ್ದರೂ ಸ್ವಲ್ಪ ದೊಡ್ಡದಾದ ಅಂದರೆ ಸುಮಾರು ಹತ್ತು ಅಡಿ ಅಗಲದ ಕರ್ವ್ ಮಾಡುವುದು ಕಷ್ಟವೇನಲ್ಲ. ಕೆಳಗೆ, ಅದರಲ್ಲೂ ಮೇಲೆ ಸೂರಿಗೆ ಸಿಗಿಸುವ ಚಾನೆಲ್ ಅನ್ನು ಕುಲುಮೆಗೆ ಕೊಟ್ಟು ಸೂಕ್ತರೀತಿಯಲ್ಲಿ ಬಾಗಿಸಿ ಬಿಗಿಗೊಳಿಸಬೇಕು. ಹೇಳಿಕೇಳಿ ಪ್ಯಾನೆಲ್‌ಗಳು ಸ್ವಲ್ಪ ಅಗಲವಿರುವುದರಿಂದ, ಮಾಮೂಲಿ ಇಟ್ಟಿಗೆಗಳಿಂದ ಮಾಡಿದಷ್ಟು ಸಪೂರಾಗಿ, ಗುಂಡಗೆ ಗೋಡೆ ಬಾರದಿದ್ದರೂ, ಬಿಡಿಬಿಡಿಯಾಗಿ ಕೂಡಿ ಒಟ್ಟಾರೆಯಾಗಿ ಕರ್ವ್ ಆಗಿರುವಂತೆ ಕಾಣುತ್ತದೆ. ಈ ಪ್ಯಾನೆಲ್‌ಗಳನ್ನು ಮಾಮೂಲಿ ನೇರವಾದ ಗೋಡೆಗಳನ್ನು ಕಟ್ಟಲು ತಯಾರು ಮಾಡಿರುವುದರಿಂದ, ಕರ್ವ್ ಗೋಡೆಗಳು ಬೇಕೆಂದಲ್ಲಿ, ಒಂದು ಕಡೆ ಸ್ವಲ್ಪ ಹೆಚ್ಚು ಸಂದಿ ಬರುವುದು ಅನಿವಾರ್ಯ. ಹಾಗಾಗಿ, ಈ ಸಂದಿಯನ್ನು ಸೂಕ್ತರೀತಿಯಲ್ಲಿ ವೈಟ್ ಸಿಮೆಂಟ್ ಇಲ್ಲವೆ ಈ ಡ್ರೆ„ವಾಲ್‌ಗೆಂದೇ ತಯಾರಿಸಲಾಗುವ ಗಾರೆಯಿಂದ ಸರಿಪಡಿಸಿಕೊಳ್ಳಬೇಕು.
Related Articles
ಮಾಮೂಲಿ ಗೋಡೆಗಳಿಗೆ ನೀಡಲಾಗುವ ಎಲ್ಲ ರೀತಿಯ ಫಿನಿಶ್‌ಗಳನ್ನು ಒಣಗೋಡೆಗಳಿಗೂ ಕೊಡಬಹುದು. ಗಾರೆಯವರು ಕೈಯಲ್ಲಿ ಪ್ಲಾಸ್ಟರ್ ಮಾಡಿದ ಗೋಡೆಗಳಿಗಿಂತ ಮೇಯ್ನ ಫಿನಿಶ್ ಆದ ಡ್ರೈವಾಲ್‌ಗಳು ಹೆಚ್ಚು ಸಪೂರವಾಗಿರುವುದರಿಂದ, ಹೆಚ್ಚಿನ ಪಟ್ಟಿ ಉಪಯೋಗಿಸದೆ ಮಟ್ಟಸಮಾಡಲು ಸಾಧ್ಯ. ಯಥಾಪ್ರಕಾರ ಫ್ರೈಮರ್ ಬಣ್ಣ ಬಳಿದು ನಂತರ ನಮಗಿಷ್ಟವಾದ ಕಲರ್ ಇಲ್ಲವೇ ಇತರೆ ಫಿನಿಶ್ ನೀಡಬಹುದು. ಇಂಥ ಗೋಡೆಗಳನ್ನು ಬಳಸುವುದೇ ಎಲ್ಲವೂ ಬೇಗನೆ ಮುಗಿಯಲಿ ಎಂದು. ಆದುದರಿಂದ, ಎರಡು ಮೂರು ಕೋಟ್ ಪಟ್ಟಿ ನಂತರ ಎರಡು ಕೋಟ್ ಪೇಂಟ್ ಇತ್ಯಾದಿ ರೇಜಿಗೆ ಎಂದೆನಿಸಿದರೆ, ಸೂಕ್ತ ವಾಲ್ ಪೇಪರ್ ಅಂಟಿಸಿಬಹುದು. ಡ್ರೈವಾಲ್ ಗಳು ಸಾಮಾನ್ಯವಾಗೇ ಮಟ್ಟಸವಾಗಿರುವುದರಿಂದ, ಇವುಗಳ ಮೇಲೆ ವಾಲ್ ಪೇಪರ್ ಅಂಟಿಸುವುದು ಕಷ್ಟವೇನಲ್ಲ. ಜೊತೆಗೆ, ಈ ಪೇಪರ್‌ಗಳು ಒಂದಷ್ಟು ಹೆಚ್ಚುವರಿ ಬಲವರ್ಧನೆಯನ್ನೂ ಮಾಡಬಲ್ಲವು.
Advertisement
ಹೊರಗಿನ ಗೋಡೆಗಳಿಗೆ ಬಳಸಬಹುದೆ?ನಮ್ಮಲ್ಲಿ ಇಂದಿಗೂ ಕನ್ನ ಕೊರೆಯುವ ಕಳ್ಳರ ಭೀತಿ ಇರುವುದರಿಂದ ಹೊರಗೊಡೆಗಳಿಗೆ ಅದರಲ್ಲೂ ನೆಲ ಮಟ್ಟದಲ್ಲಿರುವ ಹೊರಗಿನ ಗೋಡೆಗಳಿಗೆ ಈ ಮಾದರಿಯ ಡ್ರೈವಾಲ್‌ಗಳನ್ನು ಉಪಯೋಗಿಸದಿದ್ದರೆ ಒಳ್ಳೆಯದು. ಸಾಮಾನ್ಯವಾಗಿ ಕಳ್ಳರಿಗೆ ಯಾವುದೇ ಗೋಡೆ ಒಡೆಯುವುದಿಕ್ಕಿಂತ ಕಿಟಕಿಯ ಸರಳುಗಳನ್ನು ಬಾಗಿಸುವುದು ಇಲ್ಲ ಕತ್ತರಿಸುವುದು ಹೆಚ್ಚು ಸುಲಭ. ಹಾಗೆಯೇ ಮನೆಯ ಬಾಗಿಲುಗಳೂ ಕೂಡ ಸುಮಾರು ಒಂದಿಂಚಿನಷ್ಟು ಮಾತ್ರ ದಪ್ಪವಿರುವ ಕಾರಣ ಅದನ್ನೇ ಒಡೆದು ಒಳಗೆ ನುಗ್ಗಬಹುದು. ಹಾಗಾಗಿ ಹೊರಗೂ ಈ ಮಾದರಿಯ ಗೋಡೆಗಳನ್ನು ಬಳಸಬಹುದು. ನಿಮಗೇನಾದರೂ ಆತಂಕವಿದ್ದರೆ, ಈ ಹೊರಗೋಡೆಗಳಿಗೆ ಆದಷ್ಟೂ ಮಾಮೂಲಿ ಇಟ್ಟಿಗೆ ಗೋಡೆಗಳಿಗೆ ಕೊಡುವಂತೆ ಕಪ್ಪಿ ಫಿನಿಶ್ ಇತ್ಯಾದಿ ನೀಡಿದರೆ, ಗೋಡೆ ಹೆಚ್ಚು ಸದೃಢವಾಗಿರುವಂತೆ ಕಾಣುತ್ತದೆ! ಪ್ಯಾನೆಲ್ ಗೋಡೆ ವೈಶಿಷ್ಟ್ಯಗಳು
ಮಾಮೂಲಿ ಗೋಡೆಗಳಂತೆ ಇವು ಹೆಚ್ಚು ಭಾರ ಹೊಂದಿರದ ಕಾರಣ, ಸಾಮಾನ್ಯವಾಗಿ ಈಗಿರುವ ನೆಲಹಾಸಿನ ಮೇಲೆಯೇ ನೇರವಾಗಿ ಹೊಂದಿಸಲು ಬರುತ್ತದೆ. ಇವಕ್ಕೆ ‘ಗಾಡಿ’ ಇರುವುದರಿಂದ ಒಂದು ಪ್ಯಾನೆಲ್ ಮತ್ತೂಂದಕ್ಕೆ ಸುಲಭವಾಗಿ ಬೆಸೆದುಕೊಳ್ಳುತ್ತದೆ. ಸಿಮೆಂಟ್ ಗಾರೆಯ ಅಗತ್ಯವಿರುವುದಿಲ್ಲ. ಕೆಳಗೆ ಹಾಗೂ ಮೇಲೆ ಬಿಗಿಗೊಳಿಸಲು ಸೂಕ್ತ ಚಾನೆಲ್‌ಗಳನ್ನು ಅಂದರೆ ಈ ಪ್ಯಾನೆಲ್‌ಗಳನ್ನು ಸಿಗಿಸಬಹುದಾದ ಉಕ್ಕಿನ ದೋಣಿ ಮಾದರಿಯನ್ನು ಉಪಯೋಗಿಸಲಾಗುತ್ತದೆ. ಈ ರೆಡಿಮೇಡ್ ಹಲಗೆಗಳನ್ನು ಫ್ಯಾಕ್ಟರಿಗಳಲ್ಲಿ ತಯಾರು ಮಾಡುವುದರಿಂದ, ಒಂದೇ ಮಾದರಿಯ ಗುಣಮಟ್ಟ ಇದ್ದು, ಒಂದಕ್ಕೊಂದು ಬೆಸೆದನಂತರ, ಮಧ್ಯೆ ಹೆಚ್ಚು ಸಂದಿ ಇರುವುದಿಲ್ಲ. ಸಣ್ಣ ಗೆರೆಯಂಥ ಸ್ಥಳಕ್ಕೆ, ಗೋಡೆಗೆ ಬಣ್ಣ ಬಳಿಯಬೇಕಾದರೆ ಬಿಳಿಯುವ ಪಟ್ಟಿ ನೋಡಿದರೆ ಸಾಕಾಗುತ್ತದೆ. ಈ ಮಾದರಿಯ ಗೋಡೆಗಳು ಎರಡೂ ಬದಿಗೆ ಬಿಗಿಗೊಳಿಸಬಹುದಾದ ಸ್ಥಳಕ್ಕೆ ಹೆಚ್ಚು ಸೂಕ್ತವಾದರೂ ಇತರೆಡೆಗಳಲ್ಲಿಯೂ ಸೂಕ್ತ ಚಾನೆಲ್‌ಗಳನ್ನು ಬಳಸಬಹುದು. ಹೇಳಿಕೇಳಿ ಇವೆಲ್ಲ ಸೂಕ್ಷ್ಮ ಹಾಗೂ ಕುಶಲ ಕಾರ್ಯ ಬೇಡುವುದರಿಂದ, ಡ್ರೈ ಗೋಡೆಗಳನ್ನು ಬಳಸುವ ಮೊದಲೆ ಎಲ್ಲವನ್ನೂ ನಿರ್ಧರಿಸಿ, ನಂತರ ಹೆಚ್ಚು ಒಡೆಯುವುದು, ಕತ್ತರಿಸುವುದು ಇತ್ಯಾದಿಗಳನ್ನು ಮಾಡುವುದು ಉತ್ತಮ. ಈ ವಿಭಜಕಗಳಲ್ಲಿ ಬಾಗಿಲು ಬರುವಂತಿದ್ದರೆ, ಮರದ ಇಲ್ಲವೆ ಇತರೆ ಫ್ರೆಮ್ ಗಳನ್ನು ಮೊದಲೇ ಸಿದ್ಧಪಡಿಸಿಕೊಂಡು, ಒಟ್ಟೊಟ್ಟಿಗೆ ಇಟ್ಟು ಕಟ್ಟಿಕೊಳ್ಳುವುದು ಉತ್ತಮ. ಕಿಟಕಿ ಇಲ್ಲವೇ ಓಪನಿಂಗ್ ಇದ್ದರೆ, ಸೂಕ್ತ ಅಡ್ಡ ಲಿಂಟಲ್ ಮಾದರಿಯಲ್ಲಿ ನೀಡಿ ಮುಂದುವರೆಯುವುದು ಒಳಿತು. – ಆರ್ಕಿಟೆಕ್ಟ್ ಕೆ. ಜಯರಾಮ್ ; ಹೆಚ್ಚಿನ ಮಾಹಿತಿಗೆ: 9844132826