ಕಲಬುರಗಿ: 371 (ಜೆ) ವಿಧಿ ಪರಿಣಾಮಕಾರಿ ಅನುಷ್ಠಾನಕ್ಕೆ ಎದುರಾಗಿರುವ ನ್ಯೂನತೆ ಸರಿಪಡಿಸಲು ಅಗತ್ಯ ತಿದ್ದುಪಡಿಗಳನ್ನು ತರುವಂತೆ ಆಗ್ರಹಿಸಿ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಚಿವ ವೈಜನಾಥ ಪಾಟೀಲ ಬುಧವಾರ ಹೈ.ಕ ವಿಶೇಷ ಕೋಶದ ಸರ್ಕಾರದ ಜಂಟಿ ಕಾರ್ಯದರ್ಶಿ ಲೋಕನಾಥ ಅವರಿಗೆ ಮನವಿ ಸಲ್ಲಿಸಿ ಮಾತುಕತೆ ನಡೆಸಿದರು.
ಕಲಬುರಗಿ ವಿವಿಯ ಅತಿಥಿಗೃಹದಲ್ಲಿ ಮನವಿ ಸಲ್ಲಿಸಿ ಮಾತುಕತೆ ನಡೆಸಿದ ಹೋರಾಟ ಸಮಿತಿಯ ಪದಾಧಿಕಾರಿಗಳು, ಶೇ.8ರ ಮೀಸಲಾತಿ ಹೊರ ಭಾಗದಲ್ಲಿ ಜಾರಿಯಾಗದಿರುವುದು ಅನ್ಯಾಯವಾಗುತ್ತಿದೆ. ಕಲಂ ಜಾರಿಯಾಗಿ ಮೂರು ವರ್ಷಗಳಾದರೂ ಇರುವ ಅಡೆತಡೆಗಳು ನಿವಾರಣೆಯಾಗದಿರುವುದು ಅತಂಕತೆ ನಿರ್ಮಾಣವಾಗಿದೆ.
ಆದ್ದರಿಂದ ಇದಕ್ಕೆ ಕಾನೂನು ತಾರ್ಕಿಕ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಅದೇ ರೀತಿ ಯಾವುದೇ ರೀತಿಯ ವ್ಯಾಜ್ಯಗಳನ್ನು ಸ್ಥಳೀಯ ನ್ಯಾಯಾಧೀಕರಣ ಪೀಠದ ಸ್ಥಾಪನೆ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವುದು, ಹೈ. ಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳೆಷ್ಟು? ಈಗ ಎಷ್ಟು ಭರ್ತಿ ಮಾಡಿಕೊಳ್ಳಲಾಗಿದೆ.
ಯಾವ ಹಂತದಲ್ಲಿದೆ ಎಂಬುದನ್ನು ಪ್ರಚುರಪಡಿಸಬೇಕೆಂದು ಆಗ್ರಹಿಸಿದರು. ಅರಣ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿನ ಹುದ್ದೆಗಳ ನೇಮಕಾತಿಯಲ್ಲಿ ಸಂವಿಧಾನದ 371ನೇ ಜೆ ವಿಧಿ ನಿಯಮ ಪಾಲಿಸಿಲ್ಲ ಎಂಬ ಅಂಶಗಳನ್ನು ಮಾಜಿ ಸಚಿವರು ಲೋಕನಾಥ ಅವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕನಾಥ ಅವರು, ಇದರಲ್ಲಿ ಲೋಪವಾಗಿರುವುದನ್ನು ಪರಿಶೀಲಿಸಲಾಗುವುದು. ಈಗಾಗಲೇ ಇದನ್ನು ತಮ್ಮ ಗಮನಕ್ಕೆ ತರಬೇಕಿತ್ತು ಎಂದರು. ಪ್ರೊ| ಛಾಯಾ ದೇಗಾವಂಕರ್, ಪ್ರೊ| ಬಸವರಾಜ ಕುಮನೂರ, ಪ್ರೊ| ಸಂಗೀತಾ ಕಟ್ಟಿ , ಜಿಲ್ಲಾ ಪಂಚಾಯಿತಿ ಸದಸ್ಯ ಗೌತಮ ಪಾಟೀಲ ಹಾಗೂ ಮತ್ತಿತರರು ಇದ್ದರು.