ಹೊಸದಿಲ್ಲಿ : ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯು ತಾತ್ಕಾಲಿಕವಾದುದಲ್ಲ, ಶಾಶ್ವತ ಸ್ವರೂಪದ್ದಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
2017ರಲ್ಲಿ SARFAESI ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪಿನಲ್ಲಿ ಕೂಡ ತಾನು ಸಂವಿಧಾನದ 370ನೇ ವಿಧಿಯು ತಾತ್ಕಾಲಿಕವಾದುದಲ್ಲ ಎಂದು ಸ್ಪಷ್ಟಪಡಿಸಿದ್ದುದಾಗಿ ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.
370ನೇ ವಿಧಿಯ ತಲೆಟಿಪ್ಪಣಿಯ ಹೊರತಾಗಿಯೂ ಅದರಲ್ಲಿನ ಅವಕಾಶಗಳು ತಾತ್ಕಾಲಿಕವಲ್ಲ, ಶಾಶ್ವತ ಸ್ವರೂಪದ್ದಾಗಿವೆ ಎಂದು SARFAESI ಪ್ರಕರಣದ ತೀರ್ಪಿನಲ್ಲಿ ಹೇಳಲಾಗಿತ್ತು ಎಂದು ನ್ಯಾಯಮೂರ್ತಿಗಳಾದ ಎ ಕೆ ಗೋಯಲ್ ಮತು ಆರ್ ಎಫ್ ನರೀಮಾನ್ ಅವರನ್ನು ಒಳಗೊಂಡ ಪೀಠವು ಹೇಳಿತು.
ಜಮ್ಮು ಕಾಶ್ಮೀರ ಸರಕಾರದ ಪರವಾಗಿ ಕೋರ್ಟಿನಲ್ಲಿ ಉಪಸ್ಥಿತರಿದ್ದ ಹಿರಿಯ ನ್ಯಾಯವಾದಿ ರಾಜೀವ್ ಧವನ್ ಮತ್ತು ಶೋಯಿಬ್ ಆಲಂ ಅವರು ಸರ್ವೋಚ್ಚ ನ್ಯಾಯಾಲಯದ ಮುಂದೆ ಇತ್ಯರ್ಥಕ್ಕೆ ಬಾಕಿ ಇರುವ ವಿಷಯಗಳು 370ನೇ ವಿಧಿಗೆ ಮಾತ್ರವೇ ಸಂಬಂಧಿಸಿದುದಾಗಿಲ್ಲ ಬದಲು 35ಎ ವಿಧಿಗೂ ಸಂಬಂಧಿಸಿದವುಗಳಾಗಿವೆ ಎಂದು ಹೇಳಿದರು.
ಹಾಲಿ ಪ್ರಕರಣವು 370ನೇ ವಿಧಿಗೆ ಮಾತ್ರವೇ ಸಂಬಂಧಿಸಿರುವುದರಿಂದ ಇತರೇ ವಿಷಯಗಳನ್ನು ಈ ವಿಷಯದಡಿ ವಿಚಾರಣೆ ನಡೆಸಲಾಗದು ಎಂದು ಧವನ್ ಕೋರ್ಟಿಗೆ ನಿವೇದಿಸಿದರು.
ಧವನ್ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಎಎಸ್‌ಜಿ ಅವರ ಕೋರಿಕೆಯ ಮೇರೆಗೆ ಮೂರು ವಾರಗಳ ಬಳಿಕ ವಿಚಾರಣೆಯನ್ನು ಕೈಗೊಳ್ಳಲು ನಿರ್ಧರಿಸಿತು.