Advertisement

ಮೋದಿ ಇಚ್ಛಾಶಕ್ತಿಯಿಂದ 370ನೇ ವಿಧಿ ರದ್ದು

11:37 PM Sep 22, 2019 | Lakshmi GovindaRaju |

ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾಶಕ್ತಿ, ಕೇಂದ್ರ ಗೃಹ ಸಚಿವರಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ರಣನೀತಿಯ ಪರಿಣಾಮ ಕಾಶ್ಮೀರಕ್ಕೆ ವಿಧಿಸಲಾಗಿದ್ದ 370ನೇ ವಿಧಿ ರದ್ದಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. “ಒಂದು ದೇಶ- ಒಂದು ಸಂವಿಧಾನ’ ರಾಷ್ಟ್ರೀಯ ಏಕತಾ ಅಭಿಯಾನದಡಿ ಬಿಜೆಪಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 370ನೇ ವಿಧಿ ರದ್ದತಿ ಬಗ್ಗೆ ಜನ ಜಾಗರಣ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಕಾಶ್ಮೀರದಲ್ಲಿ 1954ರಲ್ಲೇ ದೇಶದ ಸಂವಿಧಾನ ಪಾಲಿಸುವುದನ್ನು ನಿರ್ಬಂಧಿಸಲಾಗಿತ್ತು. ಹಾಗಾಗಿ 2 ಸಂವಿಧಾನ, 2 ಪ್ರಧಾನ, ಎರಡು ವಿಧಾನ ವ್ಯವಸ್ಥೆ ವಿರುದ್ಧ ಹೋರಾಟ ಆರಂಭವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಬುಡಕಟ್ಟು ಜನಾಂಗದವರಿಗೆ ರಾಜಕೀಯ ಮೀಸಲಾತಿ ಇಲ್ಲ. ಪಂಜಾಬ್‌ ಮೂಲದ ದಲಿತರಿಗೆ ಸಫಾಯಿ ಕರ್ಮಚಾರಿಗಳಿಗೆ ಆ ಕಾರ್ಯ ಹೊರತುಪಡಿಸಿ ಬೇರೆ ಉದ್ಯೋಗ ಮಾಡುವಂತಿರಲಿಲ್ಲ.

ಹೀಗೆ ಕಾಶ್ಮೀರದಲ್ಲಿ ಸಾಕಷ್ಟು ತಾರತಮ್ಯಗಳಿದ್ದವು ಎಂದು ಹೇಳಿದರು. ಇದೀಗ ಪ್ರಧಾನಿ ಮೋದಿಯವರ ದೃಢ ರಾಜಕೀಯ ನಿರ್ಧಾರ, ಇಚ್ಛಾಶಕ್ತಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಣನೀತಿಯಿಂದಾಗಿ ರಾಜ್ಯಸಭೆ ಯಲ್ಲಿ ಬಿಜೆಪಿಗೆ ಬಹುಮತವಿಲ್ಲದಿದ್ದರೂ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಯಿತು. ಪ್ರಧಾನಿಯವರು ತೋರಿದ ಇಚ್ಛಾಶಕ್ತಿ ಹಿಂದೆ ದೇಶದ ಜನ ನೀಡಿರುವ ಶಕ್ತಿ ಇದೆ. ಹಾಗಾಗಿ ಕಾಶ್ಮೀರಕ್ಕೆ 370ನೇ ವಿಧಿ ರದ್ದಾಗಿದೆ.

ಇನ್ನು ಮುಂದೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಅಲ್ಲಿನ ವಿಧಾನಸಭೆ, ಲೋಕಸಭೆಯಲ್ಲಿ ಮೀಸಲಾತಿ ಸಿಗಲಿದೆ. ಸಫಾಯಿ ಕರ್ಮಚಾರಿಗಳ ಮಕ್ಕಳು ಆಡಳಿತ ಸೇವೆಗೆ ಸೇರುವ ಅವಕಾಶ ಸಿಗಲಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರದಿಂದ ದೇಶದ ಜನ ಸಂತಸದಿಂದಿದ್ದಾರೆ. ಕಾಶ್ಮೀರದ ಜನತೆ ಅದಕ್ಕಿಂತಲೂ ಅತಿ ಹೆಚ್ಚು ಸಂಭ್ರಮದಲ್ಲಿದ್ದಾರೆ.

ಏಕೆಂದರೆ ಹಲವು ದಶಕಗಳಿಂದ ಎರಡನೇ ದರ್ಜೆ ನಾಗರಿಕರಂತೆ ಕಾಣುತ್ತಿದ್ದರಿಂದ ನೊಂದಿದ್ದವರು ಈಗ ಖುಷಿಯಲ್ಲಿದ್ದಾರೆ. ಈ ಎಲ್ಲ ವಿಚಾರಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.ದೇಶ ಇಂದು ಬದಲಾಗಿದ್ದು, ಪ್ರಗತಿ ಕಾಣುತ್ತಿದೆ. ಆರ್ಥಿಕತೆ ಪ್ರಗತಿಗೆ ಪೂರಕವಾಗಿ ತೆರಿಗೆ ವಿನಾಯ್ತಿ ಘೋಷಿಸುವ ದೃಢ ರಾಜಕೀಯ ಇಚ್ಛಾಶಕ್ತಿ ತೋರಿದ್ದನ್ನು ಪ್ರಧಾನಿ ಮೋದಿಯವರನ್ನು ಹೊರತುಪಡಿಸಿದರೆ ಬೇರೆ ಯಾರೂ ತೋರಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.

Advertisement

ಬಸವೇಶ್ವರ, ಕೆಂಪೇಗೌಡರ ಸ್ಮರಣೆ: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಭಾನು ವಾರ ಬೆಂಗಳೂರಿಗೆ ಭೇಟಿ ನೀಡಿದ ಜೆ.ಪಿ.ನಡ್ಡಾ ಅವರು ತಮ್ಮ ಭಾಷಣದಲ್ಲಿ ಬಸವೇಶ್ವರರು, ಕೆಂಪೇಗೌಡರ ಸ್ಮರಣೆ ಮಾಡಿದರು. ಬಸವೇಶ್ವರರ ತಪೋಭೂಮಿ, ನಗರ ನಿರ್ಮಾತೃ ಕೆಂಪೇಗೌಡರ ಕರ್ಮಭೂಮಿ ಪುಣ್ಯ ಭೂಮಿಗೆ ನಮಿಸುತ್ತೇನೆ. ಪವಿತ್ರ ಆತ್ಮಗಳಿಗೆ ನಮಿಸುತ್ತೇನೆ ಎಂದು ಜೆ.ಪಿ.ನಡ್ಡಾ ಭಾಷಣದಲ್ಲಿ ಉಲ್ಲೇಖೀಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದ, ಡಿಸಿಎಂ ಗೋವಿಂದ ಕಾರಜೋಳ, ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಸಚಿವ ವಿ.ಸೋಮಣ್ಣ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌, ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಎನ್‌.ರವಿಕುಮಾರ್‌, ಮಹೇಶ್‌ ಟೆಂಗಿನಕಾಯಿ, ಅರುಣ್‌ ಕುಮಾರ್‌ (ಸಂಘಟನೆ), ಸಂಸದರಾದ ಪಿ.ಸಿ. ಮೋಹನ್‌, ತೇಜಸ್ವಿ ಸೂರ್ಯ, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್‌.ಸದಾಶಿವ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next