Advertisement

ಸಂಧಿವಾತ ಚಿಕಿತ್ಸೆ: ಔಷಧದ ಮೇಲೆ ನಂಬಿಕೆಯೂ ಅತ್ಯಗತ್ಯ

03:30 AM Jul 09, 2017 | |

ಡಾಕ್ಟರ್‌ ನೀವು ಸೂಚಿಸಿದ ಔಷಧಗಳನ್ನು ತೆಗೆದುಕೊಂಡರೆ ಏನಾದರೂ ಸೈಡ್‌ ಎಫೆಕ್ಟ್ ಉಂಟಾಗುವ ಸಾಧ್ಯತೆಗಳಿವೆಯೇ? ನನ್ನ ವೈದ್ಯಕೀಯ ಜೀವನದಲ್ಲಿ  ಈ ಪ್ರಶ್ನೆಯನ್ನು ಹಲವು ಜನರು ನನ್ನಲ್ಲಿ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸುವುದು ಸುಲಭವೇನಲ್ಲ. ರೋಗಿಗೆ ತಾನು ತೆಗೆದುಕೊಳ್ಳುವ ಔಷಧದಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬುದನ್ನು ಅವರಿಗೆ ಮನಮುಟ್ಟುವಂತೆ ವಿವರಿಸಬೇಕಾಗುತ್ತದೆ. ಈ ಮೂಲಕ ಅವರು ಧೈರ್ಯದಿಂದ ಔಷಧ ಸ್ವೀಕರಿಸುವಂತಾಗುತ್ತದೆ. 

Advertisement

ಈ ಸಂಬಂಧ ಕೆಲವೊಂದು ಸಂಕ್ಷಿಪ್ತ ವಿವರಣೆಗಳು ಹಾಗೂ ಔಷಧಗಳ ಅಡ್ಡ ಪರಿಣಾಮಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಮುಂದೆ ನೀಡಲಾಗಿದೆ.

ಆಹಾರವಲ್ಲದ ವಸ್ತುವೊಂದನ್ನು ಸೇವಿಸಿದಾಗ ಅಥವಾ ದೇಹಕ್ಕೆ ಇಂಜೆಕ್ಟ್ ಮಾಡಿದಾಗ ಅಥವಾ ಇನ್ಹೆಲ್‌ ಮಾಡಿಕೊಂಡಾಗ ಅಥವಾ ಚರ್ಮದ ಮೇಲೆ ಹಚ್ಚಿದಾಗ ಶಾರೀರಿಕ ಬದಲಾವಣೆಗಳಾದರೆ ಅದನ್ನು ಔಷಧ ಎಂದು ಕರೆಯಲಾಗುತ್ತದೆ. 
    
ಔಷಧದ ಪರಿಣಾಮಗಳು
ಕಾಯಿಲೆಯೊಂದಕ್ಕೆ ಸಂಬಂಧಿಸಿದಂತೆ ಔಷಧವೊಂದನ್ನು ತೆಗೆದುಕೊಂಡಾಗ ರೋಗಿಯ ಶರೀರದಲ್ಲಿ ಎರಡು ರೀತಿಯ ಪರಿಣಾಮ ಉಂಟಾಗುವುದನ್ನು ಕಾಣಬಹುದು. ಮೊದಲನೆಯದ್ದು ಥೆರಪೆಟಿಕ್‌ ಪರಿಣಾಮ (ಆಪೇಕ್ಷಿತ ಪರಿಣಾಮ). ಇದು ರೋಗ ನಿವಾರಣೆಯಲ್ಲಿ ಉಪಯುಕ್ತವಾಗಿದೆ. ರೋಗ ನಿವಾರಣೆಗೆ ಹೊರತುಪಡಿಸಿದಂತೆ ಸೇವಿಸಿದ ಔಷಧವು ಬೇರೆ ಕೆಲವು ಕ್ರಿಯೆಗಳನ್ನು ಮಾಡುತ್ತದೆ. ಇದರಿಂದ ಉಂಟಾಗುವುದು ಎರಡನೇ ಪರಿಣಾಮವಾಗಿದೆ. ಈ ಪರಿಣಾಮ ರೋಗ ನಿವಾರಣೆಗೆ ಅಗತ್ಯವಿರುವುದಿಲ್ಲ. ಈ ರೀತಿಯ ಪರಿಣಾಮಗಳನ್ನು ಅಡ್ಡ ಪರಿಣಾಮಗಳು ಎಂದು ಕರೆಯಲಾಗುತ್ತದೆ.

ದೀರ್ಘ‌ಕಾಲದ ಸಂಧಿವಾತಕ್ಕೆ ಸಂಬಂಧಿಸಿದಂತೆ ದೀರ್ಘ‌ಕಾಲದ ಔಷಧ ಥೆರಪಿಯ ಕುರಿತ ವಿಶ್ಲೇಷಣೆಗೂ ಮುನ್ನ ಔಷಧದ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ. ಔಷಧಗಳು ತನ್ನನ್ನು ಗುಣಪಡಿಸುತ್ತವೆ ಎಂಬ ನಂಬಿಕೆ ರೋಗಿಗೆ ಇರುವುದೂ ಅಷ್ಟೇ ಮುಖ್ಯ. 

ಔಷಧಗಳ ಉಪಯೋಗ, ಪರಿಣಾಮಗಳು ಮತ್ತು ಕ್ರಿಯೆಯ ಆಯಾಮಗಳಿಗೆ ಸಂಬಂಧಿಸಿದಂತಿರುವ ವೈದ್ಯಕೀಯ ವಿಜ್ಞಾನದ ಶಾಖೆಯೇ ಫಾರ್ಮಕೋಲಜಿ. ಫಾರ್ಮಕೊಕಿನೆಟಿಕ್ಸ್‌ ದೇಹವು ಔಷಧಕ್ಕೆ ಸಂಬಂಧಿಸಿದಂತೆ ಏನು ಮಾಡುತ್ತದೆ ಎಂಬುದನ್ನು ವಿವರಿಸುತ್ತದೆ. ಅರ್ಥಾತ್‌; ಔಷಧ ದೇಹದೊಳಕ್ಕೆ ಹೋಗುವುದು, ದೇಹದಲ್ಲಿ ಪ್ರವಹಿಸುವುದು ಮತ್ತು ಹೊರಗೆ ಬರುವುದನ್ನು – ಔಷಧವನ್ನು ಹೀರಿಕೊಳ್ಳುವುದು, ಅದರ ಜೈವಿಕ ಲಭ್ಯತೆ, ವಿತರಣೆ, ಚಯಾಪಚಯ ಮತ್ತು ಹೊರ ಹೋಗುವುದನ್ನು ನಿರ್ದಿಷ್ಟ ಅವಧಿಯೊಂದಿಗೆ ಪ್ರಚುರಪಡಿಸುತ್ತದೆ. 

Advertisement

ಜೈವಿಕ ಲಭ್ಯತೆ: ದೇಹದೊಳಗೆ ಪ್ರವೇಶಿಸಿ, ಪ್ರವಹಿಸುವ ವ್ಯವಸ್ಥೆಯಲ್ಲಿ ಬಂದಾಗ ಇರುವ ಔಷಧದ ಅನುಪಾತ ಮತ್ತು ಅದರ ಪ್ರಭಾವ ಬೀರುವ ಶಕ್ತಿ. 

ವಿತರಣೆ: ದೇಹದೊಳಗಿನ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಔಷಧದ ಬದಲಾವಣೆ ಉಂಟುಮಾಡಬಹುದಾದ ವರ್ಗಾವಣೆ. 

ಹೆಚ್ಚಿನ ಔಷಧಗಳು ಯಕೃತ್ತಿನಲ್ಲಿ ಚಯಾಪಚಯ ಹೊಂದಿ ಕಿಡ್ನಿಯಿಂದಾಗಿ ಹೊರ ಹಾಕಲ್ಪಡುತ್ತವೆ. 
    
ಫಾರ್ಮಾಕೊಡೈನಾಮಿಕ್ಸ್‌    
ಫಾರ್ಮಾಕೊಡೈನಾಮಿಕ್ಸ್‌ ದೇಹಕ್ಕೆ ಔಷಧಗಳ ಪ್ರಭಾವವನ್ನು ವಿಶ್ಲೇಷಿಸುತ್ತವೆ. ಔಷಧದ ಪ್ರತಿಕೂಲ ಪರಿಣಾಮ ಎಂದರೆ ಔಷಧದಿಂದಾಗಿ ದೇಹದ ಮೇಲಾಗುವಂಥ ಹಾನಿ. ಈ ರೀತಿಯ ಪ್ರತಿಕೂಲ ಪರಿಣಾಮಗಳು ಔಷಧವನ್ನು ಒಂದೇ ಡೋಸ್‌ ತೆಗೆದುಕೊಂಡಾಗಲೂ ಸಂಭವಿಸಬಹುದು ಅಥವಾ ದೀರ್ಘ‌ ಕಾಲ ತೆಗೆದು ಕೊಂಡಾಗಲೂ ಸಂಭವಿಸ ಬಹುದು. ಒಂದಕ್ಕಿಂತ ಹೆಚ್ಚು ಔಷಧಗಳ ಸಂಯೋಜನೆ (ಕಾಂಬಿನೇಶನ್‌)ಯಿಂದಲೂ ಇದು ಸಂಭವಿಸಬಹುದಾಗಿದೆ. ಪ್ರತಿಕೂಲ ಪರಿಣಾಮವೆಂದರೆ ಶರೀರಕ್ಕೆ ಹಾನಿ, ಮಾನಸಿಕ ಹಾನಿ ಅಥವಾ ಕ್ರಿಯಾತ್ಮಕತೆ ಸ್ಥಗಿತ. ಚಿಕಿತ್ಸಾ ತಪ್ಪುಗಳೊಂದಿಗೆ ಔಷಧ ಪ್ರತಿಕೂಲ ಪರಿಣಾಮವನ್ನೂ ಹೋಲಿಸಲಾಗುತ್ತದೆ. ಇವು ಶರೀರರದ ಮೇಲೆ ನೇರ ಪರಿಣಾಮ ಬೀರುತ್ತವೆ.

ಅಡ್ಡ ಪರಿಣಾಮಗಳು ತಾತ್ಕಾಲಿಕವಾಗಿದ್ದು ತನ್ನಿಂತಾನೆ ನಿವಾರಣೆಯಾಗುತ್ತವೆ. ಆದರೆ ಪ್ರತಿಕೂಲ ಪರಿಣಾಮಗಳು ದೀರ್ಘ‌ ಕಾಲದ್ದಾಗಿದ್ದು ಇವುಗಳಿಗೆ ವೈದ್ಯಕೀಯ ಹಸ್ತಕ್ಷೇಪದ ಅಗತ್ಯ ಇರುತ್ತದೆ. ಪ್ರತಿಕೂಲ ಪರಿಣಾಮಗಳು ಅನಪೇಕ್ಷಿತವಾಗಿದ್ದು ಹಾನಿಕರವಾಗಿವೆ.

ಅಡ್ಡ ಪರಿಣಾಮಗಳು ಔಷಧದ ಥೆರಪೆಟಿಕ್‌ ಪರಿಣಾಮಗಳಿಗೆ ಸಂಬಂಧಿಸಿದ್ದಾಗಿವೆ. ಪ್ರತಿಕೂಲ ಪರಿಣಾಮಗಳು ಇದಕ್ಕೆ ಸಂಬಂಧಿಸಿದ್ದವುಗಳಲ್ಲ. 

ಎ ವಿಧದ ಪರಿಣಾಮಗಳು
 ಈ ಪರಿಣಾಮಗಳು ಔಷಧ ಪರಿಣಾಮಗಳ ಶೇ. 80ರಷ್ಟನ್ನು ಒಳಗೊಂಡಿವೆ. ಮುಖ್ಯವಾಗಿ ಔಷಧದ ಪ್ರಾಥಮಿಕ ಫಾರ್ಮಕೊಲಾಜಿಕಲ್‌ ಪರಿಣಾಮಗಳನ್ನು ಒಳಗೊಂಡಿವೆ. ಉದಾ: ಆ್ಯಂಟಿಕೋಗ್ಯುಲೆಂಟ್‌ ವಾರಾ#ರಿನ್‌ನ್ನು ತೆಗೆದುಕೊಂಡಾಗ ರಕ್ತ ಬರುವುದು ಅಥವಾ ಔಷಧದ ಕಡಿಮೆ ಥೆರಪೆಟಿಕ್‌ ಇಂಡೆಕ್ಸ್‌ ( ಥೆರಪೆಟಿಕ್‌ ಪರಿಣಾಮಗಳನ್ನು ಉಂಟು ಮಾಡುವುದು ಮತ್ತು ಇದರಿಂದ ಹೊರಗೆ ಟಾಕ್ಸಿಕ್‌ ಪರಿಣಾಮಗಳು ಉಂಟಾಗುವುದು-ಉದಾ: ಡೈಜೊಕ್ಸಿನ್‌ ನಿಂದಾಗುವ ನೌಸಿಯಾ). ಈ ಪರಿಣಾಮಗಳನ್ನು ಊಹಿಸಬಹುದಾಗಿದೆ. 

ಇಡಿಯೋಸಿಂಕ್ರಾಟಿಕ್‌  ಪರಿಣಾಮಗಳು
ಅಥವಾ  ಟೈಪ್‌ ಬಿ ಪರಿಣಾಮಗಳು

 ಈ ರೀತಿಯ ಪರಿಣಾಮಗಳು ಅತಿ ವಿರಳವಾಗಿರುತ್ತವೆ ಮತ್ತು ಇವುಗಳನ್ನು ಊಹಿಸಲು ಆಗುವುದಿಲ್ಲ. ಆದರೆ ಇವುಗಳನ್ನು ಕಾರಣ ಯಾವುದೆಂದು ತಿಳಿಯದ ಇಡಿಯೋಪತಿಕ್‌ ಪರಿಣಾಮ ಎಂಬುದಾಗಿ ತಪ್ಪಾಗಿ ತಿಳಿಯಬಾರದು. ಇವುಗಳು ಔಷಧದದ ಪ್ರಭಾವಕ್ಕೆ ಸಂಬಂಧಿಸಿದಂತೆ ಸ್ವತಂತ್ರವಾಗಿರುವುವುಗಳಾಗಿವೆ.

ಆತ್ಮವಿಶ್ವಾಸವೇ ಪರಮೌಷಧ
ತನ್ನ ರೋಗ ವಾಸಿಯಾಗುತ್ತದೆ ಎಂಬ ದೃಢವಿಶ್ವಾಸ ರೋಗಿ ಹೊಂದಿರುವುದೇ ಆತನ ರೋಗ ವಾಸಿ ಮಾಡುವ ಪರಮೌಷಧವಾಗಿರುತ್ತದೆ. ಜತೆಗೆ ಆತನಿಗಿರುವ ದೇವರ ಮೇಲಿನ ಭಕ್ತಿ (ದೇವರು ತನ್ನ ರೋಗವನ್ನು ವಾಸಿ ಮಾಡುತ್ತಾರೆ ಎಂಬ ನಂಬಿಕೆ), ಔಷಧದ ಮೇಲಿನ ನಂಬಿಕೆ (ಔಷಧವು ತನ್ನ ರೋಗಮುಕ್ತಿಗೆ ಬೇಕಾದ ಸಾಮರ್ಥ್ಯ ಹೊಂದಿದೆ ಎಂಬ ನಂಬಿಕೆ), ವೈದ್ಯರ ಮೇಲಿರುವ ನಂಬಿಕೆ ( ವೈದ್ಯರು ತನ್ನ ರೋಗ ಗುಣ ಮಾಡುತ್ತಾರೆ ಎಂಬ ನಂಬಿಕೆ) ರೋಗ ವಾಸಿಯಾಗುವ ನಿಟ್ಟಿನಲ್ಲಿ ಪ್ರಭಾವಿಸುವ ಅಂಶಗಳು.

ಡ್ರಗ್‌ ಅಲರ್ಜಿ
ಡ್ರಗ್‌ ಅಲರ್ಜಿ ಎಂಬುದು ರೋಗನಿರೋಧಕ ಶಕ್ತಿಯು ಔಷಧಕ್ಕೆ ಸಂಬಂಧಿಸಿದಂತೆ ಒಡ್ಡುವ ಸಾಮಾನ್ಯವಲ್ಲದ ಪ್ರತಿಕ್ರಿಯೆಯಾಗಿದೆ. ಔಷಧಗಳಿಂದ ಅಲರ್ಜಿ ಉಂಟಾಗಬಹುದು. ಕೆಲವೊಂದು ನಿರ್ದಿಷ್ಟ ಔಷಧಗಳಿಂದ ಯಾವ ಅಲರ್ಜಿ ಉಂಟಾಗುತ್ತದೆ ಎಂದು ಸಾಮಾನ್ಯವಾಗಿ ತಿಳಿಯಲಾಗುತ್ತದೆ. ಅಲರ್ಜಿಯ ಸಾಮಾನ್ಯ ಸೂಚಕಗಳೆಂದರೆ ಬೊಕ್ಕೆಗಳು ಉಂಟಾಗುವುದು, ಚರ್ಮದ ಮೇಲೆ ಸುಕ್ಕು ಕಲೆಗಳು ಉಂಟಾಗುವುದು ಅಥವಾ ಜ್ವರ.
 
ಒಂದು ರಾಸಾಯನಿಕವು ಔಷಧವಾಗಿ ಹೇಗೆ ರೋಗ ನಿವಾರಣೆ ಮಾಡುತ್ತದೆ ಎಂಬ ಪ್ರಶ್ನೆ ನಿಮ್ಮನ್ನು ಕಾಣಬಹುದು. ಔಷಧಾಲಯಗಳಲ್ಲಿ ಅಪಾರ ಸಂಖ್ಯೆಯಲ್ಲಿ ಮಾತ್ರೆಗಳು, ಇಂಜೆಕ್ಷನ್‌ಗಳನ್ನು ಕಾಣಬಹುದು. ಒಂದರ್ಥದಲ್ಲಿ ಇವುಗಳನ್ನು ರಾಸಾಯನಿಕಗಳೇ ಎಂದು ಹೇಳಬಹುದು. ಯಾಕೆಂದರೆ ಈ ರಾಸಾಯನಿಕಗಳನ್ನು ಕಾಯಿಲೆ ನಿವಾರಿಸುವ ಔಷಧವನ್ನಾಗಿ ಪರಿವರ್ತಿಸುವುದು ವೈದ್ಯರು ರೋಗಿಯ ಸಮಸ್ಯೆಯನ್ನು ಸರಿಯಾಗಿ ಅರ್ಥೈಸಿ ನಿರ್ಣಯಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಯಾವ ಔಷಧಗಳಿಂದ ವ್ಯಕ್ತಿಯ ರೋಗ ನಿವಾರಣೆಯಾಗುತ್ತದೆ. ರೋಗಿ ಸಹಜ ಸ್ಥಿತಿಗೆ ಬಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ ಎಂಬುದನ್ನು ವೈದ್ಯರು ಸರಿಯಾಗಿ ಅರಿತುಕೊಂಡಿರುವುದರಿಂದಲೇ ಅವರು ಸೂಕ್ತ ಔಷಧಗಳನ್ನು ಸೂಚಿಸಿ ಅವರು ಪರಿಣಾಮಕಾರಿಯಾಗಿ ಗುಣಮುಖರಾಗಲು ಸಾಧ್ಯವಾಗುತ್ತದೆ. ಹಾಗಾಗಿ ವೈದ್ಯರು ರೋಗವನ್ನು ಪತ್ತೆಹಚ್ಚಿ ಸ್ಪಷ್ಟ ನಿರ್ಣಯಕ್ಕೆ ಬರುವುದು ರೋಗಿಗೆ ರಾಸಾಯನಿಕವೊಂದು ಔಷಧವಾಗಿ ಪರಿಣಮಿಸುವ ಬಹುಮುಖ್ಯ ಕಾರಣವಾಗಿದೆ. ವೈದ್ಯರು ಯಾವ ಔಷಧ ನೀಡಬೇಕು ಮತ್ತು ಅದರ ಡೋಸೇಜ್‌ ಎಷ್ಟಿರಬೇಕು ಎಂಬುದನ್ನು ನಿರ್ಣಯಿಸುತ್ತಾರೆ. ಇದು ರೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

– ಮುಂದಿನ ವಾರಕ್ಕೆ 

– ಡಾ| ಪ್ರದೀಪ್‌ ಕುಮಾರ್‌ ಶೆಣೈ ,   
ಕನ್ಸಲ್ಟೆಂಟ್‌ ರುಮೆಟಾಲಜಿ,
ಕೆಎಂಸಿ ಆಸ್ಪತ್ರೆ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next