ಅಯೋಧ್ಯೆ: ಉತ್ತರಪ್ರದೇಶದ ಪವಿತ್ರ ನಗರಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಸಮತಟ್ಟು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದೇವರ, ದೇವತೆಗಳ ಮೂರ್ತಿ, ಕೆತ್ತನೆ ಕಲಾಕೃತಿ ಹಾಗೂ ಶಿವಲಿಂಗ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಅಧಿಕೃತ ಪತ್ರಿಕಾ ಪ್ರಕಟಣೆ ಪ್ರಕಾರ, ಮರಳುಗಲ್ಲಿನಲ್ಲಿ ಕೆತ್ತಿದ ಕೆತ್ತನೆ, ಕಲಾಕೃತಿ, ದೇವರ ವಿಗ್ರಹ ಮತ್ತು 5 ಅಡಿ ಎತ್ತರದ ಶಿವಲಿಂಗ ರಾಮ ಜನ್ಮಭೂಮಿಯ ಆವರಣದಲ್ಲಿ ದೊರಕಿರುವುದಾಗಿ ವಿವರಿಸಿದೆ. ಅಯೋಧ್ಯೆಯ ಆವರಣದಲ್ಲಿ ಕಳೆದ ಹತ್ತು ದಿನಗಳಿಂದ ಕಸಕಡ್ಡಿಗಳನ್ನು ತೆಗೆದು ಸ್ಥಳವನ್ನು ಸಮತಟ್ಟು ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಈ ಸ್ವಚ್ಛತಾ ಕೆಲಸದ ವೇಳೆ ಹಲವು ಪಿಲ್ಲರ್ ಗಳು ಪತ್ತೆಯಾಗಿದೆ ಮತ್ತು ಮರಳುಗಲ್ಲಿನಲ್ಲಿ ದೇವರ ಚಿತ್ರಗಳನ್ನು ಕೆತ್ತಿರುವುದು ಪತ್ತೆಯಾಗಿದೆ. ಕುಬೇರ್ ಟೀಲಾದಲ್ಲಿ ಶಿವಲಿಂಗ ದೊರಕಿದೆ ಎಂದು ಅಯೋಧ್ಯೆಯ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಜನರಲ್ ಸೆಕ್ರೆಟರಿ ಚಂಪತ್ ರಾಯ್ ತಿಳಿಸಿದ್ದಾರೆ.
ಅಯೋಧ್ಯೆಯ ಜಿಲ್ಲಾಡಳಿತ ಅನುಮತಿ ನೀಡಿದ ಬಳಿಕ ಮೇ 11ರಿಂದ ಕೆಲಸ ಆರಂಭಿಸಲಾಗಿತ್ತು, ಅಂದಿನಿಂದ ಈವರೆಗೆ ನಡೆಸಿದ ಉತ್ಖನನದಲ್ಲಿ ಹಲವಾರು ರೀತಿಯ ವಸ್ತುಗಳು ಸಿಕ್ಕಿವೆ. ಕಲ್ಲಿನಲ್ಲಿ ಕೆತ್ತಿದ ಹೂವು, ಕಳಶ, ದೇವತೆಗಳ ಕೆತ್ತನೆ ದೊರಕಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 9ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ರಾಮಮಂದಿರವನ್ನು ನಿರ್ಮಿಸಲು ಅಯೋಧ್ಯೆ ಸ್ಥಳವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿ ನಿರ್ದೇಶನ ನೀಡಿತ್ತು. ಅಲ್ಲದೇ ಐದು ಎಕರೆ ಜಾಗವನ್ನು ಸುನ್ನಿ ವಕ್ಫ್ ಬೋರ್ಡ್ ಗೆ ನೀಡಲು ಸೂಚಿಸಿತ್ತು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 15 ಜನಸ ಸದಸ್ಯರನ್ನೊಳಗೊಂಡ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಿತ್ತು.